ಗಲಭೆ, ದೊಂಬಿ ಮಾಡಲೇಬೇಕು ಎಂದು ನಿಶ್ಚಯ ಮಾಡಿಕೊಂಡವರಿಗೆ ಏನು ಹೇಳಲು ಸಾಧ್ಯ?

Update: 2017-12-13 16:02 GMT

ಬೆಂಗಳೂರು, ಡಿ.13: ಗಲಭೆ, ದೊಂಬಿ ಮಾಡಲೇಬೇಕು, ಎಂಟಲ್ಲ 80 ಹತ್ಯೆಗಳಾದರೂ ಪರವಾಗಿಲ್ಲ ಎಂದು ನಿಶ್ಚಯ ಮಾಡಿಕೊಂಡವರಿಗೆ ಏನು ಹೇಳಲು ಸಾಧ್ಯ ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ವಾಗ್ದಾಳಿ ನಡೆಸಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ಹೀಗೆಲ್ಲಾ ಮಾಡಿದರೆ ಹೇಗೇ ಎಂದು ಪ್ರಶ್ನಿಸಿದರು.

ಲಾಠಿ ಚಾರ್ಜ್ ಆಗಬೇಕು, ಅಶ್ರುವಾಯು ಸಿಡಿಯುವಂತೆ ಎಷ್ಟು ಹೋರಾಟಗಳನ್ನು ಮಾಡಿದ್ದೀರಾ ಎಂದು ಬಿಜೆಪಿ ಮುಖಂಡರಿಗೆ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇಳುತ್ತಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬಿಜೆಪಿ ಕಾರ್ಯಕರ್ತರಿಗೆ ಸುಳ್ಳು ಹೇಳಿ ಎನ್ನುತ್ತಾರೆ. ಇದನ್ನೆಲ್ಲ ಜನ ನೋಡುತ್ತಿಲ್ಲವೆ ಎಂದು ರಮೇಶ್‌ಕುಮಾರ್ ಹೇಳಿದರು.

ರಾಜ್ಯ ಸರಕಾರವು ಯಾವುದೆ ಅಹಿತಕರ ಘಟನೆಗಳಾಗದಂತೆ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಗುಪ್ತಚರ ಇಲಾಖೆಯ ಮಾಹಿತಿ ಅನ್ವಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಂವಿಧಾನದ ಚೌಕಟ್ಟಿನಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷರು, ರಾಜ್ಯ ಸರಕಾರದ ವತಿಯಿಂದ ಮುಖ್ಯಮಂತ್ರಿ ಯಾತ್ರೆ ಮಾಡುತ್ತಿದ್ದಾರೆ. ನಾವೆಲ್ಲ ಸೇರಿ ಪಕ್ಷದ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News