ಸಿಎಂ-ಕೆಪಿಸಿಸಿ ಅಧ್ಯಕ್ಷರ ಪ್ರತ್ಯೇಕ ಪ್ರವಾಸ ಅಗತ್ಯವಿರಲಿಲ್ಲ: ಜಾಫರ್ ಶರೀಫ್

Update: 2017-12-13 17:17 GMT

ಬೆಂಗಳೂರು, ಡಿ.13: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒಟ್ಟಿಗೆ ರಾಜ್ಯ ಪ್ರವಾಸ ಕೈಗೊಳ್ಳಬೇಕಿತ್ತು. ಪ್ರತ್ಯೇಕ ಪ್ರವಾಸದಿಂದ ಕಾರ್ಯಕರ್ತರಲ್ಲಿ ಗೊಂದಲವುಂಟಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ.ಜಾಫರ್ ಶರೀಫ್ ತಿಳಿಸಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಪ್ರವಾಸದ ಅಗತ್ಯವಿರಲಿಲ್ಲ. ಮುಖಂಡರು ಮೊದಲು ತಮ್ಮ ಪ್ರತಿಷ್ಠೆಯನ್ನು ಬಿಡಬೇಕು. ರಾಜ್ಯ ಪ್ರವಾಸದ ಬಗ್ಗೆ ನನ್ನ ಸಲಹೆಯನ್ನು ಯಾರೂ ಪಡೆಯಲಿಲ್ಲ. ಕೇಳಿದ್ದರೆ, ಒಟ್ಟಿಗೆ ಹೋಗುವಂತೆ ಹೇಳುತ್ತಿದ್ದೆ ಎಂದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯ ಸರಕಾರದಿಂದ ಆಯೋಜಿಸಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಆರಂಭಿಸಿದ್ದಾರೆ ಎಂದರು.

ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಕೆಪಿಸಿಸಿ ಅಧ್ಯಕ್ಷರು ಹೋಗುತ್ತಿದ್ದಾರೆ. ಜಾಫರ್ ಶರೀಫ್ ನಮ್ಮ ಪಕ್ಷದ ಹಿರಿಯ ನಾಯಕರು, ಅವರು ನೀಡುವ ಸಲಹೆಗಳಿಗೆ ನಾವು ತುಂಬಾ ಗೌರವ ನೀಡುತ್ತೇವೆ. ಪ್ರತ್ಯೇಕ ಪ್ರವಾಸದಿಂದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವುಂಟಾಗುವುದಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News