ಕೋಲ್ಕತಾದಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತ ಡಿಯಾಗೊ ಮರಡೋನ

Update: 2017-12-12 18:13 GMT

ಕೋಲ್ಕತಾ, ಡಿ.12: ಅರ್ಜೆಂಟೀನದ ಫುಟ್ಬಾಲ್ ದಂತಕತೆ ಡಿಯಾಗೊ ಮರಡೋನ ಕೋಲ್ಕತಾ ಪ್ರವಾಸ ಕೈಗೊಂಡಿದ್ದು, ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತರು.

ಕೋಲ್ಕತಾದಿಂದ 35 ಕಿ.ಮೀ. ದೂರದ ಕಡಂಬಗಾಚಿಯ ಬರಾಸತ್‌ನಲ್ಲಿ ಖಾಸಗಿ ಕ್ರೀಡಾ ಅಕಾಡಮಿಯು ಮಂಗಳವಾರ ಸಂಜೆ ಸುಮಾರು 60 ಶಾಲಾ ಮಕ್ಕಳೊಂದಿಗೆ ಕಾರ್ಯಾಗಾರ ಏರ್ಪಡಿಸಿದ್ದು, ಈ ಕಾರ್ಯಾಗಾರದಲ್ಲಿ ಭಾಗವಹಿಸಿದ 57ರ ಹರೆಯದ ಮರಡೋನ ಪ್ರತಿಕ್ಷಣವನ್ನು ಮಕ್ಕಳೊಂದಿಗೆ ಆನಂದಿಸಿದರು. ಮೂರು ನಿಮಿಷ ಕಾಲ ಸ್ಪಾನಿಶ್ ಭಾಷೆಯಲ್ಲಿ ಭಾಷಣ ಮಾಡಿದರು.

 ‘‘ನಾನು ಇಲ್ಲಿಗೆ ಫುಟ್ಬಾಲ್‌ಗೋಸ್ಕರ ಬಂದಿದ್ದೇನೆ. ಭಾರತದಲ್ಲಿ ಫುಟ್ಬಾಲ್ ಬೆಳೆಸಲು ಸಚಿವರು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಭಾರತದಲ್ಲಿ ಉತ್ತಮ ಆಟಗಾರರಿದ್ದಾರೆ. ಭಾರತದಲ್ಲಿ ನನಗೆ ಯಾವಾಗಲೂ ಉತ್ತಮ ಸ್ವಾಗತ ಲಭಿಸುತ್ತದೆ. ಎಲ್ಲರಿಗೂ ನನ್ನ ಅಭಿನಂದನೆಗಳು’’ ಎಂದು ಮರಡೋನ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಶಾಸಕ ಸುಜಿತ್ ಬೋಸ್ ಸಹಿತ ಇತರರ ಪ್ರಾಯೋಜಕತ್ವದಲ್ಲಿ ಮರಡೋನ ಮೂರು ದಿನಗಳ ಕಾಲ ಭಾರತಕ್ಕೆ ಖಾಸಗಿ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ಅವರ ಪ್ರವಾಸ ಕೊನೆಗೊಳ್ಳಲಿದೆ. ಕೋಲ್ಕತಾದ ಆಹ್ವಾನದ ಮೇರೆಗೆ 9 ವರ್ಷಗಳ ಬಳಿಕ ಭಾರತಕ್ಕೆ ಎರಡನೇ ಬಾರಿ ಭೇಟಿ ನೀಡಿರುವ ಮರಡೋನ ಉತ್ತರ ಕೋಲ್ಕತಾ ಕ್ಲಬ್‌ನಲ್ಲಿ ಹಲವು ಚಾರಿಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಮರಡೋನರನ್ನು ನೋಡಲು ಮುಗಿಬಿದ್ದರು. ಮರಡೋನ 11 ಕ್ಯಾನ್ಸರ್ ಪೀಡಿತ ರೋಗಿಗಳಿಗೆ ತಲಾ 10,000 ರೂ. ನೀಡಿದರು. ಏರ್‌ಕಂಡೀಶನ್ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿದರು.

1986ರ ವಿಶ್ವಕಪ್‌ನ್ನು ಎತ್ತಿಹಿಡಿದಿರುವುದನ್ನು ಹೋಲುವ 12 ಅಡಿ ಎತ್ತರದ ತನ್ನದೇ ಪ್ರತಿಮೆಯನ್ನು ಮರಡೋನ ಅನಾವರಣಗೊಳಿಸಿದರು. ಮರಡೋನ ಹೆಸರಿನ ಪಾರ್ಕ್‌ನಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ.

ಫುಟ್ಬಾಲ್ ಕಾರ್ಯಾಗಾರದಲ್ಲಿ ಶಾಲಾ ಮಕ್ಕಳು ಮರಡೋನ ಧರಿಸುತ್ತಿದ್ದ 10 ಸಂಖ್ಯೆಯ ಜರ್ಸಿಯನ್ನು ಧರಿಸಿದ್ದರು. 7,000ಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ಮರಡೋನ ತನ್ನ ಫುಟ್ಬಾಲ್ ಕೌಶಲ್ಯವನ್ನು ಪ್ರದರ್ಶಿಸಿ ಎಲ್ಲರನ್ನು ರಂಜಿಸಿದರು. ಕಾರ್ಯಾಗಾರ ಮಧ್ಯಾಹ್ನ 1:15ಕ್ಕೆ ಆರಂಭವಾಗಿದ್ದು, ಮಾಜಿ ಫುಟ್ಬಾಲ್ ಆಟಗಾರರಾದ ಶ್ಯಾಂ ಥಾಪ, ದಬ್ಜಿತ್ ಘೋಷ್, ಶಿಶಿರ್ ಘೋಷ್ ಸಹಿತ ಹಲವು ಭಾಗವಹಿಸಿದ್ದರು.

 ಮರಡೋನ 2008ರಲ್ಲಿ ಬಳಿಕ ಎರಡನೇ ಬಾರಿ ಕೋಲ್ಕತಾಕ್ಕೆ ಆಗಮಿಸಿದ್ದಾರೆ. ಮರಡೋನ ಸೆ.19ಕ್ಕೆ ಕೋಲ್ಕತಾಕ್ಕೆ ಬರಬೇಕಾಗಿತ್ತು. ಆದರೆ, ಮಹಾಲಯ ಹಾಗೂ ದುರ್ಗಾ ಪೂಜಾ ಉತ್ಸವ ಹಿನ್ನೆಲೆಯಲ್ಲಿ ಮರಡೋನ ಅವರ ಭಾರತ ಭೇಟಿಯನ್ನು ಹಲವು ಬಾರಿ ಮುಂದೂಡಲ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News