ಬಾಲಕಿಗೆ ಚೂರಿಯಿಂದ ಇರಿಯಲಾಗಿದೆ ಎಂಬುದು ಸುಳ್ಳು ಸುದ್ದಿ: ಗೃಹ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು, ಡಿ.14: ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಕೆಲವು ದುಷ್ಟ ಶಕ್ತಿಗಳು ಯತ್ನಿಸುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತುರ್ತು ಸಭೆ ನಡೆಸಿದರು.
ಗುರುವಾರ ವಿಕಾಸಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೋಮುಗಲಭೆಗಳನ್ನು ತಡೆಗಟ್ಟುವುದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಯಾವುದೇ ಸಮಸ್ಯೆಗಳು ಸೃಷ್ಟಿಯಾಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ರಾಜ್ಯದ ಏಳು ವಲಯಗಳ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ರಾಮಲಿಂಗಾರೆಡ್ಡಿ ತಾಕೀತು ಮಾಡಿದ್ದಾರೆ.
"ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ದಿವ್ಯ ದೃಷ್ಟಿಯಿದೆ. ಶವ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಅಲ್ಲದೆ, ಪರೇಶ್ ಮೇಸ್ತ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರೂ ಇದ್ದಾರೋ, ಇಲ್ಲ ನಾಪತ್ತೆಯಾಗಿದ್ದಾರೋ ಎಂಬುದು ಅವರಿಗೆ ತಮ್ಮ ದಿವ್ಯ ದೃಷ್ಟಿಯಿಂದ ಗೊತ್ತಾಗುತ್ತದೆ" ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ಪೊಲೀಸ್ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪರೇಶ್ ಮೆಸ್ತಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೆ ಇದ್ದಲ್ಲಿ, ಬಿಜೆಪಿಯವರು ಇದನ್ನು ಮತ್ತಷ್ಟು ದೊಡ್ಡದು ಮಾಡುತ್ತಿದ್ದರು. ಹೊನ್ನಾವರದಲ್ಲಿ ಬಾಲಕಿಯೊಬ್ಬಳಿಗೆ ಚಾಕುವಿನಿಂದ ಇರಿಯಲಾಗಿದೆ ಎಂಬುದು ಸುಳ್ಳು ಸುದ್ದಿ. ಆಕೆ ಜಾರಿ ಬಿದ್ದ ಪರಿಣಾಮ ಗಾಯಗೊಂಡಿರುವುದಾಗಿ ಸ್ಥಳೀಯ ಶಾಸಕ ಮಾಂಕಾಳ ವೈದ್ಯ ಸ್ವತಃ ನನಗೆ ದೂರವಾಣಿ ಕರೆ ಮಾಡಿ ಹೇಳಿದ್ದಾರೆ" ಎಂದರು.
ಬಿಜೆಪಿಯವರು ತಮ್ಮದು ‘ಗೊಬೆಲ್ಸ್ ಥಿಯರಿ’ ಅನ್ನೋದನ್ನು ಪದೇ ಪದೇ ಸಾಬೀತು ಮಾಡೋಕೆ ಹೋಗುತ್ತಾರೆ. ಹೆಣ ಬಿದ್ದರೆ ಸಾಕು ಬಿಜೆಪಿಯವರು ಅದರ ಮೇಲೆ ರಾಜಕೀಯ ಮಾಡುತ್ತಾರೆ. ಪಿಎಫ್‌ಐ ಮತ್ತು ಬಿಜೆಪಿ ನಡುವೆ ಇರುವ ವೈಷಮ್ಯವೇ ಕೊಲೆಗಳಿಗೆ ಕಾರಣ. ಈ ರೀತಿ 11 ಪ್ರಕರಣಗಳು ನಡೆದಿವೆ. ಆದರೆ, ಬಿಜೆಪಿ ಮಾತ್ರ 18-20 ಪ್ರಕರಣಗಳಿವೆ ಎನ್ನುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಸಾಮಾಜಿಕ ಜಾಲತಾಣಗಳು ಇಂದು ದುರ್ಬಳಕೆಯಾಗುತ್ತಿದ್ದು, ತಪ್ಪು ಮಾಹಿತಿ ನೀಡಿ, ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಅಂತಹವರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು, ಇಲ್ಲದಿದ್ದರೆ, ಕಾನೂನು ರೀತಿ ಕ್ರಮ ಎದುರಿಸಲು ಸಿದ್ಧವಾಗಲಿ ಎಂದು ಅವರು ಎಚ್ಚರಿಕೆ ನೀಡಿದರು.
ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ತರಬೇತಿಗೆ ಕಳುಹಿಸುವ ಚಿಂತನೆಯಿದೆ. ಇಂತಹ ಪ್ರಕರಣಗಳು ಬಂದಾಗ ಸೈಬರ್ ತಜ್ಞರ ಮೊರೆ ಹೋಗಬೇಕಾಗುತ್ತದೆ. ಆದುದರಿಂದ, ಸೈಬರ್ ಠಾಣೆಯ ಸಿಬ್ಬಂದಿಗೆ ತರಬೇತಿ ನೀಡಿ ಸಜ್ಜುಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಕೆಲ ಚುನಾವಣೆ ಸಮೀಕ್ಷೆಗಳು ನಿಜವಾಗಬಹುದು, ಕೆಲ ಸಮೀಕ್ಷೆಗಳು ತದ್ವಿರುದ್ಧವಾಗಬಹುದು. ಈಗಿನ ರಾಷ್ಟ್ರೀಯ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಗಳು ಪ್ರಭಾವಕ್ಕೊಳಗಾಗಿವೆ ಎಂದರು.
ಗುಜರಾತ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಸ್ಪರ್ಧೆಯಿದ್ದು, ಫಲಿತಾಂಶ ಏನು ಬರುತ್ತದೋ ಕಾದು ನೋಡೋಣ. ಗುಜರಾತ್ ಹಾಗೂ ಹಿಮಾಚಲಪ್ರದೇಶ ಎರಡು ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಗುಜರಾತ್ ಚುನಾವಣಾ ಫಲಿತಾಂಶವು ನಮ್ಮ ರಾಜ್ಯದ ಮೇಲೆ ಏನು ಪರಿಣಾಮ ಬೀರುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಅವಧಿಪೂರ್ವ ಚುನಾವಣೆಗೆ ಹೋಗುವ ಯಾವುದೇ ಆಲೋಚನೆ ನಮಗಿಲ್ಲ. ಸರಕಾರವು ಪೂರ್ಣಾವಧಿ ಮುಗಿಸಿದ ಬಳಿಕವಷ್ಟೇ ಚುನಾವಣೆಗೆ ಹೋಗುತ್ತದೆ. ಜನರ ಆಶೀರ್ವಾದದಿಂದ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.