ರವಿಬೆಳಗೆರೆ ಮೇಲೆ ಸುಪಾರಿ ಹತ್ಯೆ ಆರೋಪ ಪ್ರಕರಣ: ಡಿ.21ಕ್ಕೆ ಜಾಮೀನು ತೀರ್ಪು

Update: 2017-12-18 16:24 GMT

 ಬೆಂಗಳೂರು, ಡಿ.18: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣ ಸಂಬಂಧ ‘ಹಾಯ್ ಬೆಂಗಳೂರ್’ ವಾರಪತ್ರಿಕೆ ಸಂಸ್ಥಾಪಕ ರವಿ ಬೆಳಗೆರೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಡಿ.21ಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದ್ದು, ಅಲ್ಲಿಯವರೆಗೆ ಮಧ್ಯಂತರ ಜಾಮೀನನ್ನು ವಿಸ್ತರಿಸಿದೆ.

ಸೋಮವಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಅರ್ಜಿ ವಿಚಾರಣೆಯೂ ನಗರದ 64ನೆ ಸಿಟಿ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆ ವೇಳೆ ವಾದ ಮಂಡಿಸಿದ ರವಿ ಬೆಳಗೆರೆ ಪರ ವಕೀಲ ದಿವಾಕರ್, ಹತ್ಯೆಗೆ ಆರೋಪಿಗಳು ತಯಾರಿ ಮಾಡಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಪೊಲೀಸರು ಮಾಡುತ್ತಿರುವ ಆರೋಪ ಸುಳ್ಳು. ಪೊಲೀಸರು ರವಿ ಬೆಳಗೆರೆ ಮನೆಗೆ ದಾಳಿ ಮಾಡಿದಾಗ 2 ಪಿಸ್ತೂಲು ಜಪ್ತಿ ಮಾಡಲಾಗಿದೆ ಎಂದರು. ಈ ಪಿಸ್ತೂಲುಗಳಿಗೆ ಪರವಾನಿಗೆ ಪಡೆಯಲಾಗಿತ್ತು. ಇನ್ನು 93 ಗುಂಡುಗಳು ಕಾನೂನು ಬದ್ಧವಾಗಿ ಖರೀದಿ ಮಾಡಲಾಗಿದೆ. ಒಬ್ಬರು ಒಂದು ವರ್ಷದಲ್ಲಿ 200 ಗುಂಡುಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ, ಶಶಿಧರ್ ಮುಂಡೆವಾಡಿ ಸ್ವಯಂ ಹೇಳಿಕೆ ಹೊರತು, ಬೇರೆ ಸಾಕ್ಷಿ ಇಲ್ಲ. ಎಲ್ಲವನ್ನು ಪೊಲೀಸರು ಸೃಷ್ಟಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

 ಅರ್ಜಿದಾರರ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತತಪಡಿಸಿದ ಸರಕಾರಿ ವಕೀಲರು, ಜಾಮೀನು ನೀಡದಂತೆ ಮನವಿ ಮಾಡಿದರು. ಹದಿನೈದು ವರ್ಷಗಳಿಂದ ರವಿ ಬೆಳಗೆರೆ ಡಬಲ್ ಬ್ಯಾರಲ್ ಬಂದೂಕು ಬಳಸುತ್ತಿದ್ದಾರೆ. ದೈಹಿಕವಾಗಿ ಸಮರ್ಥರು ಮಾತ್ರ ಡಬಲ್ ಬ್ಯಾರಲ್ ಬಂದೂಕು ಬಳಸಲು ಸಾಧ್ಯ ಎಂದು ಹೇಳಿದರು.

ಪೊಲೀಸರ ವಶದಲ್ಲಿದ್ದಾಗಲೇ ಸಿಗರೇಟ್ ಸೇದಿದ್ದಾರೆ. ಮೇಲ್ನೋಟದ ಆರೋಪದಿಂದ ಮಾತ್ರ ಪೊಲೀಸರು ಮೊಕದ್ದಮೆ ದಾಖಲಿಸಿಲ್ಲ. ಸ್ಪಷ್ಟ ಸಾಕ್ಷ್ಯಾಧಾರಗಳ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಹೀಗಾಗಿ, ಜಾಮೀನು ನೀಡಬಾರದೆಂದು ಪ್ರತಿವಾದ ಮಂಡಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ತೀರ್ಪನ್ನು ಡಿ.21ರವರೆಗೆ ಕಾಯ್ದಿದ್ದು, ಅಲ್ಲಿಯವರೆಗೆ, ಮಧ್ಯಂತರ ಜಾಮೀನನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News