ಡೋಕಾ ಲಾ ಅತಿಕ್ರಮಣದಿಂದ ಸಂಬಂಧಕ್ಕೆ ಧಕ್ಕೆ: ಚೀನಾ

Update: 2017-12-12 16:22 GMT

ಬೀಜಿಂಗ್, ಡಿ. 12: ಡೋಕಾ ಲಾದಲ್ಲಿ ಭಾರತ ಮತ್ತು ಚೀನೀ ಪಡೆಗಳ ನಡುವೆ ಈ ವರ್ಷದ ಮಧ್ಯಭಾಗದಲ್ಲಿ ಏರ್ಪಟ್ಟ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಿದೆ ಹಾಗೂ ಪರಸ್ಪರ ವಿಶ್ವಾಸ ವೃದ್ಧಿಗಾಗಿ ಕಳೆದ ವರ್ಷ ನಡೆಸಲಾದ ಪ್ರಯತ್ನಗಳು ‘ಹೆಚ್ಚೇನೂ ತೃಪ್ತಿಕರ’ವಾಗಿರಲಿಲ್ಲ ಎಂದು ಚೀನಾ ವಿದೇಶ ಸಚಿವಾಲಯ ಮಂಗಳವಾರ ಹೇಳಿದೆ.

ಚೀನಾ ವಿದೇಶ ಸಚಿವ ಯಿ ವಾಂಗ್ ಸೋಮವಾರ ಭಾರತದ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರನ್ನು ಹೊಸದಿಲ್ಲಿಯಲ್ಲಿ ಭೇಟಿಯಾದ ಒಂದು ದಿನದ ಬಳಿಕ ಚೀನಾ ವಿದೇಶ ಸಚಿವಾಲಯದ ಈ ಹೇಳಿಕೆ ಹೊರಬಿದ್ದಿದೆ.

ಡೋಕಾ ಲಾ ಬಿಕ್ಕಟ್ಟಿನ ಬಳಿಕ ಚೀನಾ ಮತ್ತು ಭಾರತದ ನಡುವಿನ ಉನ್ನತ ಮಟ್ಟದ ಭೇಟಿ ಇದಾಗಿದೆ.

‘‘2017ರಲ್ಲಿ ಭಾರತ ಮತ್ತು ಚೀನಾಗಳ ನಡುವಿನ ಸಂಬಂಧವು ತನ್ನ ವೇಗವನ್ನು ಉಳಿಸಿಕೊಂಡಿದೆ. ಉಭಯ ಬಣಗಳೂ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿವೆ. ಆದರೆ, ಈ ಪ್ರಯತ್ನಗಳು ಹೆಚ್ಚೇನೂ ತೃಪ್ತಿಕರವಾಗಿರಲಿಲ್ಲ’’ ಎಂದು ಚೀನಾ ವಿದೇಶ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

‘‘ಭಾರತೀಯ ಗಡಿ ಪಡೆಗಳ ಗಡಿ ಉಲ್ಲಂಘನೆಯಿಂದ ಉಂಟಾದ ದುರ್ಭಾವನೆಯು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಹೆಚ್ಚಿನ ಒತ್ತಡವನ್ನು ಸೃಷ್ಟಿಸಿತು. ರಾಜತಾಂತ್ರಿಕ ವಿಧಾನಗಳ ಮೂಲಕ ಈ ಬಿಕ್ಕಟ್ಟನ್ನು ಅಂತಿಮವಾಗಿ ಶಾಂತಿಯುತವಾಗಿ ನಿವಾರಿಸಲಾಯಿತು. ಇದು ಪಕ್ವ ದ್ವಿಪಕ್ಷೀಯ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ’’ ಎಂದು ಅದು ಹೇಳಿದೆ.

‘‘ಆದಾಗ್ಯೂ, ಇದರಿಂದ ಪಾಠ ಕಲಿಯಬೇಕು ಹಾಗೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು’’ ಎಂದು ಅದು ಹೇಳಿದೆ. ಇದನ್ನು ಎಚ್ಚರಿಕೆ ಎಂಬುದಾಗಿ ಪರಿಗಣಿಸಲಾಗಿದೆ.

ಭೂತಾನ್ ಪರವಾಗಿ ಕಾರ್ಯಾಚರಿಸಿದ್ದ ಭಾರತ

ಡೋಕಾ ಲಾದಲ್ಲಿ ಚೀನಾ ನಿರ್ಮಿಸುತ್ತಿದ್ದ ರಸ್ತೆ ವಿವಾದಕ್ಕೆ ಕಾರಣವಾಗಿತ್ತು. ಡೋಕಾಲ ಚೀನಾದ ನಿಯಂತ್ರಣದಲ್ಲಿದೆ. ಅದೇ ವೇಳೆ, ಅದು ತನಗೆ ಸೇರಿದ್ದೆಂದು ಭೂತಾನ್ ಕೂಡ ಹೇಳಿಕೊಳ್ಳುತ್ತಿದೆ. ಇದು ತನಗೆ ಸೇರಿದ್ದೆಂದು ಭಾರತ ಹೇಳುವುದಿಲ್ಲವಾದರೂ, ಅದು ಭೂತಾನ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ಭಾರತವು ಭೂತಾನ್ ಪರವಾಗಿ ಡೋಕಾ ಲಾದಲ್ಲಿ ನುಗ್ಗಿ ಚೀನಾದ ರಸ್ತೆ ನಿರ್ಮಾಣವನ್ನು ತಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News