ರಥಯಾತ್ರೆಗಳಿಂದಾಗುವ ಲಾಭವೇನು?

Update: 2017-12-15 18:48 GMT

ಮಾನ್ಯರೇ,

ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ರಥಗಳನ್ನೇರಿ, ಯಾತ್ರೆಗೆ ಹೊರಟಿದ್ದಾರೆ. ಇಂತಹ ಯಾತ್ರೆಗಳು ಒಂದು ರೀತಿಯ ಜಾತ್ರೆಗಳಾಗಿ ಪರಿವರ್ತನೆಯಾಗಿದೆ. ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನು ನಿಂದಿಸುವುದು, ಆಡಳಿತ ಪಕ್ಷದವರು ವಿರೋಧ ಪಕ್ಷದವರ ಮೇಲೆ ಆರೋಪ ಮಾಡುವುದು ಇದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಇವರ ಇಂತಹ ಹೆಚ್ಚಿನ ಮಾತುಗಳು ಹಾಸ್ಯಾಸ್ಪದವಾಗಿರುತ್ತದೆ. ಇಂತಹ ಜಾತ್ರೆಗಳ ಸಂಘಟನೆಯ ಉದ್ದೇಶ ಚುನಾವಣೆಯ ಲೆಕ್ಕಾಚಾರವಷ್ಟೇ ಹೊರತು ಸಾಧನೆಯಾಗುವುದಿಲ್ಲ.

ಜನರಿಗಾಗಿ ಇಂತಹ ಯಾತ್ರೆಗಳನ್ನು ಸಂಘಟಿಸುವುದಾದರೆ ಅದರ ಆವಶ್ಯಕತೆಯೇ ಜನರಿಗಿಲ್ಲ. ಜನರಿಗೆ ಬೇಕಾಗಿರುವುದು ಅವರ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಜನಪರ ಕಾರ್ಯಕ್ರಮಗಳು ಮಾತ್ರ. ಹಿಂದಿನ ನಮ್ಮ ಜನಪ್ರತಿನಿಧಿಗಳು ಕೇವಲ ತಮ್ಮ ಜನಪರ ಕಾರ್ಯಕ್ರಮಗಳ ಮೂಲಕವೇ ಈಗಲೂ ಜನಮನದಿಂದ ಉಳಿದುಕೊಂಡಿದ್ದಾರೆ. ಅಲ್ಲದೆ ರಾಜಕೀಯೇತರ ವ್ಯಕ್ತಿಗಳೂ ಯಾವುದೇ ಯಾತ್ರೆಗಳನ್ನು ಮಾಡದೆ ಬಹಳಷ್ಟನ್ನು ಸಾಧಿಸಿದ್ದಾರೆ. ಹಸಿರು ಕ್ರಾಂತಿ ಮಾಡಿದ ಡಾ. ಸ್ವಾಮಿನಾಥನ್ ಯಾತ್ರೆ ಮಾಡಲಿಲ್ಲ. ತಮ್ಮ ಒಂದು ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ಹಸಿವಿಗೆ ಪರಿಹಾರ ಕಂಡುಕೊಂಡರು.

ಹಾಗೆಯೇ ಕ್ಷೀರ ಕ್ರಾಂತಿಯನ್ನು ಮಾಡಿದ ಡಾ. ಕುರಿಯನ್ ಇಂತಹ ಯಾತ್ರೆಗಳನ್ನು ಸಂಘಟಿಸಲಿಲ್ಲ. ಲಕ್ಷಾಂತರ ಎಕರೆ ಭೂಮಿಯನ್ನು ಶ್ರೀಮಂತರಿಂದ ಪಡೆದು ಬಡವರಿಗೆ ಹಂಚಿದ ಭೂದಾನ ಚಳವಳಿಯ ನೇತಾರ ವಿನೋಭಾ ಬಾವೆಯವರು ಪಾದಯಾತ್ರೆ ಹೊರಟರೇ ಹೊರತು ರಥಯಾತ್ರೆ ಮಾಡಲಿಲ್ಲ. ಇಂತಹ ಮಾದರಿಗಳನ್ನು ರಾಜಕೀಯ ಪಕ್ಷಗಳು ಅನುಸರಿಸಲಿ. ದುಡಿಯುವ ಕೈಗಳಿಗೆ ಕೆಲಸ ಸಿಗಲಿ, ನೀರಾವರಿ ಯೋಜನೆಗಳು ಅನುಷ್ಠಾನವಾಗುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಿ. ಆಗ ಕೃಷಿ ಸಮಸ್ಯೆಯೂ ಪರಿಹಾರವಾಗುತ್ತದೆ. ಹಸಿದ ಹೊಟ್ಟೆಗಳೂ ಆಹಾರ ಪಡೆಯುತ್ತವೆ. ಇಂತಹ ಅಭಿವೃದ್ಧಿಗಳು ಜನಮಾನಸದಲ್ಲಿ ನಿಲ್ಲಬಲ್ಲವೇ ಹೊರತು ರಥಯಾತ್ರೆಗಳಲ್ಲ.

Similar News