ಬೆಂಗಳೂರು : ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

Update: 2017-12-15 17:16 GMT

ಬೆಂಗಳೂರು, ಡಿ.15: ಬೆಂಗಳೂರಿನಲ್ಲಿ ‘ಸನ್ನಿ ಲಿಯೋನ್ ನೈಟ್’ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ಖಾಸಗಿಯಾಗಿ ಕೆಲವರು ಆಯೋಜಿಸಿದ್ದರು. ಆದರೆ, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಬೇಡವೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿದೇರ್ಶನ ನೀಡಿದ್ದೇನೆ ಎಂದು ವಿವರಿಸಿದರು.

ಈಗಾಗಲೇ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ಅದನ್ನು ವಾಪಾಸು ಪಡೆಯಲಾಗುವುದು ಎಂದ ಅವರು, ನಮ್ಮ ಸಂಸ್ಕೃತಿಗೆ ಪೂರಕವಲ್ಲದ ಕಾರ್ಯಕ್ರಮ ಆಯೋಜಿಸುವುದು ಬೇಡವೆಂದು ಹೇಳಿದ್ದೇನೆ. ದೇಶದ ಸಂಸ್ಕೃತಿಗೆ ಈ ರೀತಿಯ ಕಾರ್ಯಕ್ರಮಗಳು ವಿರೋಧವಾಗಿವೆ ಎಂದು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಧ್ವನಿ ಎತ್ತಿದ್ದಾರೆ ಎಂದರು.

ಇದೇ ಸಮಯದಲ್ಲಿ ಯಾವುದಾದರೂ ಶಾಸ್ತ್ರೀಯ ಸಂಗೀತ, ಸಂಗೀತ ಕಾರ್ಯಕ್ರಮ ಅಥವಾ ಭರತನಾಟ್ಯ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದರೆ, ನೀಡಲಾಗುವುದು. ಅಲ್ಲದೆ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಲು ದೊಡ್ಡ ದೊಡ್ಡ ಕಲಾವಿದರಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News