ಫೆಬ್ರವರಿಯಿಂದ ನಗರದಲ್ಲಿ ವಿರಳ ಸಂಚಾರ ದಿನ ಅಭಿಯಾನ: ಸಾರಿಗೆ ಸಚಿವ ಎಚ್.ಎಂ.ರೇವಣ್ಣ

Update: 2017-12-13 15:05 GMT

ಬೆಂಗಳೂರು, ಡಿ. 13: ಬೆಂಗಳೂರು ನಗರದಲ್ಲಿನ ಹೆಚ್ಚುತ್ತಿರುವ ವಾಯು ಮಾಲಿನ್ಯ, ಶಬ್ದಮಾಲಿನ್ಯ ಹಾಗೂ ವಾಹನ ದಟ್ಟಣೆ ತಡೆಗಟ್ಟಲು ಪ್ರತಿ ತಿಂಗಳ ಎರಡನೆ ರವಿವಾರ ‘ಸಂಚಾರ ವಿರಳ ದಿನ (less trffic day) ಅಭಿಯಾನ’ ಆಚರಿಸಲು ನಿರ್ಧರಿಸಲಾಗಿದೆ.

ಆ ದಿನ ನಗರದ ಸಾರ್ವಜನಿಕರು ತಮ್ಮ ಸ್ವಂತ ವಾಹನವನ್ನು ಸ್ಥಗಿತಗೊಳಿಸಿ ಸಾಮೂಹಿಕ ಸಾರಿಗೆ ವಾಹನಗಳಾದ ಮೆಟ್ರೋ ರೈಲು ಅಥವಾ ಬಿಎಂಟಿಸಿ ಬಸ್ ಮೂಲಕ ಸಂಚರಿಸಬೇಕು. ಆ ದಿನದ ಪಾಸು ಮತ್ತು ಪ್ರಯಾಣದಲ್ಲಿ ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 72ಲಕ್ಷ ವಾಹನಗಳ ಪೈಕಿ ಸುಮಾರು 65 ಲಕ್ಷ ವಾಹನ ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳಲಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಹೊಸದಿಲ್ಲಿಯ ವಾಯು ಮಾಲಿನ್ಯದಿಂದ ಅನುಭವಿಸುತ್ತಿರುವ ಯಾತನೆ, ಬೆಂಗಳೂರು ನಗರಕ್ಕೆ ತಂದೊಡ್ಡದಿರಲಿ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ಅನಿವಾರ್ಯ ಸಮಯದಲ್ಲಿ ಮಾತ್ರ ಸ್ವಂತ ವಾಹನ ಬಳಕೆ ಮಾಡಲು ಕೋರಲಾಗಿದೆ ಎಂದು ಹೇಳಿದರು.

ಅಭಿಯಾನದಿಂದ ನಗರದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಸಾಧ್ಯ. ಮಾತ್ರವಲ್ಲ ಇಂಧನ ಉಳಿತಾಯವೂ ಆಗಲಿದೆ. ಪ್ರತಿ ತಿಂಗಳ ಎರಡನೆ ರವಿವಾರ ಆಟೊರಿಕ್ಷಾ, ಆ್ಯಪ್ ಆಧಾರಿತ ಓಲಾ, ಉಬರ್ ವಾಹನಗಳು, ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೇಳಿದರು.

2018ರ ಫೆಬ್ರವರಿಯಿಂದ ‘ವಿರಳ ಸಂಚಾರ ದಿನ ಅಭಿಯಾನ’ ಆರಂಭಗೊಳ್ಳಲಿದ್ದು, ಭವಿಷ್ಯದ ಬೆಂಗಳೂರು ಉಳಿವಿಗಾಗಿ ಎಲ್ಲರೂ ಸಹಕಾರ ನೀಡಬೇಕು. ಈ ಸಂಬಂಧ ಬಿಬಿಎಂಪಿ, ಬಿಡಿಎ, ಸಂಚಾರ ಪೊಲೀಸರು, ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಒಂದು ಬಸ್-2 ಕೆಜಿ ಧೂಳು: ನಗರದಲ್ಲಿ ಮೆಟ್ರೋ, ಕಟ್ಟಡ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿ ಹಾಗೂ ಮಾಲಿನ್ಯದ ಹಿನ್ನೆಲೆಯಲ್ಲಿ ಒಂದು ದಿನ ಸಂಚರಿಸುವ ಬಿಎಂಟಿಸಿ ಬಸ್‌ನಲ್ಲಿ ಕನಿಷ್ಟ 2 ಕೆಜಿಗಳಷ್ಟು ಧೂಳು ಸಂಗ್ರಹವಾಗುತ್ತಿದೆ. ಹೀಗಾಗಿ ನಗರದಲ್ಲಿನ ಮಾಲಿನ್ಯ ನಿಯಂತ್ರಣ ಅತ್ಯಂತ ತುರ್ತು ಮತ್ತು ಅನಿವಾರ್ಯವೂ ಹೌದು ಎಂದು ರೇವಣ್ಣ ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಸಂಪತ್ ರಾಜ್, ಸಾರಿಗೆ ಇಲಾಖೆ ಕಾರ್ಯದರ್ಶಿ ಬಸವರಾಜ್ ಹಾಜರಿದ್ದರು.

‘ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯನ್ನು ನಷ್ಟದ ಸುಳಿಗೆ ಸಿಲುಕಿಸಿದ ‘ಮಾರ್ಕೊಪೋಲೋ’ ಬಸ್ ಖರೀದಿಯಲ್ಲಿನ ಅಕ್ರಮದ ವರದಿಯನ್ನು ಒಂದು ತಿಂಗಳಲ್ಲಿ ತರಿಸಿಕೊಂಡು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’
-ಎಚ್.ಎಂ.ರೇವಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News