ಜಿಗ್ನೇಶ್ ಮೇವಾನಿ ವಿಜಯ ಜಾತ್ಯತೀತತೆಯ ಗೆಲುವು: ದಲಿತ ದಮನಿತರ ಹೋರಾಟ ಸಮಿತಿ

Update: 2017-12-18 16:27 GMT

ಬೆಂಗಳೂರು, ಡಿ.18: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡಗಾಂವ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ವಿಜೇತರಾಗಿರುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿಯ ವಿಜಯ ಜಾತ್ಯತೀತೆಯ, ದಲಿತ, ದಮನಿತ ವರ್ಗಗಳ ಗೆಲುವಾಗಿದೆ ಎಂದು ದಲಿತ ದಮನಿತರ ಹೋರಾಟ ಸಮಿತಿ ಬಣ್ಣಿಸಿದೆ. ಸೋಮವಾರ ನಗರದ ಹಮೀದ್ ಷಾ ಬಿಲ್ಡಿಂಗ್‌ನಲ್ಲಿ ಆಯೋಜಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಜಿಗ್ನೇಶ್ ಮೇವಾನಿ ಒಂದು ವರ್ಷದಿಂದ ಗುಜರಾತ್ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಸಿಕೊಂಡು ಬಂದ ಹೋರಾಟವನ್ನು, ಗೋರಕ್ಷಕರೆನಿಸಿಕೊಂಡವರು ಊನಾದ ದಲಿತ ಯುವಕರನ್ನು ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಥಳಿಸಿದ್ದ ಘಟನೆಯ ನಂತರ ಇಡೀ ಗುಜರಾತಿನ ದಲಿತರು ಬಂಡಾಯವೆದ್ದು ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಲಾಯಿತು.

 ದಲಿತ ಅಸ್ಮಿತ ಯಾತ್ರೆಗೆ ಚಾಲನೆ ನೀಡಿ ದಲಿತ ಚಳವಳಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದ ಜಿಗ್ನೇಶ್ ಮೇವಾನಿ ನಂತರದಲ್ಲಿ ನಿರಂತರವಾಗಿ ಒಬ್ಬ ಸಮರ್ಥ ನಾಯಕನಾಗಿ ಹೊರಹೊಮ್ಮಿದ್ದಾರೆ. ಮೋದಿಯ ಗುಜರಾತ್ ಮಾದರಿಯ ಪೊಳ್ಳುತನವನ್ನು ಬಯಲುಗೊಳಿಸುತ್ತಾ ದಲಿತ-ದಮನಿತ ಸಮುದಾಯಗಳಿಗೆ ತೊಂದರೆಯನ್ನುಂಟು ಮಾಡಿದೆಯೇ ಹೊರತು ಯಾವ ಪ್ರಯೋಜನವನ್ನೂ ತಂದಿಲ್ಲ. ಬದಲಾಗಿ ಅಂಬಾನಿ, ಅದಾನಿಗಳಿಗಳಿಗೆ ಮಾತ್ರ ಲಾಭ ತಂದಿದೆ ಎಂಬ ವಿಷಯವನ್ನು ತಮ್ಮ ಹೋರಾಟಗಳ ಮೂಲಕವೆ ಬಯಲುಗೊಳಿಸಿದ್ದು ಜಿಗ್ನೇಶ್ ಮೇವಾನಿಯ ಸಾಧನೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಿತಿ ಮುಖಂಡ ಹುಲಿಕುಂಟೆ ಮೂರ್ತಿ ತಿಳಿಸಿದರು.

ಗುಜರಾತ್ ಮಾತ್ರವಲ್ಲದೇ ಇಡೀ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಆಶೋತ್ತರವನ್ನು ಪ್ರತಿನಿಧಿಸುತ್ತಿರುವ ಜಿಗ್ನೇಶ್ ಮೇವಾನಿಯನ್ನು ಗೆಲ್ಲಿಸಲು ಇಡೀ ದೇಶದ ಎಲ್ಲಾ ಹೋರಾಟಗಾರರು, ಜಾತ್ಯತೀತ ನಿಲುವಿನ ಪಕ್ಷಗಳು, ಸಂಘಟನೆಗಳು ಎಲ್ಲಾ ಬಗೆಯಲ್ಲಿ ಸಹಾಯ ಹಸ್ತ ನೀಡಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಕರ್ನಾಟಕದ ಕಾರ್ಯಕರ್ತರು ವಡಗಾಂವ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ನೂರಾರು ಜನರು ಸಹಾಯ ಹಣಕಾಸಿನ ನೆರವು ನೀಡಿದ್ದಾರೆ ಎಂದು ಸಮಿತಿ ಮುಖಂಡ ನೂರ್ ಶ್ರೀಧರ್ ಅಭಿಪ್ರಾಯಪಟ್ಟರು. ಚುನಾವಣಾ ಮತ ಎಣಿಕೆಯಲ್ಲಿ ಜಿಗ್ನೇಶ್ ಮೇವಾನಿ ಸಾಧಿಸಿರುವ ಗೆಲುವು ಇಡೀ ದೇಶದ ಜಾತ್ಯತೀತರ, ದಲಿತ, ದಮನಿತರ ಗೆಲುವು. ಇಡೀ ದೇಶವನ್ನು ವೈದಿಕ ಸಂಸ್ಕೃತಿಯ ತೆಕ್ಕೆಗೆ ತಳ್ಳಲು ಹೊರಟು ಅಸ್ಪಶ್ಯತೆಯನ್ನು ಜೀವಂತವಾಗಿಡುವ ಸಂಘಪರಿವಾರ ಮತ್ತು ಬಿಜೆಪಿಯ ದುಷ್ಟ ರಾಜಕಾರಣದ ವಿರುದ್ಧದ ಗೆಲುವು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೂಡಲೇ ಜನಪರ ಹೋರಾಟಗಳು ಗೆಲುವು ಸಾಧಿಸಿದಂತೆ ಆಗುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಜಿಗ್ನೇಶ್ ಮೇವಾನಿ ಮುಂದೆ ನಡೆಸಲಿರುವ ಹೋರಾಟಗಳಿಗೆ, ದಲಿತ ರಾಜಕಾರಣಕ್ಕೆ ಪೂರಕವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರಾದ ಗೌರಿ, ಬಿ.ಟಿ.ಜಾಹ್ನವಿ ಡಾ.ವಾಸು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News