ಬಹರೈನ್ ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸಂಘದಿಂದ ಮನವಿ

Update: 2017-12-14 13:13 GMT

ಬಹರೈನ್, ಡಿ. 14: ದ್ವೀಪ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ 'ಕನ್ನಡ ಸಂಘ ಬಹರೈನ್' ಆಯೋಜಿಸಿದ್ದ ಅನಿವಾಸಿ ಕನ್ನಡಿಗರ ಸಮ್ಮೇಳನ ಇಲ್ಲಿನ ಜುಫೆರ್ ಪರಿಸರದಲ್ಲಿರುವ ಓಲಿವ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. 

ಭಾರತೀಯ ಅನಿವಾಸಿ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣಾ ಅವರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಅನಿವಾಸಿ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತ ಸಂವಾದ ನಡೆಯಿತು. ನಂತರ ಮಾತನಾಡಿದ ಡಾ. ಆರತಿ ಕೃಷ್ಣಾ ಅವರು ಮುಂದಿನ ದಿನಗಳಲ್ಲಿ ಅನಿವಾಸಿ ಕನ್ನಡಿಗರ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಮಾತ್ರವಲ್ಲದೆ ಈ ನಿಟ್ಟಿನಲ್ಲಿ ಅನಿವಾಸಿ ಭಾರತೀಯ ಅನೇಕ ನೀತಿಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಹೆಚ್ಚಿನ ವಿವರ ನೀಡಿದರು. 

ಕಾರ್ಯಕ್ರಮದಲ್ಲಿ ಡಾ. ಆರತಿ ಕೃಷ್ಣಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮಾತನಾಡಿ, ಕನ್ನಡ ಸಂಘ ಬಹರೈನ್ ನ  ನಲವತ್ತು ವರ್ಷಗಳ ಇತಿಹಾಸದ ಬಗ್ಗೆ ವಿವರಿಸಿ, ಬಹರೈನ್ ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಕರ್ನಾಟಕ ರಾಜ್ಯ ಸರಕಾರಕ್ಕೆ ಡಾ. ಆರತಿ ಕೃಷ್ಣಾ ಅವರ ಮೂಲಕ  ಮನವಿ ಪತ್ರವನ್ನು  ಹಸ್ತಾಂತರಿಸಿದರು.

ವೇದಿಕೆಯಲ್ಲಿ ಇಲ್ಲಿನ ಖ್ಯಾತ ಭಾರತೀಯ ಉದ್ಯಮಿ ಅಲ್ ನಮಾಲ್ ಮಸೂಹ ಸಂಸ್ಥೆಗಳ ಚೇಯರ್ ಮ್ಯಾನ್ ವರ್ಗೀಸ್ ಕುರಿಯನ್, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್,  ಭಾರತೀಯ ದೂತವಾಸದ ಪ್ರತಿನಿಧಿ ಆನಂದ್ ಪ್ರಕಾಶ್, ಉದ್ಯಮಿಗಳಾದ ಮುಹಮ್ಮದ್ ಮನ್ಸೂರ್ ಹಾಗು ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು. 

ಈ ಸಂದರ್ಭ ಡಾ. ಯು.ಟಿ. ಇಫ್ತಿಕಾರ್, ಆನಂದ್ ಪ್ರಕಾಶ್ ಹಾಗು ವರ್ಗೀಸ್ ಕುರಿಯನ್ ಅವರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. 

ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News