ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಪಡೆಯುತ್ತಿದ್ದ 7 ಮಂದಿಯ ಬಂಧನ

Update: 2017-12-18 16:35 GMT

ಬೆಂಗಳೂರು, ಡಿ.18: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ಬಳಸಿ ಆಧಾರ್ ಸಂಖ್ಯೆ ಪಡೆಯುತ್ತಿದ್ದ ಜಾಲವನ್ನು ಭೇದಿಸಿರುವ ಇಲ್ಲಿನ ಬೆಳ್ಳಂದೂರು ಠಾಣಾ ಪೊಲೀಸರು, ಬಾಂಗ್ಲಾ ದೇಶದ ಆರು ಪ್ರಜೆಗಳು ಸೇರಿ ಏಳು ಜನರನ್ನು ಬಂಧಿಸಿದ್ದಾರೆ.

 ಬಾಂಗ್ಲಾದೇಶದ ರೂಬಿವುಲ್ಲಾ, ರಿಯಾದ್ ಖಾನ್, ಮುಹಮ್ಮದ್ ಖೋಖೊನ್, ಓಹಿದುಲ್ಲಾ, ಮುಹಮ್ಮದ್ ಕಲಾಂ, ಝಾಕೀರ್ ಹುಸೈನ್ ಹಾಗೂ ಏಜೆಂಟ್ ನಗರದ ಎಚ್‌ಎಸ್‌ಆರ್ ಲೇಔಟ್‌ನ ಸೈಯದ್ ಸೈಫುಲ್ಲಾ ಬಂಧಿತರಾಗಿದ್ದು, ಆಧಾರ್ ಸಂಖ್ಯೆ ಪಡೆಯಲು ಸಹಕರಿಸಿದ್ದ ಆರೋಪದಡಿ ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಚ್.ಸಿ.ಲೋಕೇಶ್ ಅವರನ್ನು ಸಹ ವಶಕ್ಕೆ ಪಡೆದಿದ್ದಾರೆ.

 ನಗರದ ಕಟ್ಟಡಗಳಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದಾರೆ. ಮಾರತ್ತಹಳ್ಳಿ ಹಾಗೂ ಇಬ್ಬಲೂರಿನಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದಾರೆ. ಬ್ಯಾಂಕ್ ಖಾತೆ ತೆರೆಯಲು ಅವರೆಲ್ಲ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಸಂಖ್ಯೆ ಪಡೆದಿರುವುದು ಗೊತ್ತಾಗಿದೆ. ಅವರು ಆಧಾರ್ ಸಂಖ್ಯೆ ಪಡೆಯಲು ಏಜಂಟ್ ಸೈಯದ್ ಸೈಫುಲ್ಲಾ ನೆರವಾಗಿದ್ದ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದರು. ಇನ್ನು ಪ್ರಕರಣ ಸಂಬಂಧ ಆಧಾರ್ ಸಂಖ್ಯೆಯ ಕಾರ್ಡ್‌ಗಳು ಹಾಗೂ ನಕಲಿ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಯುಐಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಅಶೋಕ್ ಲೆನಿನ್, ಆರೋಪಿಗಳ ವಿರುದ್ಧ ನ. 31ರಂದು ದೂರು ನೀಡಿದ್ದರು. ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು (471), ಆಧಾರ್ ಕಾಯ್ದೆ ಸೆಕ್ಷನ್ 34 ಮತ್ತು 42 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಎಫ್‌ಐಆರ್ ದಾಖಲಿಸಿಕೊಂಡಿದ್ದೆವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News