ಸಂಸದ ಕಟೀಲ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ತಡೆಗೆ ನಿರಾಕರಿಸಿದ ಹೈಕೋರ್ಟ್

Update: 2017-12-13 17:13 GMT

ಬೆಂಗಳೂರು, ಡಿ.13: ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಸಂಬಂಧ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಂಗಳೂರು ಪೂರ್ವ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಎಫ್ಐಆರ್ ಹಾಗೂ ಆ ಸಂಬಂಧ ಮಂಗಳೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಪೀಠ, ಎಫ್ಐಆರ್ ಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು.

ಆದರೆ, ಪ್ರಕರಣದ ಸಂಬಂಧ ಒಂದು ವೇಳೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದರೆ, ಈ ಕ್ರಿಮಿನಲ್ ಅರ್ಜಿಯ ಕುರಿತು ನ್ಯಾಯಾಲಯದ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತು.

ವಿಚಾರಣೆ ವೇಳೆ ವಾದಿಸಿದ ಅರ್ಜಿದಾರರ ಪರ ವಕೀಲರು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷಾಧಾರಗಳಿಲ್ಲ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಕ್ಕೆ ಅರ್ಜಿದಾರರ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೂರಿದರು.

ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಸಂದೀಪ್ ಚೌಟ ವಾದಿಸಿ, ಅರ್ಜಿದಾರರು ಠಾಣೆಗೆ ನುಗ್ಗಿ ಕುರ್ಚಿಯನ್ನು ಎತ್ತಿ ನೆಲಕ್ಕೆ ಕುಕ್ಕಿದ್ದಾರೆ, ಇನ್‌ಸ್ಪೆಕ್ಟರ್‌ಗೆ ಕೈತೋರಿಸಿ ಬೆದರಿಕೆ ಹಾಕಿದ್ದಲ್ಲದೇ, ಅವರ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಎಲ್ಲದರ ವಿಡಿಯೋ ಚಿತ್ರೀಕರಣವಾಗಿದ್ದು, ಉದ್ದೇಶಪೂರ್ವಕವಾಗಿಯೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಾಧಾರವಿದೆ. ಈಗಾಗಲೇ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಹಂತದಲ್ಲಿ ಎಫ್ಐಆರ್‌ಗೆ ತಡೆ ನೀಡದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದರೆ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಳ್ಳುತ್ತದೆ. ಹೀಗಾಗಿ ಎಫ್ಐಆರ್‌ಗೆ ತಡೆ ನೀಡುವಂತೆ ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ, ಪೊಲೀಸರು ತಮ್ಮ ತನಿಖೆ ಮುಂದುವರಿಸಲಿ. ಒಂದೊಮ್ಮೆ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದರೆ, ಅದು ನ್ಯಾಯಾಲಯದ ತೀರ್ಮಾನಕ್ಕೆ ಒಳಪಡಲಿದೆ ಎಂದು ತಿಳಿಸಿ, ಎಫ್ಐಆರ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News