ಡಿ.13: ಭಾರತ-ಲಂಕಾ 2ನೇ ಏಕದಿನ ಪಂದ್ಯ

Update: 2017-12-12 18:05 GMT

ಮೊಹಾಲಿ, ಡಿ.12: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾಕ್ಕೆ ಮೊಹಾಲಿಯಲ್ಲಿ ಬುಧವಾರ ನಡೆಯಲಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿದೆ.

ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಸೋತರೆ ಸರಣಿ ಶ್ರೀಲಂಕಾದ ಮಡಿಲಿಗೆ ಜಾರಲಿದೆ. ಈ ಕಾರಣದಿಂದಾಗಿ ಸರಣಿ ಗೆಲ್ಲಲು ಉಳಿದಿರುವ ಎರಡು ಪಂದ್ಯಗಳಲ್ಲೂ ಭಾರತ ಜಯ ಗಳಿಸಲೇಬೇಕಾಗಿದೆ.

ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಟೀಮ್ ಇಂಡಿಯಾಕ್ಕೆ ಆಘಾತ ನೀಡಿದೆ. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದ ರೋಹಿತ್ ಶರ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕಾಂಗಿ ಹೋರಾಟದ ಮೂಲಕ 65 ರನ್‌ಗಳ ಕಾಣಿಕೆ ನೀಡಿ ತಂಡದ ಮಾನ ಕಾಪಾಡಿದ್ದರು.

ಚಂಡಿಗಡದ ಮೊಹಾಲಿಯಲ್ಲಿ ಧರ್ಮಶಾಲಾದಲ್ಲಿದ್ದಷ್ಟು ಚಳಿ ಇಲ್ಲ. ಹೀಗಿದ್ದರೂ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗುತ್ತದೆ. ವೇಗಿಗಳು ಮೊದಲ ಪಂದ್ಯದಲ್ಲಿ ನೀಡಿದಂತೆ ಈ ಪಂದ್ಯದಲ್ಲೂ ಪ್ರಹಾರ ನಡೆಸುವುದನ್ನು ನಿರೀಕ್ಷಿಸಲಾಗಿದೆ.

ಹಲವು ಸಮಯದ ಬಳಿಕ ಟೀಮ್ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಸವಾಲು ಎದುರಾಗಿದೆ. ಕಳೆದ ಪಂದ್ಯದಲ್ಲಿ ಅಗ್ರ ಸರದಿಯ ದಾಂಡಿಗರಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಬೇಗನೇ ಬ್ಯಾಟಿಂಗ್ ಮುಗಿಸಿದ್ದರು. ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ ಮತ್ತು ಮನೀಷ್ ಪಾಂಡೆಗೆ ಉತ್ತಮ ಅವಕಾಶ ಲಭಿಸಿದ್ದರೂ ಅದರ ಸದುಪಯೋಗ ಮಾಡುವ ಕಡೆಗೆ ಗಮನ ಹರಿಸಲಿಲ್ಲ. ಕೆಟ್ಟ ಹೊಡೆತಗಳಿಗೆ ಯತ್ನಿಸಿ ಬೇಗನೆ ಪೆವಿಲಿಯನ್ ಸೇರಿದರು.

 ಮೊದಲ ಪಂದ್ಯದಲ್ಲಿ ಧೋನಿ ಹೋರಾಟ ನಡೆಸದೆ ಇರುತ್ತಿದ್ದರೆ ತಂಡ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟಾಗುವ ಸಾಧ್ಯತೆ ಇತ್ತು. ನಾಯಕ ವಿರಾಟ್ ಕೊಹ್ಲಿ ಅವರು ವಿವಾಹದ ಕಾರಣದಿಂದಾಗಿ ತಂಡದಿಂದ ದೂರ ಉಳಿದ ಬೆನ್ನಲ್ಲೇ ನಡೆದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ.

   ಧರ್ಮಶಾಲಾದಲ್ಲಿ ಹೀನಾಯ ಸೋಲಿನಿಂದ ಆಘಾತಗೊಂಡಿರುವ ನಾಯಕ ರೋಹಿತ್ ಶರ್ಮ ಎರಡನೇ ಪಂದ್ಯದಲ್ಲಿ ಸೇಡು ತೀರಿಸಲು ಚಿಂತನೆ ನಡೆಸುತ್ತಿದ್ದಾರೆ. ಅಜಿಂಕ್ಯ ರಹಾನೆ ಸರಣಿಯ ಆರಂಭಿಕ ಪಂದ್ಯದಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಎರಡನೇ ಪಂದ್ಯದಲ್ಲಿ ಅವರು ಆಡುವುದನ್ನು ನಿರೀಕ್ಷಿಸಲಾಗಿದೆ. ಅವರು ಆಡಿರುವ 84 ಪಂದ್ಯಗಳ ಪೈಕಿ ಕೆಲವು ಪಂದ್ಯಗಳಲ್ಲಿ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಬ್ಯಾಟಿಂಗ್‌ನಂತೆ ಭಾರತದ ಬೌಲಿಂಗ್ ವಿಭಾಗದಲ್ಲೂ ದೌರ್ಬಲ್ಯ ಕಂಡು ಬಂದಿದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಕಳಪೆಯಾಗಿತ್ತು. ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಗೆ ಬೌಲಿಂಗ್ ಆಲ್‌ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ. ಈ ಕಾರಣದಿಂದಾಗಿ ಅವರು ಆಟದಲ್ಲಿ ಸುಧಾರಣೆ ತರಬೇಕಾಗಿದೆ.

ಶ್ರೀಲಂಕಾ 20.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತ್ತು. ಈ ಕಾರಣದಿಂದಾಗಿ ಯಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ಬೌಲಿಂಗ್ ನಡೆಸಿರಲಿಲ್ಲ. ಶ್ರೀಲಂಕಾ ತಂಡದ ಲಕ್ಮಲ್ ಅವರ ಪ್ರಹಾರಕ್ಕೆ ಟೀಮ್ ಇಂಡಿಯಾದ ಬ್ಯಾಟಿಂಗ್ ತತ್ತರಿಸಿತ್ತು. ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಬೌಲಿಂಗ್‌ನಲ್ಲಿ ಮತ್ತೆ ಮಿಂಚಿದ್ದಾರೆ. ವೇಗಿ ನುವಾನ್ ಪ್ರದೀಪ್ ಕಳೆದ ಪಂದ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ 112 ರನ್‌ಗಳಿಗೆ ಇನಿಂಗ್ಸ್ ಮುಗಿಸಿತ್ತು. ಒಂದು ವೇಳೆ ಈ ಮೊತ್ತಕ್ಕೆ ಇನ್ನೂ 70ರಿಂದ 80 ರನ್ ಸೇರಿಸಿದ್ದರೆ ಲಂಕೆಗೆ ಗೆಲುವಿನ ದಡ ಸೇರಲು ಸಾಧ್ಯವಿರಲಿಲ್ಲ ಎಂದು ಪಂದ್ಯದ ಬಳಿಕ ಭಾರತ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮ ಹೇಳಿದ್ದರು.

►ಭಾರತ: ರೋಹಿತ್ ಶರ್ಮ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ,ದಿನೇಶ್ ಕಾರ್ತಿಕ್, ವಾಶಿಂಗ್ಟನ್ ಸುಂದರ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಸಿದ್ದಾರ್ಥ ಕೌಲ್.

►ಶ್ರೀಲಂಕಾ : ತಿಸ್ಸರಾ ಪೆರೆರಾ(ನಾಯಕ), ಉಪುಲ್ ತರಂಗ, ಧನುಷ್ಕ ಗುಣತಿಲಕ, ಲಹಿರು ತಿರಿಮನ್ನೆ, ಆ್ಯಂಜೆಲೊ ಮ್ಯಾಥ್ಯೂಸ್, ಅಸೆಲಾ ಗುಣರತ್ನೆ, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಚತುರಂಗ ಡಿ ಸಿಲ್ವ, ಅಖಿಲ್ ಧನಂಜಯ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ಸದೀರ ಸಮರವಿಕ್ರಮ, ಧನಂಜಯ ಡಿ ಸಿಲ್ವ, ದುಶ್ಮಂತ ಚಮೀರಾ, ಸಚಿತ ಪಥಿರಣ, ಕುಸಾಲ್ ಪೆರೇರಾ.

ಪಿಚ್ ಪರಿಸ್ಥಿತಿ

ಮೊ ಹಾಲಿಯ ಪಿಚ್ ವೇಗದ ಬೌಲರ್‌ಗಳ ಸ್ನೇಹಿಯಾಗಿದೆ. ಕಳೆದ ವರ್ಷ (ಅ.23, 2016) ಇಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವೇಗದ ಬೌಲರ್‌ಗಳು 13 ವಿಕೆಟ್‌ಗಳನ್ನು ಉಡಾಯಿಸಿದ್ದರು. ಭಾರತ 286 ರನ್‌ಗಳ ಗೆಲುವಿನ ಸವಾಲನ್ನು ಬೆನ್ನಟ್ಟಿ 3 ವಿಕೆಟ್ ನಷ್ಟದಲ್ಲಿ 289 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತ್ತು. ವಿರಾಟ್ ಕೊಹ್ಲಿ ಔಟಾಗದೆ 154 ರನ್ ಮತ್ತು ಎಂ.ಎಸ್.ಧೋನಿ 80 ರನ್ ಗಳಿಸಿದ್ದರು.

ಪಂದ್ಯದ ಸಮಯ: ಬೆಳಗ್ಗೆ 11:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News