ಹಲವಾರು ಮನೆಗಳು ಬೆಂಕಿಗೆ ಆಹುತಿಯಾಗಲು ಕಾರಣವಾಗಿತ್ತು ಈ ಕಲಾಕೃತಿ

Update: 2017-12-18 16:31 GMT

ಈ ಜಗತ್ತಿನಲ್ಲಿ ಹಲವಾರು ಸಂಗತಿಗಳಿಗೆ ಯಾವುದೇ ವಿವರಣೆಗಳಿರುವುದಿಲ್ಲ, ಈ ನಿಗೂಢತೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು ಸುಲಭವಲ್ಲ. ಇಟಲಿಯಲ್ಲಿ ಹಲವಾರು ಮನೆಗಳನ್ನು ಸುಟ್ಟುಹಾಕಿದ ಅಳುತ್ತಿರುವ ಬಾಲಕನೋರ್ವನ ವರ್ಣ ಕಲಾಕೃತಿ ಇಂತಹ ನಿಗೂಢ ಪ್ರಕರಣಗಳಲ್ಲೊಂದಾಗಿದೆ.

 ಈ ‘ಕ್ರೈಯಿಂಗ್ ಬಾಯ್’ ಅಥವಾ ‘ಅಳುತ್ತಿರುವ ಬಾಲಕ ’ ಕಲಾಕೃತಿಯು ಎಷ್ಟೊಂದು ಪ್ರಸಿದ್ಧವಾಗಿತ್ತೆಂದರೆ ಕಲಾವಿದ ಸಾವಿರಾರು ಸಂಖ್ಯೆಯಲ್ಲಿ ಇದರ ಸರಣಿ ಚಿತ್ರಗಳನ್ನು ರಚಿಸುವಂತಾಗಿತ್ತು. ಅಚ್ಚರಿಯ ಸಂಗತಿಯೆಂದರೆ ಈ ಕಲಾಕೃತಿಗಳಿಗೆ ತನ್ನಿಂತಾನೇ ಬೆಂಕಿ ಹತ್ತಿಕೊಳ್ಳುತ್ತಿತ್ತು! ಈ ನಿಗೂಢ ಕಲಾಕೃತಿಯ ಕುರಿತು ಮಾಹಿತಿಗಳಿಲ್ಲಿವೆ...

ಇಟಲಿಯ ಖ್ಯಾತ ಕಲಾವಿದ ಜಿಯೊವನ್ನಿ ಬ್ರಾಗೊಲಿನ್ ಎಂಬಾತ 1985, ಸೆಪ್ಟೆಂಬರ್‌ನಲ್ಲಿ ಈ ಕಲಾಕೃತಿಯನ್ನು ರಚಿಸಿದ್ದ. ಅಳುತ್ತಿರುವ ಸಣ್ಣಮಗುವಿನ ಮುಖವನ್ನು ಅವನು ಈ ಕಲಾಕೃತಿಯಲ್ಲಿ ಮೂಡಿಸಿದ್ದ. ಈ ಚಿತ್ರವು ಜನಪ್ರಿಯಗೊಂಡು ಭಾರೀ ಬೇಡಿಕೆ ಬಂದಿದ್ದರಿಂದ ಬ್ರಾಗೊಲಿನ್ ಅಂತಹುದೇ ಕೃತಿಗಳನ್ನು ಮತ್ತೆ ಮತ್ತೆ ರಚಿಸಿ ಮಾರಾಟ ಮಾಡಿದ್ದ.

ಆದರೆ ಈ ಕಲಾಕೃತಿಯನ್ನು ಖರೀದಿಸಿದವರ ಮನೆಗಳೆಲ್ಲ ಕೆಲವೇ ದಿನಗಳಲ್ಲಿ ಬೆಂಕಿಗಾಹುತಿಯಾಗಿದ್ದವು.

ಇದು ವಿಚಿತ್ರವೆನ್ನಿಸಬಹುದು, ಆದರೆ ಒಂದಿಲ್ಲೊಂದು ಕಾರಣದಿಂದ ಸುಟ್ಟು ಹೋಗಿದ್ದ ಎಲ್ಲ ಮನೆಗಳಲ್ಲಿ ಈ ಕಲಾಕೃತಿಯಿತ್ತು. ಆಘಾತದ ವಿಷಯವೆಂದರೆ ಈ ಮನೆಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದವು. ಅಚ್ಚರಿಯೆಂದರೆ ಈ ಮನೆಗಳಲ್ಲಿದ್ದ ’ಕ್ರೈಯಿಂಗ್ ಬಾಯ್’ ಚಿತ್ರಗಳಿಗೆ ಮಾತ್ರ ಯಾವುದೇ ಹಾನಿಯಾಗಿರಲಿಲ್ಲ!

ಈ ಅಚ್ಚರಿಯನ್ನು ಬೆಳಕಿಗೆ ತಂದವರು ಅಗ್ನಿಶಾಮಕ ದಳದ ಸಿಬ್ಬಂದಿಗಳು. ಪ್ರತಿ ಬಾರಿ ಬೆಂಕಿ ಆರಿಸಲು ಧಾವಿಸಿದಾಗಲೂ ಆ ಮನೆಗಳಲ್ಲಿ ಈ ನಿಗೂಢ ಕಲಾಕೃತಿ ಕಂಡು ಬಂದಿತ್ತು ಮತ್ತು ಅದು ಹೊಚ್ಚಹೊಸದರಂತೆ ಇತ್ತು, ಒಂದು ಗೆರೆಯೂ ಬಿದ್ದಿರಲಿಲ್ಲ.

ಈ ಸುದ್ದಿಯು ಹರಡಿದಾಗ ಅದನ್ನು ಕೇಳಿದವರೆಲ್ಲ ಇದೊಂದು ಮೂಢನಂಬಿಕೆಯ ಕಥೆ ಎಂದು ಆರಂಭದಲ್ಲಿ ಅಲ್ಲಗಳೆದಿದ್ದರು. ಆದರೆ ಬೆಂಕಿ ಅವಘಡಗಳು ಮುಂದುವರಿ ದಾಗಿ ಅವರೂ ನಂಬುವಂತಾಗಿದ್ದರು. ಅಂತಿಮವಾಗಿ ಈ ಕಲಾಕೃತಿಗೆ ‘ಶಾಪಗ್ರಸ್ತ ’ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು.

ಕಲಾಕೃತಿ ‘ಶಾಪಗ್ರಸ್ತ ’ಎಂದು ಕುಖ್ಯಾತಿಗೊಂಡಿದ್ದೇ ತಡ, ಈ ಸುದ್ದಿಯೂ ಎಲ್ಲೆಡೆಗೆ ಹರಡಿ ಜನರು ಅದನ್ನು ತಮ್ಮ ಮನೆಗಳಿಂದ ಹೊರಗೆಸೆಯಲು ಆರಂಭಿಸಿದ್ದರು. ಎಲ್ಲಕ್ಕೂ ಅಚ್ಚರಿಯ ವಿಷಯವೆಂದರೆ ಈ ಕಲಾಕೃತಿಗಳು ಮನೆಗಳಿಂದ ಹೊರಗೆಸೆಯಲ್ಪಟ್ಟಾಗ ದಿಢೀರ್‌ನೆ ಮನೆಗೆ ಬೆಂಕಿ ಹತ್ತಿಕೊಳ್ಳುವ ಘಟನೆಗಳೂ ನಿಂತುಹೋಗಿದ್ದವು. ಇಷ್ಟಾದ ಬಳಿಕ ವಿಶ್ವಾದ್ಯಂತ ಈ ಕಲಾಕೃತಿಯನ್ನು ನಿಷೇಧಿಸಲಾಗಿತ್ತು.

ಆದರೆ ಈ ಕಲಾಕೃತಿ ನಿಜಕ್ಕೂ ಶಾಪದ ಶಕ್ತಿಯನ್ನು ಹೊಂದಿತ್ತೇ ಅಥವಾ ಮನೆಗಳಿಗೆ ಬೆಂಕಿ ಹತ್ತಿಕೊಂಡ ಘಟನೆಗಳು ಕೇವಲ ಕಾಕತಾಳೀಯವಾಗಿದ್ದವೇ ಎನ್ನುವುದು ಈ ವರೆಗೆ ಸ್ಪಷ್ಟಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News