ರಾಜಕೀಯ ನಾಯಕರ ಕೈಗೊಂಬೆಗಳಾಗುತ್ತಿರುವ ದೇವರು!

Update: 2017-12-12 18:49 GMT

ಮಾನ್ಯರೇ,

ಕರ್ನಾಟಕದಲ್ಲಿ ಹಿಂದೆ ಓಟಿಗಾಗಿ ರಾಮನ ಜಪ ಮಾಡಿದವರು ಈಗ ಮತ್ತೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಮನ ಭಕ್ತ ಹನುಮನ ಜಪ ಮಾಡುತ್ತಿದ್ದಾರೆ. ದೇವಾಲಯಗಳಲ್ಲಿ ನೆಮ್ಮದಿಯಲ್ಲಿದ್ದ ದೇವರುಗಳು ಚುನಾವಣೆ ಹತ್ತಿರ ಬರುತ್ತಿರುವಾಗ ಬೀದಿಗೆ ಬರುತ್ತಿದ್ದಾರೆ.
ದೇಶದಲ್ಲಿ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಜಾಗೃತಿ ಮೂಡಿಸಿ ಸಾರ್ವಜನಿಕರನ್ನು ಸಂಘಟಿಸುವ ಸಲುವಾಗಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವಗಳನ್ನು ಆಚರಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿದರು. ಅದು ಒಳ್ಳೆಯ ಉದ್ದೇಶವಾಗಿತ್ತು. ಆದರೆ ಇಂದು ದೇವರ ನೆಪದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳೆಲ್ಲಾ ಬಹುತೇಕ ರಾಜಕೀಯ ಕಾರ್ಯಕ್ರಮಗಳಾಗಿವೆ. ದೇವರ ಮೂರ್ತಿಗಳೆಲ್ಲಾ ರಾಜಕೀಯ ನಾಯಕರ ಕೈಗೊಂಬೆಗಳಾಗುತ್ತಿವೆ. ದೇವರ ಹೆಸರಿನಲ್ಲಿ ಸಮಾಜವನ್ನು ಒಡೆದು ಮತವನ್ನಾಗಿ ಪರಿವರ್ತಿಸಲು ರಾಜಕೀಯ ನಾಯಕರು ಹೊಂಚು ಹಾಕುತ್ತಿದ್ದಾರೆ.
ರಾಜಕಾರಣಿಗಳು ಪ್ರಾಮಾಣಿಕರಾಗಿ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರೆ ಇಂತಹ ನಾಟಕಗಳು ಬೇಕಿರಲಿಲ್ಲ. ಆದ್ದರಿಂದ ರಾಜ್ಯದ ಜನತೆ ಇನ್ನಾದರೂ ಇಂತಹವರ ಸಂಚನ್ನು ಅರಿತುಕೊಂಡು ಜಾಗೃತರಾಗಬೇಕಾಗಿದೆ. ರಾಜ್ಯದ ನೆಮ್ಮದಿಗೆ ಭಂಗ ತರುವ ರಾಜಕಾರಣಿಗಳ ಆಟಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ.

Similar News