‘ಎಸ್ಸಿ-ಎಸ್ಟಿ ಉದ್ಯಮದಾರರಿಗೆ ಮಾರುಕಟ್ಟೆ ವ್ಯವಸ್ಥೆ’

Update: 2017-12-14 16:03 GMT

ಬೆಂಗಳೂರು, ಡಿ.14: ಎಸ್ಸಿ-ಎಸ್ಟಿ ಸಮುದಾಯದ ಉದ್ಯಮದಾರರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಪ್ರೋತ್ಸಾಹ ಧನ ನೀಡುವುದರೊಂದಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದೆಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ನಿರ್ದೇಶಕ ಡಾ.ಟಿ.ಜಿ.ಎಸ್.ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ(ಎಂಎಸ್‌ಎಂಇ) ಹಾಗೂ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ(ಎನ್‌ಎಸ್‌ಐಸಿ) ಕಾಸಿಯಾ ಸಹಯೋಗದೊಂದಿಗೆ ಆಯೋಜಿಸಿದ್ದ, ರಾಷ್ಟ್ರೀಯ ಎಸ್ಸಿ-ಎಸ್ಟಿ ಹಬ್ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವಲ್ಲಿ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವೂ ಪ್ರಮುಖ ಪಾತ್ರವಹಿಸುತ್ತವೆ. ಇನ್ನು ಎಸ್ಸಿ ಎಸ್ಟಿ ಸಮುದಾಯಕ್ಕೆ ಕೈಗಾರಿಕೆಗೆ ಪ್ರೋತ್ಸಾಹ ಧನ ನೀಡಿದರೆ, ಅವರ ಅಭಿವೃದ್ಧಿ ಕಾಣಬಹುದಾಗಿದೆ ಎಂದರು.

 ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ 12 ಮೀಸಲು ಕಚೇರಿಗಳನ್ನು ದೇಶದೆಲ್ಲಡೆ ತೆರೆಯಲಾಗಿದ್ದು, ಬೆಂಗಳೂರಿನಲ್ಲು ಒಂದು ರಿಜಿನಲ್ ಎಸ್ಸಿ-ಎಸ್ಟಿ ಹಬ್ ಪ್ರಧಾನ ಕಚೇರಿ ತೆರೆಯಲಾಗಿದೆ. ಎನ್‌ಎಸ್ಸ್‌ಎಚ್ ಸಾರ್ವಜನಿಕ ಸಂಗ್ರಹಣೆ ನೀತಿಗೆ ಅನುಗುಣವಾಗಿ ಗುರಿ, ಸಾಧನೆ ಮತ್ತು ಆಜ್ಞೆ ಪಾಲಿಸುವುದಾಗಿದೆ ಎಂದು ಅವರು ಹೇಳಿದರು.

  ಕಾಸಿಯಾ ಗೌರವಾಧ್ಯಕ್ಷ ಹನುಮಂತೇಗೌಡ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯಕ್ಕೆ ಕೈಗಾರಿಕೆ ಬಗ್ಗೆ ಅರಿವು ಮೂಡಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಕೈಗಾರಿಕೆಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಸೇರಿದಂತೆ ಇನ್ನಿತರ ಮಾಹಿತಿ ದೊರೆಯಲಿದ್ದು, ಸಮ್ಮೇಳನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

  ಸಮ್ಮೇಳನದಲ್ಲಿ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕ ರವಿಕುಮಾರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News