ಬೆಂಗಳೂರು : 108 ಕೈದಿಗಳು ಬಂಧಮುಕ್ತ

Update: 2017-12-13 17:55 GMT

ಬೆಂಗಳೂರು, ಡಿ.13: ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಕಾರಾಗೃಹಗಳ 108 ಕೈದಿನಗಳನ್ನು ಬುಧವಾರ ಬಂಧಮುಕ್ತಗೊಳಿಸಲಾಯಿತು.

ಬೆಂಗಳೂರು ಕೇಂದ್ರಕಾರಾಗೃಹ ಪರಪ್ಪನ ಅಗ್ರಹಾರದ 50, ಮೈಸೂರು 17, ಬೆಳಗಾವಿ 12, ಕಲಬುರ್ಗಿ 9, ವಿಜಯಪುರ 8, ಬಳ್ಳಾರಿ 8, ಧಾರವಾಡ 4 ಸೇರಿ ಒಟ್ಟು 108 ಕೈದಿಗಳು ಬಿಡುಗಡೆಯಾದರು. ಅದರಲ್ಲಿ ಹತ್ತು ಜನ ಮಹಿಳೆಯರಿದ್ದಾರೆ.

ಆಯಾ ಕಾರಾಗೃಹಗಳಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಲಾಯಿತು. ಅದೇ ರೀತಿ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಐದು ಜನ ಮಹಿಳೆಯರು ಸೇರಿ 50 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿ ಅವರಿಗೆ ಬಿಡುಗಡೆ ಪತ್ರ ವಿತರಿಸಿದರು.

ಬಳಿಕ ರಾತ್ರಿ 7 ಗಂಟೆ ಸುಮಾರಿಗೆ ಜೈಲಿನಿಂದ ಹೊರಬಂದ ಕೈದಿಗಳನ್ನು ಸಂಬಂಧಿಕರು ಬರಮಾಡಿಕೊಂಡರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಹಲವು ವರ್ಷಗಳಿಂದ 14ಕ್ಕೂ ವರ್ಷಕ್ಕೂ ಹೆಚ್ಚು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರಿಗೆ ಮಾತ್ರವೇ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ಬೇರೆ ಬೇರೆ ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿದ್ದ ಉತ್ತಮ ನಡವಳಿಕೆಯುಳ್ಳ ಕೈದಿಗಳನ್ನು ಅವರ ಕೋರಿಕೆ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸನ್ನಡತೆ ಉಳ್ಳವರನ್ನು ಬಿಡುಗಡೆ ಮಾಡುವಂತೆ ಹಲವು ಬಾರಿ ಕೈದಿಗಳು ಮನವಿ ಮಾಡಿದ್ದರು. ಅವರ ಮನವಿಯನ್ನು ಪರಿಗಣಿಸಿದ ಸರಕಾರ ಎಲ್ಲವನ್ನೂ ಪರಿಶೀಲಿಸಿ, ಉತ್ತಮ ನಡವಳಿಕೆ ಉಳ್ಳವರಿಗೆ ಹಸಿರು ನಿಶಾನೆ ತೋರಿದೆ. ಇಲ್ಲಿನ ಕೈದಿಗಳು ಸುಮ್ಮನೆ ಕುಳಿತು ಕಾಲ ಕಳೆಯಲು ಸಾಧ್ಯವಿಲ್ಲ. ಅವರಿಗಾಗಿ ಕರಕುಶಲ ವಸ್ತುಗಳ ತಯಾರಿಕೆ, ಗುಡಿಕೈಗಾರಿಕೆಯಂತಹ ಹಲವು ತರಬೇತಿ ನೀಡಲಾಗುತ್ತಿದೆ. ಇದರಿಂದ ಯುವ ಕೈದಿಗಳಿಗೆ ಹೊರಬಂದ ಮೇಲೆ ಅನುಕೂಲವಾಗಲಿದೆ ಎಂದರು.

ವಿಶೇಷ ಜೈಲು: ಪರಪ್ಪನ ಅಗ್ರಹಾರದಲ್ಲಿರುವ ಮಹಿಳಾ ಕೈದಿಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಹೊಸ ಕಟ್ಟಡ ಉದ್ಘಾಟನೆ ಆಗಲಿದೆ ಎಂದ ಅವರು, ಒಂದು ಸಾವಿರ ಕಾರಾಗೃಹ ಸಿಬ್ಬಂದಿ ನೇಮಕಕ್ಕೆ ಸರಕಾರ ಆದೇಶಿಸಿದ್ದು, ಅವುಗಳಲ್ಲಿ 782 ವಾರ್ಡನ್ ಹುದ್ದೆ, ಹಾಗೂ 22 ಜೈಲರ್ ಹುದ್ದೆಗಳನ್ನು ಮೂರು ತಿಂಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೈದಿಗಳಿಗೆ ಎಸ್‌ಬಿಐ ವಿಮೆ ಮಾಡಿಸಲಾಗಿದ್ದು, ಅವರು ಒಂದು ವರ್ಷಕ್ಕೆ 42 ರೂ. ಕಟ್ಟಬೇಕು. ಕೈದಿಗಳು ಬಿಡುಗಡೆಯಾಗುವ ವೇಳೆ 2 ಲಕ್ಷ ರೂ. ಸಿಗಲಿದೆ. ಒಂದು ವೇಳೆ ಜೈಲಿನಲ್ಲಿ ಅಕಾಲಿಕ ಮರಣ ಹೊಂದಿದರೆ ಆ ಹಣ ಅವರ ಕುಟುಂಬಸ್ಥರಿಗೆ ಸಿಗಲಿದೆ ಎಂದು ಬಂದಿಖಾನೆಯ ಹಿರಿಯ ಪೊಲೀಸ್ ಅಧಿಕಾರಿ ರೇವಣ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News