ದುಬೈ: ಅಡುಗೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ

Update: 2017-12-15 06:44 GMT

ದುಬೈ, ಡಿ.15: ಯಾರು ಮೊದಲು ಅಡುಗೆ ಮಾಡಬೇಕೆಂಬ ವಿಚಾರದಲ್ಲಿ ಇಬ್ಬರು ವಲಸಿಗ ಕಾರ್ಮಿಕರ ನಡುವೆ ನಡೆದ ಜಗಳ ಅವರಲ್ಲೊಬ್ಬನ ಕೊಲೆಯಲ್ಲಿ ಪರ್ಯವಸಾನಗೊಂಡ ಘಟನೆ ಇಲ್ಲಿನ ಅಲ್ ಖೋಝ್ ಇಂಡಸ್ಟ್ರೀಯಲ್ ಏರಿಯಾದಲ್ಲಿ ನಡೆದಿದೆ. ಈ ಕೊಲೆಗೆ ಕಾರಣನಾದ ಭಾರತೀಯ ಮೂಲದ ಕಾರ್ಮಿಕನೊಬ್ಬನನ್ನು ಅಲ್ಲಿನ ಇತರ ಕಾರ್ಮಿಕರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಆರೋಪಿ ಮತ್ತು ಕೊಲೆಗೀಡಾದವರಿಬ್ಬರೂ ಹಿಂದೆ ಸ್ನೇಹಿತರಾಗಿದ್ದರೂ ಎರಡು ತಿಂಗಳ ಹಿಂದೆ ಮದ್ಯದ ನಶೆಯಲ್ಲಿ ಅವರಿಬ್ಬರೂ ಜಗಳವಾಡಿದ ನಂತರ  ಪರಸ್ಪರ ಮಾತು ಬಿಟ್ಟಿದ್ದರು. ಇತ್ತೀಚೆಗೆ ಇಬ್ಬರೂ ಅಡುಗೆ ಮಾಡಲೆಂದು ಅಡುಗೆ ಮನೆ ಪ್ರವೇಶಿಸಿದ್ದು, ಈ ಸಂದರ್ಭ ಇಬ್ಬರ ನಡುವೆ ಜಗಳವಾಗಿದೆ. ಆಗ ಭಾರತೀಯ ಮೂಲದ ಕಾರ್ಮಿಕ ಇನ್ನೊಬ್ಬನಿಗೆ ಚೂರಿಯಿಂದ ಯದ್ವಾತದ್ವಾ ಇರಿದಿದ್ದಾನೆ. ಹಲ್ಲೆಗೊಳಗಾದಾತ ಕುಸಿದು ಬೀಳುತ್ತಲೇ ಪರಾರಿಯಾಗಲು ಯತ್ನಿಸಿದ್ದು ಆರೋಪಿ ಈ ಸಂದರ್ಭ ವಯರ್ ಒಂದುಕಾಲಿಗೆ ಸಿಕ್ಕಿಕೊಂಡು ಬಿದ್ದ ಕಾರಣ ಆತನನ್ನು ಇತರರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿಗೊಳಗಾದವನನ್ನು ಕೂಡಲೇ ರಶೀದ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೂಲಗಳಿಂದ ತಿಳಿದು ಬಂದಂತೆ ಕೊಲೆಗೀಡಾದ ವ್ಯಕ್ತಿ ಮೊದಲು ಆರೋಪಿಯ ಬೆರಳಿಗೆ ಚೂರಿಯಿಂದ ತಿವಿದಿದ್ದು, ನಂತರ ಆತನ ಕೈಯಿಂದ ಚಾಕುವನ್ನು ಕಸಿದುಕೊಂಡ ಆರೋಪಿ ಆತನಿಗೆ ಇರಿದಿದ್ದಾನೆಂದು ಹೇಳಲಾಗಿದೆ. ಆರೋಪಿ ಅದಾಗಲೇ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರಿಂದ ಅದೇ ದಿನ ಆತ ದೇಶ ಬಿಟ್ಟು ತೆರಳುವ ಬಗ್ಗೆಯೂ ಯೋಚಿಸಿದ್ದನೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News