ಕಾರವಾರದಲ್ಲಿ ತೂರುತ್ತಿರುವ ಕಲ್ಲುಗಳಿಗೆ ರಾಜ್ಯ ಬಿಜೆಪಿ ತೆರಲಿದೆ ಭಾರೀ ಬೆಲೆ

Update: 2017-12-12 18:57 GMT

ಕಾರವಾರದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸುತ್ತಿರುವ ದಾಂಧಲೆ ನಾಡಿಗೆ ಅನಿರೀಕ್ಷಿತವೇನೂ ಅಲ್ಲ. ಕಳೆದ ಎರಡು ವರ್ಷಗಳಿಂದ ನಾಡಿಗೆ ಬೆಂಕಿ ಹಚ್ಚಲು ವಿಫಲವಾಗಿರುವುದಕ್ಕಾಗಿಯೇ ಕೇಂದ್ರದ ವರಿಷ್ಠ ಅಮಿತ್ ಶಾ ಅವರಿಂದ ಬಿಜೆಪಿ ಛೀಮಾರಿಗೊಳಗಾಗಿರುವುದನ್ನು ಮೈಸೂರು ಸಂಸದರು ಸಾಮಾಜಿಕ ತಾಣಗಳಲ್ಲಿ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಅಮಿತ್ ಶಾ ಸೂಚನೆಯನ್ನು ಅನುಷ್ಠಾನಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಮೊದಲ ಪ್ರಯತ್ನ ನಡೆಯಿತು. ಅಮಾಯಕ ರಿಕ್ಷಾ ಚಾಲಕನೊಬ್ಬನನ್ನು ಕೊಂದು ಇನ್ನೊಂದು ಪ್ರಚೋದಿಸುವ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. ಕೊಲೆ, ಪ್ರತೀಕಾರ, ಹಿಂಸೆಗೆ ದಕ್ಷಿಣ ಕನ್ನಡ ಸಾಕ್ಷಿಯಾಯಿತು. ಆದರೆ ಜನರ ಅಪಾರ ಸಹನೆಯಿಂದಾಗಿ ಬಿಜೆಪಿಯ ಆಟ ಹೆಚ್ಚು ದಿನ ನಡೆಯಲಿಲ್ಲ. ಶೋಭಾ ಕರಂದ್ಲಾಜೆಯ ಹೇಳಿಕೆಗಳೆಲ್ಲ ಸುಳ್ಳು ಮತ್ತು ಪೊಳ್ಳು ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರು ಬೇಗ ಅರ್ಥ ಮಾಡಿಕೊಂಡರು.

ಇದಾದ ಬಳಿಕ ಅಲ್ಲಿಂದ ಬಿಜೆಪಿ ಬಳಕ ತಮ್ಮ ಬೆಂಕಿ ಕಡ್ಡಿಗಳ ಜೊತೆಗೆ ಮೈಸೂರಿನ ಕಡೆಗೆ ಗುಳೆ ಹೊರಟಿತು. ದತ್ತ ಜಯಂತಿಯ ಸಂದರ್ಭದಲ್ಲಿ ಮತ್ತೆ ಗಲಭೆ ಎಬ್ಬಿಸುವುದಕ್ಕೆ ಯೋಜನೆ ರೂಪಿಸಿದರಾದರೂ, ಪೊಲೀಸರ ಪ್ರಾಮಾಣಿಕ ಪ್ರಯತ್ನದಿಂದಾಗಿ ಅದೂ ವಿಫಲಗೊಂಡಿತು. ಬಾಬಾಬುಡಾನ್‌ಗಿರಿಯ ಗೋರಿಗಳಿಗೆ ಹಾನಿ ಮಾಡಿದರಾದರೂ, ಜನರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಸಂಘಪರಿವಾರದ ಉದ್ದೇಶ ಏನು ಎನ್ನುವುದು ಎಲ್ಲ ಧರ್ಮೀಯರು ಅರ್ಥ ಮಾಡಿಕೊಂಡ ಕಾರಣದಿಂದ ಬಿಜೆಪಿ ಇಲ್ಲೂ ಸೋಲನ್ನೇ ಅನುಭವಿಸಬೇಕಾಯಿತು. ಇದು ಬಹುಶಃ ಸಂಘಪರಿವಾರದ ಕಾರ್ಯಕರ್ತರನ್ನು ಇನ್ನಷ್ಟು ವ್ಯಗ್ರವಾಗಿಸಿರಬೇಕು. ಅನಂತಕುಮಾರ ಹೆಗಡೆಯವರಿಗೆ ಕೇಂದ್ರದ ವರಿಷ್ಠರು ಏಕಾಏಕಿ ಕರೆದು ಸಚಿವ ಸ್ಥಾನವನ್ನು ನೀಡಿರುವುದೇ ಕರ್ನಾಟಕದಲ್ಲಿ ಕೋಮು ವಿಭಜನೆಯ ರಾಜಕಾರಣಕ್ಕೆ ಚಾಲನೆ ನೀಡಲು. ಸದ್ಯಕ್ಕೆ ಸಿದ್ದರಾಮಯ್ಯ ಜನಪರ ಆಡಳಿತವನ್ನು ನೀಡುತ್ತಿರುವುದರಿಂದ ಸರಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುವುದು ಕಷ್ಟ. ಆದುದರಿಂದ, ಕೋಮು ಪ್ರಚೋದನೆಯ ಮೂಲಕ ಸಮಾಜದ ಶಾಂತಿಯನ್ನು ಕೆಡಿಸಿ, ಜನರಲ್ಲಿ ದ್ವೇಷಭಾವನೆಯನ್ನು ತುಂಬಿ ಅದನ್ನು ಮತಗಳಾಗಿ ಪರಿವರ್ತನೆಗೊಳಿಸಲು ಕೇಂದ್ರದಿಂದ ಸ್ಪಷ್ಟ ಸೂಚನೆ ದೊರಕಿದೆ. ದ್ವೇಷ ಕಾರುವುದರಲ್ಲಿ ಅನುಭವಿಗಳಾಗಿರುವ ಹೆಗಡೆಯವರಿಗೆ ಅದರ ನೇತೃತ್ವವನ್ನು ವಹಿಸಲಾಗಿತ್ತು. ಅಂದಿನಿಂದ, ತನ್ನ ಸಚಿವ ಸ್ಥಾನದ ಋಣವನ್ನು ತೀರಿಸಲು ಅವರು ರಾಜ್ಯದಲ್ಲಿ ಶತಾಯಗತಾಯ ಯತ್ನಿಸುತ್ತಲೇ ಇದ್ದಾರೆ.

ಕಾನೂನು ವ್ಯವಸ್ಥೆಯನ್ನು ಹಾಳುಗೆಡವಲು ವಿಫಲರಾಗಿ ಅಮಿತ್ ಶಾರಿಂದ ತರಾಟೆಗೊಳಗಾಗಿದ್ದ ಸಂಸದ ಪ್ರತಾಪ ಸಿಂಹ ಬಳಿಕ ‘ಪದ್ಮಾವತಿ’ ಸಿನೆಮಾವನ್ನು ಮುಂದಿಟ್ಟು ಜನರನ್ನು ಕೆರಳಿಸಲು ಹೊರಟು, ಕೈ ಸುಟ್ಟುಕೊಂಡರು. ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಕುರಿತು ಅಶ್ಲೀಲ ಹೇಳಿಕೆಗಳನ್ನು ಸಾಮಾಜಿಕ ತಾಣದಲ್ಲಿ ಹರಡಿ ಸರ್ವ ಕನ್ನಡಿಗರ ವಿರೋಧ ಕಟ್ಟಿಕೊಂಡ ಈ ಸಂಸದರು ಬಳಿಕ, ‘ಹನುಮಜಯಂತಿ’ ಹೆಸರಿನಲ್ಲಿ ಹೊಸತೊಂದು ಪ್ರಹಸನವನ್ನು ಶುರು ಹಚ್ಚಿಕೊಂಡರು. ಆದರೆ ಇಲ್ಲೂ ಪೊಲೀಸರು ಮುಂಜಾಗೃತೆ ವಹಿಸಿದರು. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿದರು. ಇದರಿಂದ ಹತಾಶರಾದ ಸಂಸದ ಪ್ರತಾಪ್ ಸಿಂಹ ಬಾಲಕ್ಕೆ ಬೆಂಕಿ ಬಿದ್ದ ನರಿಯಂತೆ, ಬ್ಯಾರಿಕೇಡ್‌ನ ಮೇಲೆ ಕಾರು ಹರಿಸಿ, ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿಗೆ ಹವಣಿಸಿದರು. ಬಿಜೆಪಿ ವರ್ಚಸ್ಸನ್ನು ಇದು ಇನ್ನಷ್ಟು ಕೆಡಿಸಿತು. ಇದೇ ಸಂದರ್ಭದಲ್ಲಿ, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕೆಡಿಸಲು ಅಮಿತ್ ಶಾ ನೀಡಿರುವ ಸೂಚನೆಯನ್ನು ಪ್ರತಾಪ್ ಸಿಂಹ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿರುವುದು ಬಿಜೆಪಿಯನ್ನು ಮತ್ತಷ್ಟು ಮುಜುಗರಕ್ಕೆ ತಳ್ಳಿತು. ಜೊತೆ ಜೊತೆಗೆ ಪರಿವರ್ತನಾ ರ್ಯಾಲಿಗಳೂ ಹೋದಲ್ಲೆಲ್ಲ ವಿಫಲವಾಗ ತೊಡಗಿದವು. ಈ ವೈಫಲ್ಯಗಳನ್ನು ಮುಂದಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದ್ದ ಬಿಜೆಪಿ ನಾಯಕರು, ಸೋಲಿಗೆ ತಲೆ ಬಾಗಿಸಲಾಗದೆ ಇನ್ನಷ್ಟು ಅನಾಹುತಗಳಿಗೆ ಕಾರಣರಾಗುತ್ತಿದ್ದಾರೆ.

ಕಾರವಾರದಲ್ಲಿ ಒಬ್ಬ ಅಮಾಯಕ ತರುಣನ ಸಾವಿನ ಕುರಿತಂತೆ ಅತ್ಯಂತ ನೀಚ ವದಂತಿಗಳನ್ನು ಹಬ್ಬಿಸಿ, ಬಳಿಕ ತನ್ನ ಕಾರ್ಯಕರ್ತರನ್ನು ಬೀದಿಯಲ್ಲಿ ಛೂ ಬಿಟ್ಟು ಜನಸಾಮಾನ್ಯರ ಬದುಕಿಗೆ ಬೆಂಕಿ ಹಚ್ಚುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹೊನ್ನಾವರದಲ್ಲಿ ಮೀಲಾದುನ್ನಬಿ ಕಾರ್ಯಕ್ರಮದ ಸಂದರ್ಭದಲ್ಲಿ, ಸಂಘಪರಿವಾರ ಕಾಲುಕೆರೆದು ಜಗಳವನ್ನು ಸೃಷ್ಟಿಸಿ ಪರಿಸರವನ್ನು ಉದ್ವಿಗ್ನಗೊಳಿಸಲು ಯಶಸ್ವಿಯಾಯಿತು. ಇದೇ ಸಂದರ್ಭದಲ್ಲಿ ಪರೇಶ್ ಮೇಸ್ತಾ ಎನ್ನುವ ತರುಣನೊಬ್ಬ ಕಾಣೆಯಾಗಿದ್ದು, ಎರಡು ದಿನಗಳ ಬಳಿಕ ಆತನ ಶವ ಕೆರೆಯಲ್ಲಿ ಪತ್ತೆಯಾಯಿತು. ಆತ್ಮಹತ್ಯೆ ಮಾಡಿಕೊಂಡನೋ, ಆಕಸ್ಮಿಕವಾಗಿ ಮೃತನಾದನೋ ಅಥವಾ ದುಷ್ಕರ್ಮಿಗಳು ಯಾರಾದರೂ ಕೊಂದು ಹಾಕಿದರೋ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬರುವ ಮೊದಲೇ, ಆ ಮೃತದೇಹವನ್ನು ಮುಂದಿಟ್ಟು ಹೊಸ ಗಲಭೆಗೆ ಸಂಘಪರಿವಾರ ಸಂಚು ರೂಪಿಸಿತು. ಸಾಮಾಜಿಕ ತಾಣದಲ್ಲಿ ಹಸಿ ಸುಳ್ಳುಗಳನ್ನು ಹಬ್ಬಿಸಿತು. ಸಂಸದೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿ ನಡೆಸಿ, ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನು ಹೇಳಿದರು. ಮೃತನಿಗೆ ಬರ್ಬರವಾಗಿ ಚಿತ್ರ ಹಿಂಸೆ ನಡೆಸಲಾಗಿತ್ತು, ಆತನನ್ನು ಪೆಟ್ರೋಲ್ ಹಚ್ಚಿ ಕೊಲ್ಲಲಾಗಿತ್ತು... ಹೀಗೆ ಪುಂಖಾನುಪುಂಖ ಸುಳ್ಳುಗಳನ್ನು ಮಾಧ್ಯಮಗಳ ಮೂಲಕ ಹರಿಬಿಟ್ಟರು. ಆತ ಯಾವಾಗ ಸತ್ತಿದ್ದಾನೆ? ಆತನನ್ನು ಯಾರು ಕೊಂದಿದ್ದಾರೆ? ಹೀಗೆಯೇ ಆತನನ್ನು ಕೊಲ್ಲಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದವರು ಯಾರು? ಎನ್ನುವ ಪ್ರಶ್ನೆಗಳನ್ನು ಮಾಧ್ಯಮಗಳು ಕೇಳಿದರೆ, ಅದಕ್ಕೆ ಉಡಾಫೆಯ ಹೇಳಿಕೆಯನ್ನು ನೀಡಿ ಜಾರಿಕೊಂಡರು.

ಕನಿಷ್ಠ ಪೋಸ್ಟ್‌ಮಾರ್ಟಂ ವರದಿಗೂ ಕಾಯದೆ ಪತ್ರಿಕಾಗೋಷ್ಠಿಯಲ್ಲಿ ದ್ವೇಷವನ್ನು ಬಸಬಸನೆ ಕಾರಿದ ಸಂಸದೆಯ ಕಾಯಿಲೆಗೆ ಇದೀಗ ವೈದ್ಯರೇ ಔಷಧಿ ನೀಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ, ಮೃತ ದೇಹದ ಕುರಿತಂತೆ ಏನೆಲ್ಲ ವದಂತಿಗಳನ್ನು ಹರಿಯಬಿಡಲಾಗಿತ್ತೋ ಅದಕ್ಕೆಲ್ಲ ವೈದ್ಯರಿಂದ ಉತ್ತರ ದೊರಕಿದೆ. ಸಂಘಪರಿವಾರ ಮತ್ತು ಬಿಜೆಪಿ ಹರಿಯಬಿಟ್ಟ ಎಲ್ಲ ಸುಳ್ಳುಗಳನ್ನು ಪೋಸ್ಟ್‌ಮಾರ್ಟಂ ವರದಿ ನಿರಾಕರಿಸಿದೆ. ಆದರೆ ಸಂಘಪರಿವಾರಕ್ಕೆ ಬೇಕಾಗಿರುವುದು ಆಸ್ಪತ್ರೆಯ ವೈದ್ಯರ ವರದಿಯಲ್ಲ. ಸಮಾಜದ ಶಾಂತಿ ಕೆಡಿಸುವುದಕ್ಕೆ ಒಂದು ನೆಪವಷ್ಟೇ ಬೇಕಾಗಿದೆ. ಪೋಸ್ಟ್‌ಮಾರ್ಟಂ ವರದಿ ಸಂಘ ಪರಿವಾರದ ಮಾನವನ್ನು ಹರಾಜು ಹಾಕಿದ ಬಳಿಕವೂ ಅವರು ತಮ್ಮ ದಾಂಧಲೆಗಳನ್ನು ನಿಲ್ಲಿಸುತ್ತಿಲ್ಲ. ಇದೀಗ ಶಿರಸಿಗೂ ಹಿಂಸಾಚಾರ ವಿಸ್ತರಿಸಿದ್ದು ಅಮಾಯಕರ ಅಂಗಡಿಮುಂಗಟ್ಟು ಮಾತ್ರವಲ್ಲ, ಮಸೀದಿಯನ್ನೂ ಗುರಿಯಾಗಿಟ್ಟುಕೊಂಡು ಕಲ್ಲು ತೂರಾಟ ನಡೆಸುತ್ತಿದ್ದಾರೆ.

ಸುಳ್ಳು ಮಾಹಿತಿಗಳನ್ನು ಹರಡುವಲ್ಲಿ ಪ್ರಮುಖ ಕಾರಣವಾಗಿರುವ ಸಂಸದೆಯೂ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಅಡಗಿ ಕುಳಿತಿರುವ ಕ್ರಿಮಿಗಳನ್ನು ಗುರುತಿಸಿ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಶಾಂತಿ ಸ್ಥಾಪಿಸಲು ಇನ್ನಾದರೂ ಚಾಲನೆ ನೀಡಬೇಕಾಗಿದೆ. ನೋಟು ನಿಷೇಧ, ಜಿಎಸ್‌ಟಿ ಬಳಿಕ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ವ್ಯಾಪಾರ ಕುಸಿದಿದೆ. ಅರ್ಥವ್ಯವಸ್ಥೆ ಏರುಪೇರಾಗಿದೆ. ಇಂತಹ ಹೊತ್ತಿನಲ್ಲಿ ಕೋಮುಗಲಭೆಗಳನ್ನು ಎಬ್ಬಿಸುವುದೆಂದರೆ ಜನರ ಗಾಯದ ಮೇಲೆ ಬರೆ ಹಾಕುವುದು ಎಂದರ್ಥ. ಕೋಮುಗಲಭೆಗಳ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದರೆ ಅದು ಅದರ ಮೂರ್ಖತನ. ಇಂದು ಜನರಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಶಾಂತಿ. ಇಂತಹ ಗಲಭೆಗಳ ಮೂಲಕ ಇರುವ ಅಲ್ಪಸ್ವಲ್ಪ ವಿಶ್ವಾಸಾರ್ಹತೆಯನ್ನು ಬಿಜೆಪಿ ಕಳೆದುಕೊಳ್ಳಲಿದೆ. ಈ ನಾಶ ನಷ್ಟದಿಂದಾಗಿ ಜನರು ಬಿಜೆಪಿಯಿಂದ ಇನ್ನಷ್ಟು ದೂರವಾಗಲಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರ ಜನಸಾಮಾನ್ಯರೆಡೆಗೆ ತೂರಿದ ಕಲ್ಲುಗಳು ವ್ಯರ್ಥವಾಗುವುದಿಲ್ಲ. ಚುನಾವಣೆಯ ದಿನಗಳಲ್ಲಿ ನೇರವಾಗಿ ಅದು ಬಿಜೆಪಿ ನಾಯಕ ಮತ ಪೆಟ್ಟಿಯನ್ನೇ ಹಾನಿಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News