ತರಬೇತುದಾರರ ನೇಮಕಾತಿಗೆ ಕೂಡಲೇ ಗಮನಹರಿಸಿ

Update: 2017-12-13 18:42 GMT

ಮಾನ್ಯರೇ,

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಇದರ ಅಧೀನದಲ್ಲಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರಿಯ ಕ್ರೀಡಾ ಹಾಸ್ಟೆಲ್‌ಗಳು ಹಾಗೂ ಹಿರಿಯ ಕ್ರೀಡಾ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ತರಬೇತುದಾರರ ಕೊರತೆ ಇದೆ. ಇದರಿಂದ ಕ್ರೀಡಾ ಹಾಸ್ಟೆಲ್‌ಗಳಲ್ಲಿ ದಾಖಲಾಗಿ ಕ್ರೀಡಾ ಸಾಧನೆಯ ಕನಸು ಕಂಡಿರುವ ಕ್ರೀಡಾ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
 
ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ತರಬೇತುದಾರರ ನೇಮಕಾತಿ ನಡೆಯದ ಪರಿಣಾಮವಾಗಿ ಇಂದು ರಾಜ್ಯದಲ್ಲಿ ತರಬೇತುದಾರರ ಕೊರತೆ ಉಂಟಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನೇಕ ಕ್ರೀಡಾ ಹಾಸ್ಟೆಲ್‌ಗಳಲ್ಲಿ ತರಬೇತುದಾರರು ಇಲ್ಲದೆ ಕ್ರೀಡಾಪಟುಗಳ ದೈನಂದಿನ ಕ್ರೀಡಾ ಚಟುವಟಿಕೆಗೆ ಅಡಚಣೆಯಾಗಿದೆ. ಸಾವಿರಾರು ಕೋಟಿ ಅನುದಾನದಲ್ಲಿ ನಡೆಯುತ್ತಿರುವ ಕ್ರೀಡಾ ಹಾಸ್ಟೆಲ್‌ಗಳಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ, ವಿವಿಧ ತರಬೇತಿ ಸಲಕರಣೆಗಳು, ಕ್ರೀಡಾ ಸಮವಸ್ತ್ರಗಳು ಹಾಗೂ ಕ್ರೀಡಾ ಶೂಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೂರೈಸಲಾಗುತ್ತದೆ. ಆದರೆ ಶೇಕಡಾ 50 ಕ್ರೀಡಾ ಹಾಸ್ಟೆಲ್‌ಗಳಲ್ಲಿ ತರಬೇತುದಾರರೇ ಇರುವುದಿಲ್ಲ.

ಹಾಗೆಯೇ ರಾಜ್ಯದಲ್ಲಿ ಕರ್ನಾಟಕದ ಕ್ರೀಡಾ ಪ್ರಾಧಿಕಾರದ 87 ತರಬೇತುದಾರರು ಕ್ರೀಡಾ ಇಲಾಖೆಯಲ್ಲಿ 28 ಮಂದಿ ಗೌರವ ತರಬೇತುದಾರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಬಹುತೇಕ ತರಬೇತುದಾರರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇದರಂತೆ ಮಾನ್ಯ ಕ್ರೀಡಾ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ ಈಗಾಗಲೇ ಹಣಕಾಸು ಇಲಾಖೆಯ ಅನುಮತಿ ದೊರೆತಿದ್ದು 100 ತರಬೇತುದಾರರನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ. ಆದುದರಿಂದ ಸಂಬಂಧಪಟ್ಟ ಕ್ರೀಡಾ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ತರಬೇತುದಾರರನ್ನು ಸಕಾಲದಲ್ಲಿ ನೇಮಕಾತಿ ಮಾಡಬೇಕಾಗಿದೆ.

Writer - ಮನೋಜ್ ಅಡ್ಕರ್, ಸುಳ್ಯ

contributor

Editor - ಮನೋಜ್ ಅಡ್ಕರ್, ಸುಳ್ಯ

contributor

Similar News