ವಿದ್ಯೆಯೇಕೆ ವಿನಯ ಬೆಳೆಸಲಿಲ್ಲ?

Update: 2017-12-12 18:53 GMT

ಶಿಕ್ಷಣ ಸ್ವಾವಲಂಬೀ ಸ್ವಾಭಿಮಾನವನ್ನು ಬೆಳೆಸುತ್ತದೆ. ಇನ್ನೊಂದು ಮುಖದಲ್ಲಿ ಅದೇ ಸ್ವಾವಲಂಬೀ ಸ್ವಾಭಿಮಾನವನ್ನು ಬಲಿ ತೆಗೆದುಕೊಳ್ಳುತ್ತದೆ. ಭಾಷೆ, ಉಡುಗೆ - ತೊಡುಗೆ, ಮಾತು, ಹಾವ ಭಾವ, ಸಾಮಾಜಿಕ ಸಂಬಂಧಗಳು ಎಲ್ಲವನ್ನೂ ಪಡೆದ ಶಿಕ್ಷಣದಿಂದಲೇ ಅಳೆಯಲು ಆರಂಭಿಸಿದಾಗ ಅಶಿಕ್ಷಿತರು, ಶಿಕ್ಷಣ ವಂಚಿತರು ಇದೇ ಸಮಾಜದ ಶಾಶ್ವತ ನಿರ್ಲಕ್ಷ್ಯಕ್ಕೆ ಒಳಗಾದರು. ಇದು ದೇಶದ ದುರಂತ. ಸಾಮಾಜಿಕ ಸ್ಥಿತಿಗತಿಯನ್ನು, ಅಭಿವೃದ್ಧಿಯನ್ನು, ಬದುಕಿನ ಬಗೆಯನ್ನು, ಜ್ಞಾನಾರ್ಜನೆಯ ಮಟ್ಟವನ್ನು ಹಾಗೂ ಪ್ರಗತಿಯನ್ನು ವಿದ್ಯೆಯಿಂದಲೇ ಬದಲಾಯಿಸಲು ಸಾಧ್ಯ ಎಂಬುದನ್ನು ಈ ಸಮಾಜ ಒಪ್ಪಿಕೊಂಡಿದೆಯಾದರೂ ನಾಗರಿಕ ಸಮಾಜ ಈ ಅವಿದ್ಯಾವಂತರನ್ನು ಅಸ್ಪೃಶ್ಯ ಭಾವದಿಂದ ನೋಡಿದ್ದು ಸತ್ಯ. ಒಂದು ದೊಡ್ಡ ಕಂದಕ ಇವರೀರ್ವರ ಮಧ್ಯೆ ಬೆಳೆಯುತ್ತಲೇ ಇದೆ. ಇದಕ್ಕೆ ಕಾರಣ ವಿದ್ಯಾವಂತರೇ ಹೊರತು ಅವಿದ್ಯಾವಂತರಲ್ಲ. ಅವಿದ್ಯಾವಂತರಿಗೆ ಇವೆಲ್ಲ ಅರ್ಥವಾಗದ ಸಂಗತಿಗಳು. ತಾವಾಯಿತು, ತಮ್ಮ ಪಾಡಾಯಿತು ಅಂತ ಬದುಕುವವರಿಗೆ ಈ ಬಗೆಯ ಭಾವ ಹೇಗೆ ಹುಟ್ಟಲು ಸಾಧ್ಯ ಹೇಳಿ? ಎಲ್ಲವನ್ನೂ ಜ್ಞಾನದ ಮಾನದಂಡದಿಂದಲೇ, ಬುದ್ಧಿಯ ತರ್ಕದಿಂದಲೇ ನಡೆದುಬಿಟ್ಟರೆ ಮಾನವೀಯತೆಗೆಲ್ಲಿ ಆಸ್ಪದವಿದ್ದೀತು? ಏನೂ ಓದದ ನಮ್ಮ ಹಿರಿಯರು ನಮಗೆ ಬುದ್ಧಿ ಬೋಧೆ ಮಾಡಲಿಲ್ಲವೇ? ಅವರು ಓದಿಲ್ಲವೆಂದು ತುಚ್ಛವಾಗಿ ಕಂಡರೆ, ಅವಮಾನಿಸಿದರೆ ನಾವು ಕಲಿತ ವಿದ್ಯೆಗೆ ಯಾವ ಬೆಲೆ ಬಂದೀತು? ಆಧುನಿಕತೆ ಕೂಡ ವಿದ್ಯೆಯ ಕೊಡುಗೆ. ಕಲಿತ ವಿದ್ಯೆಯಿಂದಲೇ ಜನ್ಯವಾದ ಇದು ಎಲ್ಲ ಬಗೆಯ ಅಧಃಪತನಕ್ಕೆ ಹೇತುವಾಗಿಬಿಟ್ಟಿದೆ. ಯಾವ ಶಿಕ್ಷಣ ನಮ್ಮನ್ನು ಸಂಸ್ಕರಿಸಬೇಕಿತ್ತೋ ಅದೇ ಇಂದು ಸಂತೆಯಲ್ಲಿ ಮಾರುವ ಸರಕಿನಂತಾಗಿದೆ.

ಇದಕ್ಕೆ ಕಾರಣ ವಿದ್ಯಾವಂತರೇ! ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಲೇ ಶಿಕ್ಷಣವನ್ನು ಹಣಕೊಟ್ಟು ಖರೀದಿಸುವಂತೆ ಮಾಡಿ ಶಿಕ್ಷಣದ ನೈತಿಕತೆಯನ್ನು ಕುಸಿಯುವಂತೆ ಮಾಡಿದರು. ಶಿಕ್ಷಣ ಪಡೆದವರು ಆಧುನಿಕರಾಗುತ್ತಿದ್ದಂತೆ ಎಲ್ಲ ಬಗೆಯ ಅಸ್ಪಶೃತೆಯೂ ಮುಗಿಯಿತು ಅಂದುಕೊಂಡಾಗಲೇ ಶಿಕ್ಷಣ ಪಡೆದವರ ಮತ್ತೊಂದು ಮುಖ ಅನಾವರಣವಾಗುತ್ತಲೇ ಬೃಹದಾಕಾರವಾಗಿ ಬೆಳೆಯುತ್ತಾ ಬಂತು. ಅನಾಗರಿಕರಂತೆ ವಿದ್ಯಾವಂತರು ವರ್ತಿಸಲು ಆರಂಭಿಸಿದರು ಎಂಬುದು ನಿತ್ಯವೂ ನಮ್ಮ ಕಣ್ಣ ಮುಂದೆಯೇ ದರ್ಶನವಾಗುತ್ತಿದೆ. ವಿದ್ಯಾವಂತರ ನೈತಿಕತೆ ಆಳವಾದ ಪ್ರಪಾತಕ್ಕೆ ಇಳಿಯತೊಡಗಿತು. ಪ್ರತಿಯೊಂದೂ ವಿಚಾರಗಳಲ್ಲಿ ಭಿನ್ನತೆ ಬೆಳೆದು ಸೇಡು, ದ್ವೇಷದ ಭಾವ ಉದ್ದೀಪನವಾಗುತ್ತಾ ಬಂತು. ಬುದ್ಧಿ ನಿರ್ಜೀವವಾಯಿತು. ಯಾವ ಶಿಕ್ಷಣ ಸೌಹಾರ್ದವನ್ನು ಬೆಳೆಸಬೇಕಿತ್ತೋ ಅದೇ ದ್ವೇಷವನ್ನು ಹುಟ್ಟುಹಾಕಿ ಮನುಷ್ಯನ ಸಂಬಂಧಗಳ ಮೇಲೆ, ಬೌದ್ಧಿಕತೆಯ ಮೇಲೆ ಮಾರಕ ಪ್ರಭಾವವನ್ನು ಬೀರಿತು ಎಂದರೆ ನಮ್ಮ ಶಿಕ್ಷಣ ಪದ್ಧತಿಯಲ್ಲಿಯೇ ಲೋಪ ಇದೆ ಅಂತ ಒಪ್ಪಿಕೊಳ್ಳಲೇಬೇಕು. ಶಿಕ್ಷಣವನ್ನು ಪಡೆದರೆ ಸಮಾಜವನ್ನು ಆವರಿಸಿಕೊಂಡು ಕಾಡುತ್ತಿರುವ ಪೀಡೆಗಳು ನಿರ್ನಾಮವಾಗುತ್ತವೆ ಎನ್ನುವ ನಿರೀಕ್ಷೆಗಳು ಹುಸಿಯಾದದ್ದು ನಮ್ಮ ಕಣ್ಣ ಮುಂದೆಯೇ ಇದೆ. ಬರಬರುತ್ತಾ ಜಾತೀಯತೆ ಹೆಚ್ಚುತ್ತಾ ಹೋಯಿತು. ಶೋಷಣೆಯೂ ಬೆಳೆಯಿತು. ಹಿಂಸೆಯೂ ಪ್ರವರ್ಧಮಾನಕ್ಕೆ ಬಂತು. ಇವೆಲ್ಲವೂ ಕ್ಷುಲ್ಲಕ ವಿಷಯಗಳಿಗೆ ಘರ್ಷಣೆಗಳ ವೈಪರೀತ್ಯಗಳಿಗೆ ನಮ್ಮನ್ನು ಮುಟ್ಟಿಸಿತು.

ಪರಂಪರೆಯನ್ನು ಉಳಿಸಿ ಬಾಳಿಸಿಕೊಂಡು ಬಂದ ಅದೆಷ್ಟೋ ನಂಬಿಕೆಗಳನ್ನು, ಜೀವನಮೌಲ್ಯಗಳನ್ನು ಉದಾಸೀನವಾಗಿ ಕಾಣುವಂತೆ ಮಾಡಿ, ಪ್ರತಿಯೊಂದನ್ನೂ ಪ್ರಶ್ನಿಸುವ, ವಿರೋಧಿಸುವ ಭಾವನೆ ಬೆಳೆದು ನಮ್ಮಲ್ಲಿ ಉದ್ಧಟತನವನ್ನು ಉದ್ದೀಪಿಸಿದೆ. ಆಡುವ ಮಾತಿನ ಭಾಷೆ ಸಂಸ್ಕಾರಹೀನವಾಗಿದೆ. ಆಧುನಿಕತೆಯ ಹುಚ್ಚು ಹೆಚ್ಚಿದೆ. ಕಲಿತ ವಿದ್ಯೆ ದುರುಪಯೋಗಕ್ಕೆ ಬಳಕೆಯಾಗುತ್ತಿದೆ. ಭ್ರಷ್ಟರನ್ನು ಧನ ಮದ ಹೊಂದಿರುವವರನ್ನು, ಕಿಡಿಗೇಡಿಗಳನ್ನು, ಸಂಸ್ಕೃತಿ ಹೀನರನ್ನು, ಧೂರ್ತರನ್ನು ಈ ವಿದ್ಯಾವಂತ ಸಮಾಜ ಆದರಿಸಿ ಗೌರವಿಸುತ್ತಾ ಬಂದಿರುವುದರಿಂದ ಸಮಾಜಘಾತುಕರೇ ಹೆಚ್ಚುವಂತೆ ಮಾಡಿದೆ. ಇದಕ್ಕೆ ಕಾರಣ ಯಾರು ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ವಿದ್ಯಾವಂತರಾದ ಯುವ ಸಮೂಹ ಅಡ್ಡದಾರಿ ಹಿಡಿದಿದೆ. ಕೊಲೆ, ಸುಲಿಗೆ, ದರೋಡೆ, ಪ್ರಕರಣಗಳು ದಿನೇ ದಿನೇ ಉಲ್ಬಣಿಸುತ್ತಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇದೆ.

ಹೊಟ್ಟೆಬಟ್ಟೆ ಕಟ್ಟಿ, ಕಾಸಿಗೆ ಕಾಸು ಕೂಡಿಸಿ, ತಮ್ಮ ಹಾಗೆ ಆಗಬಾರದೆಂದು ಬಡವರು, ತಮ್ಮ ಮಕ್ಕಳನ್ನು ವಿದ್ಯಾವಂತರಾಗಿಸಲು ಶ್ರಮಿಸುತ್ತಾರೆ. ಆದರೆ ಇಂತಹ ಮಕ್ಕಳು ಕಲಿತ ವಿದ್ಯೆ ಕೂಡಾ ಅವರನ್ನು ದಾರಿ ತಪ್ಪಿಸುತ್ತಿದೆಯೆಂದರೆ ಇದಕ್ಕೆ ಹೊಣೆಯಾರು?. ಹೆಚ್ಚೆಚ್ಚು ಕಲಿತವರು ವೈಯಕ್ತಿಕ ಮತ್ತು ಸಾಮಾಜಿಕ ಸಂಬಂಧಗಳ ಕಡೆ ಅಮಾನವೀಯರಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಇದಕ್ಕೆ ಕಾರಣರಾರು?. ನಾವು ಪಡೆದ ವಿದ್ಯೆ ನಮ್ಮೆಳಗಿನ ಕಂದಕದ ಆಳ ಮತ್ತು ಅಗಲವನ್ನು ವಿಸ್ತರಿಸುತ್ತಾ ಹೋಯಿತು. ಬದುಕಿಗಾಗಿ ವಾಮಮಾರ್ಗವನ್ನು ಹಿಡಿಯುವಂತೆ ಪ್ರೇರಣೆ, ಪ್ರಚೋದನೆಗೆ ಒಳಗಾಗುವವರು ಕಲಿತವರೇ ಹೊರತು ಅವಿದ್ಯಾವಂತರಲ್ಲ ಎಂಬುದು ವರ್ತಮಾನದಲ್ಲಿ ನಿಚ್ಚಳವಾಗಿದೆ. ವಿದ್ಯೆ ವಿನಯವನ್ನು ಕೊಡುತ್ತದೆಂಬ ಮಾತು ಸತ್ವಹೀನವಾಗಿದೆ. ಮಾತಿಗೆ ಪ್ರತಿಮಾತು, ವಾದಕ್ಕೆ ಪ್ರತಿವಾದ, ಸವಾಲಿಗೆ ಸವಾಲು, ದ್ವೇಷಕ್ಕೆ ದ್ವೇಷ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಪ್ರವೃತ್ತಿ ಕಲಿತವರಲ್ಲೇ ಹೆಚ್ಚಾಗಿ, ವಿಧ್ವಂಸಕ ಪ್ರವೃತ್ತಿ ಸಮಾಜವನ್ನು ಘಾತಿಸುತ್ತಿದೆ. ಹಿಂಸಾ ಸ್ವಭಾವ ಎಲ್ಲೆಡೆ ಹರಡುತ್ತಿದೆ. ನಾವು ಪಡೆಯುವ ಶಿಕ್ಷಣ ವ್ಯವಸ್ಥೆಯೇ ಇದಕ್ಕೆಲ್ಲಾ ಪೂರಕವಾಗಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇಂದಿನ ವಿದ್ಯಾಭ್ಯಾಸ ಪದ್ಧತಿ ಕೇವಲ ಅಂಕಗಳಿಕೆಗೆ ಮಾತ್ರ ಪ್ರಾಧಾನ್ಯ ನೀಡುತ್ತಿದೆ. ಯಾವ ಜೀವನಮೌಲ್ಯಗಳನ್ನೂ ಬೆಳೆಸುತ್ತಿಲ್ಲ. ವ್ಯಾವಹಾರಿಕವಾಗಿ ನಾವು ಬದುಕಬಾರದು. ಶಾಲೆಗಳು, ವಿದ್ಯಾರ್ಥಿಗಳು, ಪ್ರಭುತ್ವ ಹಾಗೂ ಸಮುದಾಯದ ಮಧ್ಯೆ ಮಾನವೀಯ ಸಂಬಂಧ ಏರ್ಪಡುವಂತಾಗಬೇಕು. ಶಿಕ್ಷಣ ಮೌಲ್ಯಗಳು ಸ್ವಸ್ಥ ಸಮಾಜವನ್ನು ನಿರ್ಮಿಸುವಂತಿರಬೇಕು. ವಿದ್ಯೆ ಅನಾಹುತಕ್ಕೆ ಎಡೆ ಮಾಡಿಕೊಡಬಾರದು. ಜೀವನ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮನೆ, ಶಾಲೆ, ಪ್ರಭುತ್ವ ಮತ್ತು ಸಮುದಾಯದಿಂದ ಆಗಬೇಕು. ವಿದ್ಯಾಭ್ಯಾಸ ಪದ್ಧತಿ ಕೂಡ ಈ ಬಗೆಯಲ್ಲಿ ರೂಪಿತವಾಗಬೇಕಿದೆ. ನಾವು ಕಲಿಯುವ ವಿದ್ಯೆಯಿಂದ ನಮ್ಮ ಹಾಗೂ ದೇಶದ ಅಧಃಪತನಕ್ಕೆ ಹೇತುವಾಗಬಾರದು ಎಂಬ ಎಚ್ಚರ ಪ್ರಭುತ್ವಕ್ಕೆ ಇದ್ದರೆ ಭಾರತದ ಭವಿಷ್ಯ ಉಜ್ವಲವಾಗಿ ಉಳಿದೀತು. 

Writer - ಟಿ. ದೇವಿದಾಸ್

contributor

Editor - ಟಿ. ದೇವಿದಾಸ್

contributor

Similar News