ಸಾಲು ಮರದ ತಿಮ್ಮಕ್ಕನ ಹೆಸರಲ್ಲಿ ಸರಕಾರಿ ನರ್ಸರಿ: ಎಚ್.ಆಂಜನೇಯ

Update: 2017-12-16 15:38 GMT

ಬೆಂಗಳೂರು, ಡಿ. 16: ಸಾಲುಮರದ ತಿಮ್ಮಕ್ಕ ಅವರಿಗೆ 5 ಎಕರೆ ಜಮೀನು ಮಂಜೂರು ಮಾಡಿ, ಅಲ್ಲೆ ಸರಕಾರಿ ನರ್ಸರಿ, ಮನೆ ನಿರ್ಮಿಸಿ ಕೊಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ವಸಂತನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಲುಮರದ ತಿಮ್ಮಕ್ಕರಿಗೆ ಅಭಿನಂದನಾ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಬೆಂಗಳೂರು ಸುತ್ತಮುತ್ತ ಭೂಮಿ ಮಂಜೂರಿಗೆ ಕಾಲಾವಕಾಶ ಬೇಕಾಗುತ್ತದೆ. ಇಲ್ಲಿ ಭೂಮಿ ಬೆಲೆ ದುಬಾರಿಯಾಗಿದೆ ಎಂದ ಅವರು, ಒಂದು ವೇಳೆ ಸಾಲುಮರದ ತಿಮ್ಮಕ್ಕ ಅವರು ಚಿತ್ರದುರ್ಗ ಅಥವಾ ಇನ್ಯಾವುದೇ ಭಾಗದಲ್ಲಿ ಭೂಮಿ ಬಯಸಿದರೆ 5 ಎಕರೆ ಅಲ್ಲ, 10 ಎಕರೆಯನ್ನು ನೀಡಲು ಸಿದ್ಧವಿದ್ದೇವೆ. ಇದರ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ. ಆದರೆ ಬೆಂಗಳೂರಿನ ಸುತ್ತಮುತ್ತ ಭೂಮಿ ನೀಡಲು ಕಾಲಾವಕಾಶ ಹಿಡಿಯಲಿದೆ ಎಂದು ತಿಳಿಸಿದರು.

ಪರಿಸರಕ್ಕಾಗಿ ಸಾಲು ಮರದ ತಿಮ್ಮಕ್ಕ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆಗೆ ಇಂತಹ ಯಾವುದೆ ಕಾಳಜಿ ಇಲ್ಲ. ತಿಮ್ಮಕ್ಕ ಅವರು ತಮ್ಮ ಜೀವನವನ್ನೇ ಇದಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಇದನ್ನು ಸ್ಮರಿಸಬೇಕು. ಈಗಾಗಲೇ ತಿಮ್ಮಕ್ಕ ಅವರ ಸಮಸ್ಯೆಗಳಿಗೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಇನ್ನಷ್ಟು ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ನಾವು ಅಗತ್ಯವಾದ ಎಲ್ಲ ಕ್ರಮಗಳನ್ನು ವಹಿಸಲಿದ್ದೇವೆ ಎಂದು ಆಂಜನೇಯ ತಿಳಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ನಿಸಾರ್ ಅಹಮ್ಮದ್ ಅವರು ತಿಮ್ಮಕ್ಕ ಅವರಿಗೆ ನ್ಯಾಷನಲ್ ಗ್ರೀನರಿ-2017 ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಜಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ವಿಶ್ವ ಸಂತೋಷ ಭಾರತಿ ಸ್ವಾಮಿ, ಸೋಮಶೇಖರ ಶಿವಾಚಾರ್ಯ ಸ್ವಾಮಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಶರಣ ಡಾ.ಈಶ್ವರ ಮಂಟೂರ ಸ್ವಾಮಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್, ಪತ್ರಕರ್ತ ಶಿವಾನಂದ ತಗಡೂರು, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ನಾಗಾಂಬಿಕ ದೇವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಿಮ್ಮಕ್ಕ ಅವರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದೆ. ಅವರ ಚಿಕಿತ್ಸೆಗಾಗಿಯೇ ಅವರಿಗೆ ಸಂದಿದ್ದ ಚಿನ್ನದ ಪದಕ ಸೇರಿ ಅನೇಕ ಪ್ರಶಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಸರಕಾರಗಳು ಕ್ರೀಡಾಪಟುಗಳಿಗೆ ಕೋಟ್ಯಂತರ ರೂ.ನೀಡುತ್ತವೆ. ಆದರೆ, ಪರಿಸರಕ್ಕಾಗಿ ಜೀವನವನ್ನೇ ಮೀಸಲಿರಿಸಿದ ತಿಮ್ಮಕ್ಕ ಅವರಿಗೆ ಸೂಕ್ತ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿವೆ. ಆಸ್ಪತ್ರೆ ವೆಚ್ಚ ಸೇರಿದಂತೆ ಮನೆ, ಇನ್ನಿತರ ಸೌಲಭ್ಯವಿಲ್ಲ. ಸರಕಾರ ಕೂಡಲೇ ಇದಕ್ಕೆ ಸ್ಪಂದಿಸಬೇಕು.

-ಡಾ.ಉಮೇಶ್, ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News