ನನ್ನ ಮುತ್ತಜ್ಜ ಕುವೆಂಪುರವರ ಮೇಷ್ಟರಾಗಿದ್ದರಂತೆ!

Update: 2017-12-16 11:49 GMT

ಮೈಸೂರಿಗೆ ಬಂದ ಕೃಷ್ಣಪ್ಪನವರು ಮಹಾರಾಜ ಕಾಲೇಜಿನಲ್ಲಿ ಅತ್ಯಂತ ಪ್ರೀತಿಯಿಂದ ಕಲಿಸುತ್ತಾರೆ. ಅಲ್ಲಿ ಅವರಿಗಿದ್ದ ಶಿಷ್ಯವೃಂದವಾದರೂ ಎಂಥದ್ದು! ಕುವೆಂಪು, ತೀ.ನಂ. ಶ್ರೀಕಂಠಯ್ಯ, ಕ.ವೆಂ. ರಾಘವಾಚಾರ್, ಕೆ. ವೆಂಕಟರಾಮಪ್ಪ, ವಿ ಸೀ...ಎಂಥ ಅದ್ಭುತ ಸಂಯೋಜನೆ! ನಿರೀಕ್ಷೆಗೆ ತಕ್ಕಂತೆ ಅತ್ಯಂತ ಪ್ರೀತಿಯಿಂದ ಪಾಠ ಕಲಿಸುತ್ತಾರೆ ಕೃಷ್ಣಪ್ಪನವರು.

                     ಕುವೆಂಪು

ಒಂದು ಮನೆಯ ಸದಸ್ಯರನ್ನು ಒಟ್ಟಾಗಿಡುವಲ್ಲಿ ಹೆಣ್ಣಿನ ಪಾತ್ರ ಗಂಡಿನದಕ್ಕಿಂತ ದೊಡ್ಡದು ಎಂದು ಅದೆಷ್ಟು ಬಾರಿ ಅನ್ನಿಸಿದೆಯೋ ನನಗೆ. ಅಪ್ಪನ ತಾಯಿ ತನ್ನ ನಲವತ್ತರ ಆಚೀಚಿನ ವಯಸ್ಸಿನಲ್ಲೇ ಕ್ಯಾನ್ಸರ್ ಬಂದು ಇಲ್ಲವಾಗಿದ್ದರು. ಆ ನಂತರ ಮುತ್ತಜ್ಜಿಯ ಮನೆಯವರ ಸಂಪರ್ಕ ಅಷ್ಟೇನೂ ಉಳಿಯಲಿಲ್ಲ. ಹಾಗಾಗಿ ಅವರ ತಂದೆಯಾದ - ಅಂದರೆ ನನ್ನ ಮುತ್ತಜ್ಜನಾದ ಬಿ. ಕೃಷ್ಣಪ್ಪನವರ ಹೆಸರು, ಕನ್ನಡವನ್ನು ಸ್ಪಷ್ಟ ಮಾತನಾಡುವ ನನಗೆ ಯಾರಾದರೂ ‘ಇದು ಬಿ. ಕೃಷ್ಣಪ್ಪನವರ ಮರಿಮಗಳೇ ತಗೋ’ ಅನ್ನುವಾಗ ಬರಿಯ ಒಂದು ನಾಮಪದವಾಗಿ ಮಾತ್ರ ನನ್ನ ನೆನಪಿನ ಮಡಿಕೆಗಳಲ್ಲಿ ಸೇರಿಕೊಂಡಿತ್ತು. ಒಂದಿಷ್ಟು ವರ್ಷಗಳು ಕಳೆದ ನಂತರ ಮುತ್ತಜ್ಜಿಯ ಮನೆಯವರು ಮತ್ತೆ ಸಂಪರ್ಕಕ್ಕೆ ಬಂದಾಗ ಅಪ್ಪನಿಗೆ, ಅವರ ಅಜ್ಜಿಯು ತನ್ನ ಪತಿ ಬರೆದಿದ್ದ 1920ರ ಸರಿಸುಮಾರಿನಲ್ಲಿ ಪ್ರಕಟವಾಗಿದ್ದ ಜೀರ್ಣವಾದ ಮೂರು ಪುಸ್ತಕಗಳನ್ನು ಕೊಟ್ಟರು. ಅಜ್ಜನ ಪುಸ್ತಕ ಅಂತ ಜೋಪಾನವಾಗಿಟ್ಟರು ಅಪ್ಪ. ಈಗ ಒಂದಿಷ್ಟು ವರ್ಷಗಳ ಕೆಳಗೆ ಆ ‘ಪಿತ್ರಾರ್ಜಿತ ಆಸ್ತಿ’ ನನ್ನ ಕೈ ಸೇರಿತು! ಕಾಲ ಕಳೆದಂತೆ ಮತ್ತಷ್ಟು ಜೀರ್ಣವಾಗಿದ್ದ ಪುಸ್ತಕಗಳನ್ನು ನನ್ನ ಕಪಾಟಿನಲ್ಲಿಟ್ಟೆ. ಅಲ್ಲಿಗೆ ಆ ವಿಷಯ ಮತ್ತೆ ಸುಷುಪ್ತಿಗೆ ಜಾರಿತು. ಮತ್ತೆ ಯಾವತ್ತೋ ಬಳಗದವರೆಲ್ಲ ಒಂದೆಡೆ ಸೇರಿದಾಗ ಮುತ್ತಜ್ಜ ಕುವೆಂಪು ಅವರಿಗೆ ಮೇಷ್ಟರಾಗಿದ್ದರಂತೆ ಅನ್ನುವ ವಿಷಯ ಬಂದಿತು. ಅರೆ! ಇಂಥ ಮುಖ್ಯ ವಿಷಯ ನನಗೆ ತಿಳಿಯದೇ, ಇವರಿಗೆಲ್ಲ ತಿಳಿದದ್ದು ಹೇಗೆ ಅಂತ ವಿಚಾರಿಸಿ ದಾಗ ಮೈಸೂರು ಮುಲಕನಾಡು ಸಭಾದ ವರು ‘ಮುಲಕನಾಡು ಮಹನೀಯರು’ ಅನ್ನುವ ಸೀರೀಸ್‌ನಲ್ಲಿ ನನ್ನ ಮುತ್ತಜ್ಜನ ಬಗ್ಗೆಯೂ ಒಂದು ಸಣ್ಣ ಪುಸ್ತಕ ಪ್ರಕಟಿಸಿ ದ್ದಾರೆ ಅನ್ನುವ ವಿಷಯ ಬೆಳಕಿಗೆ ಬಂದು ಓದಿದಾಗ ಮೊತ್ತಮೊದಲ ಬಾರಿ ನನ್ನೆದುರು ನಿಂತ ರಕ್ತಮಾಂಸದ ಮುತ್ತಜ್ಜನ ಬಗ್ಗೆ, ಕನ್ನಡ ಸಾಹಿತ್ಯ ಸಮ್ಮೇಳನ ಈಗ ತಾನೇ ಮುಗಿದ ದಿನಗಳಲ್ಲಿ ಇದೊಂದು ನೆನಪು ... ಮುತ್ತಜ್ಜ ಹುಟ್ಟಿದ್ದು 1885ನೇ ಇಸವಿಯಲ್ಲಿ. ವೆಂಕಟಕೃಷ್ಣಯ್ಯ ಮತ್ತು ಸಾವಿತ್ರಮ್ಮ (ನನ್ನ ಅಜ್ಜಿಯ ಹೆಸರೂ ಸಾವಿತ್ರಮ್ಮ) ಅವರ ತಂದೆ-ತಾಯಿ. ತುಂಬ ಬಡತನದ ಇದ್ದುದರಿಂದ ಓದುವಾಗಲೇ ಕೆಲಸವನ್ನೂ ಮಾಡಬೇಕಾಗುತ್ತದೆ. ಕಷ್ಟದ ಬದುಕಿನ ಕಾರಣವಾಗಿಯೋ ಏನೋ ಅವರ ಬದುಕೆಲ್ಲವೂ ತುಂಬ ಗಾಂಭೀರ್ಯದ ಅಧ್ಯಯನ, ಓದು ಇವುಗಳಲ್ಲೇ ಕಳೆಯುತ್ತದೆ. ಅದಕ್ಕೆ ಪ್ರತಿಫಲವಾಗಿ ಶುಲ್ಕ ವಿನಾಯಿತಿ, ಸ್ಕಾಲರ್‌ಶಿಫ್ ಎಲ್ಲ ಸಹಾಯವೂ ದೊರೆತು 1907 ರಲ್ಲಿ ಬಿ.ಎ ಪದವೀಧರರಾಗಿ ಮೈಸೂರು ಸಂಸ್ಥಾನದ ಪ್ರೌಢಶಾಲೆಗಳಲ್ಲಿ ಸಹಾಯಕ ಉಪಾಧ್ಯಾಯರಾಗಿ ಕೆಲಸ ಮಾಡುತ್ತಾರೆ. ಆ ನಂತರ ಕಿವುಡು-ಮೂಗರ ಶಾಲೆಗೆ ಮುಖ್ಯೋ ಪಾಧ್ಯಾಯರಾಗುತ್ತಾರೆ. ಕಿವುಡು-ಮೂಕ ಮಕ್ಕಳಿಗೆ ಊಟ- ತಿಂಡಿ ಎಲ್ಲವೂ ಸರಿಯಾಗಿ ತಲುಪಬೇಕು, ಅವರಿಗಾಗಿ ಮೀಸಲಿದ್ದ ಹಣ ಪೋಲಾಗಬಾರದು ಎಂಬ ಉದ್ದೇಶ ದಿಂದ ಪ್ರತೀ ಘಳಿಗೆಯೂ ಎಚ್ಚರ, ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಇದರ ನಡುವೆಯೇ ಕನ್ನಡ-ತೆಲುಗು ಭಾಷೆಗಳನ್ನು ವಿಶೇಷ ವಿಷಯವಾಗಿ ತೆಗೆದುಕೊಂಡು 1914ರಲ್ಲಿ ಮದ್ರಾಸು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿ ಗಳಿಸುತ್ತಾರೆ. ಆ ನಂತರ ಅವರು ವಿದ್ಯಾಭ್ಯಾಸ ಇಲಾಖೆಯಲ್ಲಿ ಕನ್ನಡ ಭಾಷಾಂತರಕಾರರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿರುವಾಗ ಅನೇಕ ಗ್ರೀಕ್ ಪುರಾಣ ಕತೆಗಳನ್ನು ಕನ್ನಡಕ್ಕೆ ಅನುವಾದಿಸುತ್ತಾರೆ. ಕೆಲವರು ಹೇಳುವ ಪ್ರಕಾರ ಕೃಷ್ಣಪ್ಪನವರಿಗೆ ಕೊಂಚ ಮಟ್ಟಿಗೆ ಗ್ರೀಕ್ ಭಾಷೆಯೂ ತಿಳಿದಿತ್ತು ಎನ್ನಲಾಗಿದೆ. ಆದರೆ ಆ ಭಾಷೆಯನ್ನು ಹೇಗೆ ಕಲಿತರು, ಹೇಳಿಕೊಟ್ಟವರ್ಯಾರು ಎಂಬ ಪ್ರಶ್ನೆಗಳನ್ನು ಹಾಕಿಕೊಂಡರೆ ಉತ್ತರ ಈಗ ಸಿಗುವುದಿಲ್ಲ. ಅವರಿಗೆ ‘ಕನ್ನಡದ ಮನೆಗೆ ಎಲ್ಲ ದಿಕ್ಕುಗಳಿಂದಲೂ ಬೆಳಕು ಬೀಳಬೇಕು. ಯಾವ ದಿಕ್ಕಿನ ಬೆಳಕಾದರೂ ಅದು ಬೆಳಕೇ’ ಎನ್ನುವ ಮಾತನ್ನು ಅವರು ಹೇಳುತ್ತಿದ್ದರು ಎಂದು ಎ.ಆರ್. ಕೃಷ್ಣಶಾಸ್ತ್ರಿಗಳು ನೆನಪಿಸಿಕೊಂಡಿದ್ದಾರೆ. ಹೀಗೆ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಭಾಷಾಂತರ ಮಾಡುತ್ತಾರೆ. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯ ವಿಚಾರ ಬರುತ್ತದೆ. ಅದಕ್ಕಾಗಿ ನಡೆದ ಗ್ರಂಥಕರ್ತರ ಸಮಾವೇಶದಲ್ಲಿ ಬಿ.ಕೃಷ್ಣಪ್ಪನವರು ಎಲ್ಲ ಜವಾಬ್ದಾರಿ ಹೊತ್ತು, ಪರಿಷತ್ತಿನ ಸ್ಥಾಪನಾಕಾರ್ಯದಲ್ಲಿ ಮೊದಲಿನಿಂದ ಕಡೆಯವರೆಗೂ ಶ್ರಮಿಸಿದರೆಂದು ಅದರಲ್ಲಿ ಭಾಗವಹಿಸಿದ್ದ ಡಿವಿ ಗುಂಡಪ್ಪನವರು ಸ್ಮರಿಸುತ್ತಾರೆ. ಪರಿಷತ್ತು ಸ್ಥಾಪನೆಯಾದ ನಂತರ ಎಚ್‌ವಿ ನಂಜುಂಡಯ್ಯನವರು ಮೊದಲ ಅಧ್ಯಕ್ಷರಾದಾಗ, ಇವರು ಮೊದಲ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 05.05.1915ರಿಂದ 07.05.1916ರವರೆಗೆ ಕಾರ್ಯನಿರ್ವಹಿಸುತ್ತಾರೆ.

ಆಗ ಮಹಾರಾಜ ಕಾಲೇಜ್ ಮತ್ತು ಸೆಂಟ್ರಲ್ ಕಾಲೇಜ್ ಮದ್ರಾಸ್ ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುತ್ತವೆ. 1916 ಜುಲೈ 27ರಂದು ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತದೆ. ಎಚ್‌ವಿ ನಂಜುಂಡಯ್ಯನವರು ಮೊದಲ ಉಪಕುಲಪತಿಗಳಾಗಿ ಆಯ್ಕೆಯಾಗುತ್ತಾರೆ. ಆಗ ಕನ್ನಡ ಕಲಿಸಲು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯೊಂದು ಮಂಜೂರಾಗುತ್ತದೆ. ಆ ಹುದ್ದೆಗೆ ಅಪಾರ ಬೇಡಿಕೆ ಇರುತ್ತದೆ. ಆದರೆ ಎಚ್‌ವಿ ನಂಜುಂಡಯ್ಯನವರಿಗೆ ಆ ಸ್ಥಾನಕ್ಕೆ ತುಂಬ ಜ್ಞಾನಿಯೊಬ್ಬರನ್ನು ಆರಿಸಬೇಕು ಎಂದು ಮನಸ್ಸಿರುತ್ತದೆ. ಆ ಹುಡುಕಾಟದಲ್ಲಿ ಹಲವಾರು ಒತ್ತಡ, ವಿವಾದಾತ್ಮಕ ಬೆಳವಣಿಗೆಗಳ ನಡುವೆ ಆ ಸ್ಥಾನಕ್ಕೆ ಯೋಗ್ಯತೆ ಮತ್ತು ಸಾಮರ್ಥ್ಯಗಳ ಆಧಾರದ ಮೇಲೆ ಬಿ. ಕೃಷ್ಣಪ್ಪನವರೇ ಸರಿಯಾದ ವ್ಯಕ್ತಿ ಎಂದು ತೀರ್ಮಾನಿಸಿ, ಆ ಹುದ್ದೆಗೆ ಆಯ್ಕೆಯಾಗುತ್ತಾರೆ (ಡಿವಿಜಿ ಅವರ ‘ಸಾಹಿತ್ಯೋಪಾಸಕರು’ ಕೃತಿಯಿಂದ). ಅವರು ಮೈಸೂರಿಗೆ ಆ ಹುದ್ದೆ ವಹಿಸಿಕೊಳ್ಳಲು ಹೋಗಬೇಕಾದ್ದರಿಂದ ಸಾಹಿತ್ಯ ಪರಿಷತ್ತಿನ ಹುದ್ದೆಗೆ ರಾಜೀನಾಮೆ ನೀಡಿದರೂ, ಹಲವು ಕಾಲ ಕಾರ್ಯನಿರ್ವಾಹಕ ಸಮಿತಿಯ ಸಭಾಸದಸ್ಯರಾಗಿಯೂ, ಪರಿಷತ್ತಿನ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ಕೆಲಸ ಮುಂದುವರಿಸುತ್ತಾರೆ.

ಹೀಗೆ ಮೈಸೂರಿಗೆ ಬಂದು ಮಹಾರಾಜ ಕಾಲೇಜಿನಲ್ಲಿ ಅತ್ಯಂತ ಪ್ರೀತಿಯಿಂದ ಕಲಿಸುತ್ತಾರೆ. ಅಲ್ಲಿ ಅವರಿಗಿದ್ದ ಶಿಷ್ಯವೃಂದವಾದರೂ ಎಂಥದ್ದು! ಕುವೆಂಪು, ತೀ.ನಂ. ಶ್ರೀಕಂಠಯ್ಯ, ಕ ವೆಂ ರಾಘವಾಚಾರ್, ಕೆ ವೆಂಕಟರಾಮಪ್ಪ, ವಿ ಸೀ...ಎಂಥ ಅದ್ಭುತ ಸಂಯೋಜನೆ! ನಿರೀಕ್ಷೆಗೆ ತಕ್ಕಂತೆ ಅತ್ಯಂತ ಪ್ರೀತಿಯಿಂದ ಪಾಠ ಕಲಿಸುತ್ತಾರೆ ಕೃಷ್ಣಪ್ಪನವರು. ತುಂಬ ಅಧ್ಯಯನಶೀಲರಾದ ಅವರು ಎಂದೂ ಪೂರ್ವಸಿದ್ಧತೆಯಿಲ್ಲದೆ ತರಗತಿಗೆ ಹೋಗುತ್ತಿರಲಿಲ್ಲವಂತೆ, ಸಂಪೂರ್ಣ ಸಿದ್ಧರಾಗಿ ಬಂದು ಶಾಂತನದಿಯಂತೆ ಗಂಭೀರವಾಗಿ ಪಾಠ ಹೇಳುತ್ತಿದ್ದರಂತೆ, ವಿದ್ಯಾರ್ಥಿಗಳೊಡನೆ ಚರ್ಚೆ, ತಮಗೆ ತಿಳಿಯದಿದ್ದುದನ್ನು ತಿಳಿದಿಲ್ಲ ಎಂದು ಅತ್ಯಂತ ವಿನಯದಿಂದ ಒಪ್ಪಿಕೊಳ್ಳುತ್ತಿದ್ದರಂತೆ, ವಿದ್ಯಾರ್ಥಿಗಳ ಪ್ರಶ್ನೆಗೆ ಅತೀವ ತಾಳ್ಮೆಯಿಂದ ಉತ್ತರಿಸುತ್ತಿದ್ದರಂತೆ, ತಂದೆ ಮಕ್ಕಳನ್ನು ತಿದ್ದುವಂತೆ ವಿದ್ಯಾರ್ಥಿಗಳೊಡನೆ ವ್ಯವಹರಿಸುತ್ತಿದ್ದರಂತೆ... ಹೀಗೆಲ್ಲಾ ಈ ಶಿಷ್ಯರು ಪ್ರೀತಿಯಿಂದ ಮುತ್ತಜ್ಜನನ್ನು ನೆನೆಯುತ್ತಾರೆ. ವಿ ಸಿ ಅವರು ತಮ್ಮ ‘ಕಾಲೇಜ್ ದಿನಗಳು’ ಪುಸ್ತಕದಲ್ಲಿ ಪರೀಕ್ಷೆಯ ಸಮಯದಲ್ಲಿ ಕೃಷ್ಣಪ್ಪನವರು ಬರಬಹುದಾದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತ ‘ಕವಿಯ ಶೈಲಿಯ ವಿಷಯ ಬಂದು ಮತ್ತೇನೂ ಹೇಳಲು ತೋಚದಿದ್ದರೆ ಈ ಕಾವ್ಯ ಪ್ರೌಢವಾಗಿಯೂ, ರಸಭರಿತವಾಗಿಯೂ ಇದೆ ಎಂದು ಬರೆದು ಬನ್ನಿ’ ಎಂದು ಹೇಳುತ್ತಿದ್ದ ರೀತಿಯನ್ನು ತಿಳಿಹಾಸ್ಯದಲ್ಲಿ ಸ್ಮರಿಸಿದ್ದಾರೆ. ಕುವೆಂಪು ಅವರು ತಮ್ಮ ಆತ್ಮಚರಿತ್ರೆ ‘ನೆನಪಿನ ದೋಣಿ’ಯಲ್ಲಿ ಮುತ್ತಜ್ಜನ ಬಗ್ಗೆ ಸ್ಮರಿಸಿದ್ದಾರೆ. ಮೊತ್ತಮೊದಲ ಕನ್ನಡ ಕವನ ‘ಪೂವು’ ಬರೆದಿದ್ದು ಜುಲೈ 10, 1924 ರಂದು. ಅಲ್ಲಿಯವರೆಗೆ ಕುವೆಂಪು ಬರೀ ಇಂಗ್ಲಿಷ್ ಕವಿತೆಗಳನ್ನು ಬರೆಯುತ್ತಿದ್ದವರು, ಕನ್ನಡ ಕವನಗಳನ್ನು ಬರೆದು ಅವನ್ನೆಲ್ಲ ಒಂದು ನೋಟ್ ಪುಸ್ತಕದಲ್ಲಿ ಬರೆದು ‘ಪುಷ್ಪಗೀತೆ’ ಎನ್ನುವ ಹೆಸರಿಟ್ಟು ತಮ್ಮ ಮೇಷ್ಟರಾದ ಬಿ. ಕೃಷ್ಣಪ್ಪನವರಿಗೆ ಕೊಡುತ್ತಾರೆ. ಅದನ್ನು ಓದಿದ ನನ್ನ ಮುತ್ತಜ್ಜ ಅದನ್ನು ಅನೇಕ ಕಡೆ ತಿದ್ದಿದ್ದಾಗಿ ಬರೆದಿದ್ದಾರೆ ಕುವೆಂಪು ಅವರು. ಪೂವು ಅನ್ನುವ ಪದವನ್ನು ಪೂ ಎಂದೂ, ಎಳೆದಾದ ರವಿಕಿರಣ ಇಳೆಯನ್ನು ತೊಳೆವಾಗ ಎನ್ನುವುದನ್ನು ಎಳದಾದ ರವಿಕಿರಣ ವಿಳೆಯನ್ನು ತೊಳೆವಾಗ ಎಂದೂ... ಹೀಗೆ ಹತ್ತು-ಹನ್ನೆರಡು ಬದಲಾವಣೆಗಳನ್ನು ಸೂಚಿಸಿ ಕೊನೆಯಲ್ಲಿ ರೈಟ್ ಮಾರ್ಕ್ ಹಾಕಿದ್ದಾರೆ. ಇದಲ್ಲದೇ ಇನ್ನೂ ಕೆಲವು ಕವಿತೆಗಳನ್ನು ಓದಿ, ತಿದ್ದಿದ್ದಾರೆ. ಆ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ: ‘‘ನಾನಾಗಿದ್ದರೆ ಅದನ್ನು ವಂದನೆಗಳೊಂದಿಗೆ ಹಿಂದಿರುಗಿಸುತ್ತಿದ್ದೆ. ಅವರು ಆ ಕಸದ ರಾಶಿಯಲ್ಲಿಯೂ ರಸವನ್ನು ಕಾಣುವ ಸಹೃದಯ, ಸುಹೃದಯತೆಯನ್ನು ಪ್ರದರ್ಶಿಸಿ, ಕೆಲವು ಕವನಗಳ ಭಾಷೆಯನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಅವರ ವಿಮರ್ಶೆಯ ಮಹದೌದಾರ್ಯವನ್ನು ನೆನೆದರೆ ನನಗೀಗ ಆಶ್ಚರ್ಯವಾಗುತ್ತದೆ! ಅದರಲ್ಲಿಯೂ ಅವರು, ವೇಷಭೂಷಣಗಳಲ್ಲಿ ಕೋಟು, ಪ್ಯಾಂಟು, ಪೇಟ ಧರಿಸಿ ಇಂಗ್ಲಿಷ್ ಪ್ರೊಫೆಸರುಗಳಂತೆಯೇ ಇದ್ದರೂ, ಹಳೆಯ ಪಂಡಿತ ಸಂಪ್ರದಾಯದ ಕಡೆಯಿಂದ ಬಂದವರು ಎಂಬುದನ್ನು ಮರೆಯುವಂತಿಲ್ಲವಾದ್ದರಿಂದ ಅವರ ಈ ತೆರನಾದ ವಿಮರ್ಶೆಗೆ ಕರುಣೆ ಪ್ರೀತಿಗಳೇ ಹೃದಯ ಶ್ವಾಸಕೋಶಗಳಾಗಿದ್ದುವೆಂದು ಭಾವಿಸುತ್ತೇನೆ! ತರುಣನಿಗೆ ಉತ್ಸಾಹ ಭಂಗವಾದೀತೆಂದು ಹೆದರಿಯೇ ಬೆನ್ನು ತಟ್ಟಿ ಪ್ರೋತ್ಸಾಹಿಸಿದಂತಿದೆ.’’ ಮತ್ತೊಂದೆಡೆ 1925ರಲ್ಲಿ ಕುವೆಂಪು ಅವರು ಕರ್ನಾಟಕ ಸಂಘದಲ್ಲಿ ‘ಪ್ರಕೃತಿ ಸೌಂದರ್ಯ’ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ ಕೃಷ್ಣಪ್ಪನವರು ಕುವೆಂಪು ಅವರನ್ನು ‘ದಿ ಬಡ್ಡಿಂಗ್ ಪೋಯೆಟ್ - ರವೀಂದ್ರನಾಥ್ ಟ್ಯಾಗೋರ್’ ಎಂದು ಕರೆದಿದ್ದನ್ನು ಅವರು ಸ್ಮರಿಸಿದ್ದಾರೆ. ಇವನ್ನೆಲ್ಲ ಓದಿದಾಗಿನ ನನ್ನ ಪರಿಸ್ಥಿತಿ ಊಹಿಸಿ! ಆಗ ಹುಟ್ಟಿದ ಧನ್ಯತಾಭಾವಕ್ಕೆ ಮತ್ಯಾವುದು ಸಮನಾದೀತು?! ‘ಕೃಷ್ಣಪ್ಪನವರೆಂದರೆ, ಎಂಥ ಹಾಸ್ಯಕ್ಕೂ ಬಾಯಿ ಹಾಕದೇ ತಮ್ಮ ಎದುರಿನಲ್ಲಿರುವ ಪುಸ್ತಕವನ್ನೇ ನೋಡುತ್ತಾ ಕುಳಿತ ಒಂದು ನಿಶ್ಚಲ ಮೂರ್ತಿಯೂ, ಮನೆಯಲ್ಲಿ ಊಟ-ತಿಂಡಿಗಳೆಡೆಗೆ ಕೂಡ ಗಮನ ಕೊಡದೆ ಕೆಲಸದಲ್ಲಿ ಮುಳುಗಿರುವ ನೀರವ ವ್ಯಕ್ತಿಯೂ, ಕಾಲೇಜು-ಮನೆ ಬಿಟ್ಟರೆ ಉಳಿದಂತೆ ಬೈಸಿಕಲ್ ಮೇಲೆ ಓಡಾಡುವ ಚಲನಚಿತ್ರದಂತೆಯೂ ಇದ್ದರು. ಯಾವುದೇ ರೀತಿಯ ವಿನೋದವಿಲ್ಲ, ವಿಶ್ರಾಂತಿಯ ಅಪೇಕ್ಷೆಯಿಲ್ಲ’ ಎಂದು ಬರೆಯುತ್ತಾರೆ ಕೃಷ್ಣ ಶಾಸ್ತ್ರಿಗಳು. ಕೃಷ್ಣಪ್ಪನವರು ಅಲ್ಲಿ ತಮ್ಮ ವೃತ್ತಿಯಲ್ಲದೇ ಮತ್ತೂ ಹಲವಾರು ಕೆಲಸಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಬಾಪು ಸುಬ್ಬರಾಯರ ‘ವಿದ್ಯಾದಾಯಿನಿ’ ಮಾಸಪತ್ರಿಕೆ ನಡೆಸುವಲ್ಲಿ ಅವರ ಜೊತೆಗೆ ಕೈಗೂಡಿಸುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂಎ ಪ್ರಾರಂಭವಾಗಲು ಹೋರಾಡುತ್ತಾರೆ. ಆರ್ಥಿಕವಾಗಿ ಯಾವುದೇ ಲಾಭವಿಲ್ಲದ ‘ಕರ್ನಾಟಕ ಗ್ರಂಥಮಾಲೆ’ಯನ್ನು ಒಂದೆರಡು ವರ್ಷ ಕಷ್ಟಪಟ್ಟು ನಡೆಸುತ್ತಾರೆ. ಆ ಸಮಯದಲ್ಲೇ ಅವರಿಗೆ ಕಣ್ಣಿನ ಸಮಸ್ಯೆ ಪ್ರಾರಂಭವಾಗುತ್ತದೆ. ಪ್ರೂಫ್ ನೋಡುವುದರಿಂದ ಹಿಡಿದು, ಅದರ ಎಲ್ಲ ಕೆಲಸಗಳನ್ನೂ ತಾವೇ ಮಾಡುವ ಕೃಷ್ಣಪ್ಪನವರನ್ನು ಅವರ ಮಿತ್ರರೊಬ್ಬರು ನಿಲ್ಲಿಸಿಬಿಡಬಾರದೇಕೆ ಎಂದು ಕೇಳಿದಾಗ ‘ಗ್ರಂಥಮಾಲೆಯು ನನ್ನ ಕೈಗೆ ಬಂದಮೇಲೆ ಸತ್ತುಹೋಯಿತೆಂದಾಗಬಾರದು ಎಂದು ಹೇಳುತ್ತಾ ಕೆಲಸ ಮುಂದುವರಿಸುತ್ತಾರೆ! ಕನ್ನಡ-ಕನ್ನಡ ನಿಘಂಟು ಮತ್ತು ಕನ್ನಡ-ಇಂಗ್ಲಿಷ್ ನಿಘಂಟುಗಳ ತಯಾರಿಕೆಯಲ್ಲಿ ಭಾಗಿಯಾಗುತ್ತಾರೆ. ಕನ್ನಡದ ಇಷ್ಟೆಲ್ಲ ಬಿಡುವಿಲ್ಲದ ಕೆಲಸಗಳ ನಡುವೆಯೂ ಅವರ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನು ರಚಿಸುತ್ತಾರೆ ಕೂಡಾ. ರಾಯಚೂರು ವಿಜಯ, ಕನಕೋರ್ಣಾರ್ಜನ, ಯವನಮಹಾವೀರ ಚರಿತೆ, ಯವನವೀರ ಕಥಾವಳಿ, ಅಭಿಜ್ಞಾನ ಶಾಕುಂತಲ ನಾಟಕದ ಕರ್ನಾಟಕ ಭಾವಾನುವಾದ ಮತ್ತು ವಿಮರ್ಶೆ, ಕೆಲವು ಪ್ರಾಚೀನ ಪುಸ್ತಕ ಭಂಡಾರಗಳು, ಕಾವ್ಯಕಲ್ಪಲತಾ ಗ್ರಂಥಮಾಲಾ, ಕರ್ನಾಟಕದ ಕೈಪಿಡಿ, ಹಳಗನ್ನಡ ವ್ಯಾಕರಣ ಮುಂತಾದ ಕೃತಿಗಳನ್ನೂ, ಪಾರಸೀ ರಾಮಾಯಣ ಮತ್ತು ತಲಕಾಡಿನ ಪಶ್ಚಿಮ ಗಂಗರು ಅನ್ನುವ ಅನುವಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಇದಲ್ಲದೇ ಹಲವಾರು ಬಿಡಿ ಲೇಖನಗಳು ಹಾಗೂ ವಿಮರ್ಶೆಗಳನ್ನೂ ಬರೆದಿದ್ದಾರೆ. ನಿಘಂಟಿನ ಜವಾಬ್ದಾರಿಯೊಂದಿಲ್ಲದಿದ್ದರೆ ಬಹುಶಃ ಇನ್ನಷ್ಟು ಬರೆಯುತ್ತಿದ್ದರು ಎಂದು ಹೇಳುತ್ತಾರೆ ಎಆರ್ ಕೃಷ್ಣಶಾಸ್ತ್ರಿಗಳು.

ಅವರ ಕೊನೆಯ ದಿನಗಳಲ್ಲಿ, ಇದ್ದಕ್ಕಿದ್ದಂತೆ ಕಣ್ಣು ಕಾಣಿಸದಂತಾಗುತ್ತದೆ. ವಿದ್ಯಾರ್ಥಿಗಳು ಕಂಗಾಲಾಗುತ್ತಾರೆ. ಪಾಠ ಮುಗಿದಿಲ್ಲ, ಅದೂ ರನ್ನನ ‘ಗದಾಯುದ್ಧ’, ಹಳಗನ್ನಡದ್ದು. ಕಣ್ಣು ಕಾಣಿಸದಂತಾಗುವುದು ಅತೀ ದೊಡ್ಡ ಸಮಸ್ಯೆ. ತಮ್ಮದೇ ಸಮಸ್ಯೆಯಲ್ಲಿ ಮುಳುಗಿಹೋಗಲು ಇದು ಅತ್ಯಂತ ದೊಡ್ಡದೇ ಆದ ಕಾರಣ. ಹಾಗಿದ್ದಾಗಲೂ ಇವರು ತರಗತಿಗೆ ಬಂದು ವಿದ್ಯಾರ್ಥಿಯೊಬ್ಬ ಏರುದನಿಯಲ್ಲಿ ಪದ್ಯಗಳನ್ನು ಓದುತ್ತಾ ಹೋದಂತೆ ಇವರು ಅದಕ್ಕೆಲ್ಲ ಅರ್ಥ, ವಿವರಣೆ ಕೊಡುತ್ತಾ ಪಾಠ ಮುಗಿಸಿಕೊಡುತ್ತಾರೆ. ಆ ನಂತರ ಮುತ್ತಜ್ಜ ಮತ್ತೆಂದೂ ದೃಷ್ಟಿ ಮರಳಿ ಪಡೆಯುವುದಿಲ್ಲ. ಒಂದೆರಡು ವರ್ಷ ಆಗೀಗ ರಜೆ ಹಾಕುತ್ತ, ದೃಷ್ಟಿನಷ್ಟದೊಡನೆ ಹೋರಾಡುತ್ತಾ ಬದುಕಿ ಕೊನೆಗೆ 1928ರ ಫೆಬ್ರವರಿ 2ರಂದು ಕಾಲವಾಗುತ್ತಾರೆ, ಆಗ ಅವರಿಗೆ ಕೇವಲ 43 ವರ್ಷ ವಯಸ್ಸು...

ನಮ್ಮ ಸಂಸಾರವೆಂಬ ಚಿಕ್ಕ ಕೆರೆಯಲ್ಲಿ ಬಿದ್ದು ಕನ್ನಡ ಸಾಹಿತ್ಯಲೋಕವೆಂಬ ದೊಡ್ಡಕೆರೆಯಲ್ಲಿ ಎದ್ದು ಕುಳಿತ ಮುತ್ತಜ್ಜನ ಸ್ಮರಣೆ ಇಷ್ಟು ತಡವಾಗಿ ಮಾಡುತ್ತಿದ್ದೇನಲ್ಲ ಎಂಬ ವಿಷಾದ ಕೂಡ ಕಾಡುತ್ತಿದೆ ಈ ಹೊತ್ತು. ಆದರೆ ಅರಿವಿಗೆ ಯಾವ ಕಾಲವೂ ಸಕಾಲವೇ ಅಲ್ಲವೇ ಅನ್ನುವ ಆಶಾವಾದದೊಡನೆ ಬರಹ ಮುಗಿಸುತ್ತಿದ್ದೇನೆ ...

Writer - ಭಾರತಿ .ಬಿ.ವಿ.

contributor

Editor - ಭಾರತಿ .ಬಿ.ವಿ.

contributor

Similar News