ಆಸ್ಪತ್ರೆಗೆ ದುಬಾರಿ ಕಾರಿನಲ್ಲಿ ಬಂದವ ಮರಳಿ ಮನೆಗೆ ಹೋದದ್ದು ಆ್ಯಂಬುಲೆನ್ಸ್ ಚಲಾಯಿಸಿಕೊಂಡು!

Update: 2017-12-18 10:18 GMT

ಚೆನ್ನೈ, ಡಿ.18: ದುಬಾರಿ ಕಾರಿನಲ್ಲಿ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಹಳೆಯ ಆ್ಯಂಬುಲೆನ್ಸ್ ನ್ನು ಚಲಾಯಿಸಿಕೊಂಡು ಮನೆಗೆ ಹೋದ ವಿಚಿತ್ರ ಘಟನೆ ದಕ್ಷಿಣ ಚೆನ್ನೈಯ ಪಲವಕ್ಕಂನಲ್ಲಿ ನಡೆದಿದೆ.

ದುಬಾರಿ ಕಾರೊಂದರಲ್ಲಿ ನುಂಗಂಬಕ್ಕಂ ಆಸ್ಪತ್ರೆಗೆ ಆಗಮಿಸಿದ್ದ ಮಿಥಿಲ್ ಎಂಬವರು ಅನಾರೋಗ್ಯ ಪೀಡಿತ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಧ್ಯರಾತ್ರಿಯ ವೇಳೆಗೆ ಆಸ್ಪತ್ರೆಗೆ ಬಂದಿದ್ದ ಇವರು ನಂತರ ತೆರಳಿದ್ದರು. ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್ ಒಂದು ನಾಪತ್ತೆಯಾಗಿರುವುದು ಆಸ್ಪತ್ರೆಯವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಆ್ಯಂಬುಲೆನ್ಸ್ ಕಳ್ಳರು ಇದ್ದಾರೆಯೇ ಎಂದು ಪೊಲೀಸರು ತಲೆಕೆಡಿಸಿಕೊಳ್ಳುತ್ತಿದ್ದಾಗಲೇ ಮಿಥಿಲ್ ನ ಕಾರು ಚಾಲಕ ಆ್ಯಂಬುಲೆನ್ಸ್ ಚಲಾಯಿಸಿಕೊಂಡು ಆಸ್ಪತ್ರೆಗೆ ಬಂದಿದ್ದು, ತನ್ನ ಮಾಲಕ ‘ಕಣ್ತಪ್ಪಿನಿಂದಾಗಿ’ ಆ್ಯಂಬುಲೆನ್ಸ್ ಚಲಾಯಿಸಿಕೊಂಡು ಹೋಗಿದ್ದರು ಎಂದಿದ್ದಾನೆ.

ಆ್ಯಂಬುಲೆನ್ಸ್ ನ ಮಿರರ್ ಒಂದು ಹಾನಿಗೀಡಾಗಿದ್ದು. ಅದನ್ನು ದುರಸ್ತಿಪಡಿಸುವುದಾಗಿ ಮಿಥಿಲ್ ಹೇಳಿದ್ದಾರೆ. ಆಸ್ಪತ್ರೆಯವರು ಈ ಬಗ್ಗೆ ಯಾವುದೇ ದೂರು ನೀಡಲು ನಿರಾಕರಿಸಿದರೂ ಪೊಲೀಸರು ಈ ಬಗ್ಗೆ ವಿಚಾರಿಸುವುದಾಗಿ ತಿಳಿಸಿದ್ದಾರೆ.

ಮಿಥಿಲ್ ಕಣ್ತಪ್ಪಿನಿಂದ ಆ್ಯಂಬುಲೆನ್ಸ್ ಚಲಾಯಿಸಿಕೊಂಡು ತೆರಳಿದ್ದು, ಮನೆಗೆ ತಲುಪಿದಾಗ ಕಾರು ಎಲ್ಲಿದೆ ಎಂದು ಮನೆಯವರು ಪ್ರಶ್ನಿಸಿದಾಗಲೇ ಪ್ರಮಾದದ ಅರಿವಾಗಿತ್ತು ಎಂದು ಮಿಥಿಲ್ ಕಾರು ಚಾಲಕ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News