"ಇದನ್ನು ಲೈಕ್ ಮಾಡಿ, ಶೇರ್ ಮಾಡಿ" ಎಂದು ಫೇಸ್ ಬುಕ್ ನಲ್ಲಿ ಬರೆಯುವ ಮುನ್ನ ಇದನ್ನು ಓದಿ

Update: 2017-12-18 16:28 GMT

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ದಿನನಿತ್ಯ ಸಾವಿರಾರು ಪೋಸ್ಟ್ ಗಳನ್ನು ನಾವು ವೀಕ್ಷಿಸುತ್ತೇವೆ. ಇವುಗಳಲ್ಲಿ ಕೆಲವು ಪೋಸ್ಟ್ ಗಳಲ್ಲಿ "ಲೈಕ್ ಮಾಡಿ, ಶೇರ್ ಮಾಡಿ" ಎಂದು ಬರೆದಿರುವುದನ್ನೂ ಗಮನಿಸಿದ್ದೇವೆ. ಲೈಕ್ ಮಾಡಲು  ಹಾಗು ಶೇರ್ ಮಾಡಲು ವಿನಂತಿಸುವ ಹಿಂದೆ ಪೋಸ್ಟ್ ರೀಚನ್ನು ಹೆಚ್ಚಿಸುವ ತಂತ್ರವಿದೆ. ಇದೀಗ ಈ ತಂತ್ರಕ್ಕೆ ಕಡಿವಾಣ ಹಾಕಲು ಫೇಸ್ ಬುಕ್ ನಿರ್ಧರಿಸಿದೆ.

ಪೋಸ್ಟ್ ರೀಚ್ ಅಂದರೆ ಪೋಸ್ಟ್ ತಲುಪುವ ಸಂಖ್ಯೆ. ಪೋಸ್ಟ್ ರೀಚನ್ನು ಹೆಚ್ಚಿಸಲು ‘ವಿನಂತಿಯ ತಂತ್ರ’ದ ಮೊರೆ ಹೋಗುವ ಪೇಜ್ ಗಳ ಅಡ್ಮಿನ್ ಗಳಿಗೆ ಕಡಿವಾಣ ಹಾಕಲಾಗುವುದು ಎಂದು ಫೇಸ್ ಬುಕ್ ತಿಳಿಸಿದೆ.

ವಿನಂತಿಯ ಮೂಲಕ ಫೇಸ್ ಬುಕ್ ಪೋಸ್ಟ್ ಗಳ ರೀಚ್ ಹೆಚ್ಚಿಸಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿನಂತಿಯ ತಂತ್ರಕ್ಕೆ ಮೊರೆ ಹೋಗುವವರನ್ನು ಗುರುತಿಸಿ ಅವರ ಪೇಜ್ ನಲ್ಲಿನ ಪೋಸ್ಟ್ ಗಳ ರೀಚನ್ನು ಕಡಿಮೆಗೊಳಿಸಲಾಗುವುದು ಎಂದು ಫೇಸ್ ಬುಕ್ ಹೇಳಿದೆ.

ಆದರೆ ‘ಉತ್ತಮ ಸ್ವಭಾವ’ದ ಮೂಲಕ ಕಳೆದುಕೊಂಡ ರೀಚ್ ಗಳನ್ನು ಮರಳಿ ಪಡೆಯಲೂ ಫೇಸ್ ಬುಕ್ ಅವಕಾಶ ನೀಡಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ನಾಪತ್ತೆಯಾದ ಮಕ್ಕಳ ಪತ್ತೆಗಾಗಿ, ಉತ್ತಮ ಉದ್ದೇಶಕ್ಕಾಗಿ ಹಣ ಸಂಗ್ರಹ ಮುಂತಾದ ಪೋಸ್ಟ್ ಗಳಲ್ಲಿ  ಶೇರ್ ಮಾಡಲು ವಿನಂತಿಸಿದ್ದರೆ ಇಂತಹ ಪೋಸ್ಟ್ ಗಳಿಗೆ ಫೇಸ್ ಬುಕ್ ದಂಡದಿಂದ ವಿನಾಯಿತಿ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News