ಟೆಸ್ಟ್ ಸರಣಿ: ವಿಂಡೀಸ್ ವಿರುದ್ಧ ಕ್ಲೀನ್‌ ಸ್ವೀಪ್ ಸಾಧಿಸಿದ ಕಿವೀಸ್

Update: 2017-12-12 18:21 GMT

ವೆಲ್ಲಿಂಗ್ಟನ್, ಡಿ.12: ಎರಡನೇ ಟೆಸ್ಟ್‌ನಲ್ಲಿ ಆತಿಥೇಯ ನ್ಯೂಝಿಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ 240 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.

 ಸೆಡ್ಡಾನ್ ಪಾರ್ಕ್‌ನಲ್ಲಿ 4ನೇ ದಿನವಾದ ಮಂಗಳವಾರ ಟೀ ವಿರಾಮಕ್ಕೆ ಮೊದಲೇ ಕಿವೀಸ್ ಗೆಲುವಿನ ಜಯಭೇರಿ ಬಾರಿಸಿತು. ಸತತ ಎಸೆತಗಳಲ್ಲಿ ವಿಕೆಟ್‌ಗಳನ್ನು ಕಬಳಿಸಿದ ಮಿಚೆಲ್ ಸ್ಯಾಂಟ್ನರ್ ಪ್ರವಾಸಿ ವಿಂಡೀಸ್ ತಂಡದ ಎರಡನೇ ಇನಿಂಗ್ಸ್‌ನ್ನು 9 ವಿಕೆಟ್ ನಷ್ಟಕ್ಕೆ 203 ರನ್‌ಗೆ ನಿಯಂತ್ರಿಸಿದರು. ಸುನೀಲ್ ಆಂಬ್ರಿಸ್ ವೇಗಿ ನೀಲ್ ವಾಗ್ನರ್ ಎಸೆತದಲ್ಲಿ ಕೈ ಮುರಿತಕ್ಕೆ ಒಳಗಾಗಿ ಗಾಯಗೊಂಡು ನಿವೃತ್ತಿಯಾದ ಕಾರಣ ಆತಿಥೇಯಕಿವೀಸ್‌ಗೆ ಎಲ್ಲ 10 ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ. ವಿಂಡೀಸ್ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ 444 ರನ್ ಗುರಿ ಪಡೆದಿತ್ತು. 2 ವಿಕೆಟ್‌ಗಳ ನಷ್ಟಕ್ಕೆ 30 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ವಿಂಡೀಸ್ ಯಾವ ಹಂತದಲ್ಲೂ ಪ್ರತಿ ಹೋರಾಟ ನೀಡಲಿಲ್ಲ.

ವಿಂಡೀಸ್‌ನ ಪರ ಮಧ್ಯಮ ಕ್ರಮಾಂಕದ ಆಟಗಾರ ರೊಸ್ಟನ್ ಚೇಸ್(64 ರನ್) ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ. ಕೇಮರ್ ರೋಚ್(32), ರೇಮನ್ ರೆಫೆರ್(29), ಶೈ ಹೋಪ್(23) ಹಾಗೂ ಕ್ರೆಗ್ ಬ್ರಾತ್ ವೇಟ್(20)ಎರಡಂಕೆ ಸ್ಕೋರ್ ದಾಖಲಿಸಿದರು.

ಕಿವೀಸ್ ಬೌಲಿಂಗ್ ವಿಭಾಗದಲ್ಲಿ ನೀಲ್ ವ್ಯಾಗ್ನರ್(3-42) ಯಶಸ್ವಿ ಬೌಲರ್ ಎನಿಸಿಕೊಂಡರು. ಟಿಮ್ ಸೌಥಿ(2-71), ಟ್ರೆಂಟ್ ಬೌಲ್ಟ್(2-52) ಹಾಗೂ ಮಿಚೆಲ್ ಸ್ಯಾಂಟ್ನರ್(2-12) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಬ್ರಾತ್‌ವೇಟ್ ವಿಕೆಟ್ ಕಬಳಿಸಿದ ಟ್ರೆಂಟ್ ಬೌಲ್ಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರೈಸಿದ ಕಿವೀಸ್‌ನ 6ನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ನ್ಯೂಝಿಲೆಂಡ್ ಪರ 2ನೇ ಇನಿಂಗ್ಸ್‌ನಲ್ಲಿ 17ನೇ ಶತಕ(ಅಜೇಯ 107) ಸಿಡಿಸಿದ್ದ ರಾಸ್ ಟೇಲರ್ ಮಾಜಿ ಆಟಗಾರ ಮಾರ್ಟಿನ್ ಕ್ರೋವ್ ಸಾಧನೆಯನ್ನು ಸರಿಗಟ್ಟಿದರು. ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್

►ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 373

►ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 221

►ನ್ಯೂಝಿಲೆಂಡ್ ಎರಡನೇ ಇನಿಂಗ್ಸ್: 291

►ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್: 203/9 (ರೋಸ್ಟನ್ ಚೇಸ್ 64, ಕೆಮರ್ ರೋಚ್ 32, ರೇಮನ್ ರೆಫೆರ್ 29, ನೀಲ್ ವ್ಯಾಗ್ನರ್ 3-42, ಟ್ರೆಂಟ್ ಬೌಲ್ಟ್ 2-52, ಸೌಥಿ 2-71, ಸ್ಯಾಂಟ್ನರ್ 2-13)

ವ್ಯಾಗ್ನರ್ ಬೌನ್ಸರ್ ಗೆ ಆ್ಯಂಬ್ರಿಸ್ ಕೈಗೆ ಪೆಟ್ಟು

ವೆಸ್ಟ್‌ಇಂಡೀಸ್ ಬ್ಯಾಟ್ಸ್‌ಮನ್ ಸುನೀಲ್ ಆ್ಯಂಬ್ರಿಸ್ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ವೇಳೆ ಕೈ ಮುರಿತಕ್ಕೆ ಒಳಗಾಗಿದ್ದು, ಮುಂಬರುವ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

‘‘ಕಿವೀಸ್ ವೇಗದ ಬೌಲರ್ ವ್ಯಾಗ್ನರ್ ಎಸೆದ ಬೌನ್ಸರ್ ಎಸೆತ ಸುನೀಲ್ ಕೈಗೆ ತಾಗಿ ಮೂಳೆ ಮುರಿದುಹೋಗಿದೆ. ಸುನೀಲ್‌ಗೆ ಆಸ್ಪತ್ರೆಯಲ್ಲಿ ಎಕ್ಸ್ ರೇ ನಡೆಸಲಾಗಿದ್ದು ಕೈ ಬಿರುಕುಬಿಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಅವರು ಮುಂಬರುವ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ’’ಎಂದು ತಂಡದ ವಕ್ತಾರ ಹೇಳಿದ್ದಾರೆ.

ಸುನೀಲ್ ನ್ಯೂಝಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಹಿಟ್‌ವಿಕೆಟ್‌ನಿಂದಾಗಿ ವಿಕೆಟ್ ಒಪ್ಪಿಸಿದ್ದರು. ಚೊಚ್ಚಲ ಪಂದ್ಯದಲ್ಲಿ ಹಿಟ್‌ವಿಕೆಟ್‌ಗೆ ಔಟಾದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಹಿಟ್ ವಿಕೆಟ್‌ಗೆ ಒಳಗಾಗಿದ್ದರು. ಸತತ ಎರಡು ಟೆಸ್ಟ್ ಗಳಲ್ಲಿ ಹಿಟ್ ವಿಕೆಟ್‌ಗೆ ಒಳಗಾದ ಮೊದಲ ಆಟಗಾರ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News