ಸಾಚಾರ್ ಬದಲು ಫ್ಯೂಚರ್ ಬಗ್ಗೆ ಆಲೋಚಿಸಬೇಕು: ಡಾ.ಕೆ.ರಹ್ಮಾನ್‌ಖಾನ್

Update: 2017-12-13 14:40 GMT

ಬೆಂಗಳೂರು, ಡಿ.13: ಯುಪಿಎ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ವರದಿ ನೀಡಲು ರಚಿಸಲಾಗಿದ್ದ ನ್ಯಾ.ರಾಜೀಂದರ್ ಸಾಚಾರ್ ಸಮಿತಿಯು ವರದಿ ನೀಡಿ 14 ವರ್ಷಗಳಾಗಿದೆ. ಈಗ ನಾವು ಸಾಚಾರ್ ಬದಲು ಫ್ಯೂಚರ್(ಭವಿಷ್ಯ) ಬಗ್ಗೆ ಆಲೋಚಿಸುವ ಸಮಯ ಬಂದಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್ ಅಭಿಪ್ರಾಯಪಟ್ಟರು.

ಬುಧವಾರ ನಗರದ ಅರಮನೆ ಮೈದಾನದ ಟೆನ್ನಿಸ್ ಪೆವಿಲಿಯನ್‌ನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಚಾರ್ ಸಮಿತಿಯ ಶಿಫಾರಸ್ಸುಗಳು ಒಂದಲ್ಲ ಒಂದು ರೀತಿಯಲ್ಲಿ ಅನುಷ್ಠಾನವಾಗುತ್ತಿವೆ. ಸರಕಾರ ಯೋಜನೆಗಳನ್ನು ಜಾರಿಗೆ ತಂದಾಗ ಅದರ ಸದುಪಯೋಗ ಪಡಿಸಿಕೊಳ್ಳಲು ನಾವು ಮುಂದಾಗಬೇಕು. ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಜನರ ನಿರೀಕ್ಷೆಗಳು, ಸರಕಾರದ ಕಾರ್ಯಕ್ರಮಗಳ ಬಗ್ಗೆ ಜನರ ಅಭಿಪ್ರಾಯವೇನು ಎಂಬುದು ತಿಳಿದುಕೊಳ್ಳಲು ಅಲ್ಪಸಂಖ್ಯಾತರ ಆಯೋಗ ಮಾಡಿರುವ ಈ ಪ್ರಯತ್ನ ಉತ್ತಮವಾದದ್ದು. 50-60 ವರ್ಷಗಳಿಂದ ಮುಸ್ಲಿಮರು ತಮ್ಮ ಸಮಸ್ಯೆಗಳ ಈಡೇರಿಕೆಗೆ ಹೋರಾಡುತ್ತಿದ್ದಾರೆ ಎಂದು ರಹ್ಮಾನ್‌ಖಾನ್ ತಿಳಿಸಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್‌ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ನಾಲ್ಕೂವರೆ ವರ್ಷಗಳಿಂದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳು ಯಾವ ಮಟ್ಟದಲ್ಲಿ ಅನುಷ್ಠಾನಗೊಂಡಿವೆ ಎಂಬುದುರ ಕುರಿತು ಪರಾಮರ್ಶೆ ನಡೆಸುವ ಅಗತ್ಯವಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು, ಯೋಜನೆಗಳ ಅನುಷ್ಠಾನದಲ್ಲಿ ಜನರ ಪಾಲುದಾರಿಕೆ ಹೇಗಿದೆ ಎಂಬ ಮಾಹಿತಿ ಪಡೆದುಕೊಳ್ಳಬೇಕಾದ ಅಗತ್ಯವಿದೆ. ಜತೆಗೆ, ಮುಂದಿನ ಬಜೆಟ್ ಹಾಗೂ ಆಡಳಿತ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಯಾವ ಅಂಶಗಳನ್ನು ಸೇರಿಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ಸಚಿವ ರಮೇಶ್‌ ಕುಮಾರ್ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಅವರ ಎದುರು ಈ ಸಂವಾದ ನಡೆಯುತ್ತಿದ್ದು, ರಾಜ್ಯದಲ್ಲಿ ಇರುವ ಪ್ರಸ್ತುತ ಪರಿಸ್ಥಿತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಲ್ಪಸಂಖ್ಯಾತರ ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತ ಚರ್ಚೆಗೆ ಈ ಸಂವಾದ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ಸಂಪುಟ ಉಪ ಸಮಿತಿಯ ಮೊದಲನೆ ಸಭೆ ನ.9ರಂದು ಹಾಗೂ ಡಿ.12ರಂದು ನಡೆದ ಎರಡನೆ ಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಇಂದಿನ ಸಂವಾದದಲ್ಲಿ ಬರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಡಿ.18ರಂದು ನಡೆಯಲಿರುವ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯಂದು ಕೆಲವು ಕಾರ್ಯಕ್ರಮಗಳ ಘೋಷಣೆಯಾಗಲಿದೆ ಎಂದು ನಸೀರ್‌ ಅಹ್ಮದ್ ಹೇಳಿದರು.

ಶಾ ಸೂಚನೆಯಂತೆ ಗಲಭೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಸರಕಾರ ಹಾಗೂ ಪೊಲೀಸ್ ಇಲಾಖೆ ಲಾಠಿಚಾರ್ಜ್, ಗೋಲಿಬಾರ್ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಹೊನ್ನಾವರ, ಕುಮಟಾ ಹಾಗೂ ಶಿರಸಿಯಲ್ಲಿ ಆಗುತ್ತಿರುವುದು ಇದೇ. ಅಲ್ಪಸಂಖ್ಯಾತ ಸಮುದಾಯದವರು ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸರಿಗೆ ಸಹಕಾರ ನೀಡಬೇಕು.
-ನಸೀರ್ ಅಹ್ಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News