ಬಾಬಾ ರಾಮ್ ದೇವ್ ವಿರುದ್ಧ ನ್ಯಾಯಾಂಗ ನಿಂದನೆಯ ನೋಟಿಸ್ ಹೊರಡಿಸಿದ ಅಲಹಾಬಾದ್ ಹೈಕೋರ್ಟ್

Update: 2017-12-19 14:04 GMT

ಲಕ್ನೋ,ಡಿ.19: ನೊಯ್ಡಾದಲ್ಲಿ ಫುಡ್ ಪ್ಲಾಜಾ ಸ್ಥಾಪನೆಗಾಗಿ ತನಗೆ ಮಂಜೂರು ಮಾಡಲಾದ ಜಮೀನಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಆದೇಶಕ್ಕೆ ಅವಿಧೇಯತೆ ತೋರಿದ ಆರೋಪದಲ್ಲಿ ಬಾಬಾ ರಾಮದೇವ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಸೋಮವಾರ ನ್ಯಾಯಾಂಗ ನಿಂದನೆ ನೋಟಿಸನ್ನು ಹೊರಡಿಸಿದೆ. ದೂರಿನಲ್ಲಿ ರಾಮ್ ದೇವ್ ಅವರನ್ನು ಪತಂಜಲಿ ಆಯುರ್ವೇದ ಲಿ.ನ ನಿರ್ದೇಶಕರೆಂದು ಉಲ್ಲೇಖಿಸಲಾಗಿದೆ.

ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದಕ್ಕಾಗಿ ಗೌತಮ ಬುದ್ಧ ನಗರ(ನೊಯ್ಡಾ) ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರುಣ ವೀರ ಸಿಂಗ್ ಅವರ ವಿರುದ್ಧವೂ ಉಚ್ಚ ನ್ಯಾಯಾಲಯವು ನ್ಯಾಯಾಂಗ ನಿಂದನೆ ನೋಟಿಸ್‌ಗಳನ್ನು ಹೊರಡಿಸಿದೆ. ಫುಡ್ ಪ್ಲಾಜಾ ಪ್ರಕರಣದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಅದು ನಿರ್ದೇಶ ನೀಡಿದೆ. ಗೌತಮ ಬುದ್ಧ ನಗರದ ಕದರಪುರ ಗ್ರಾಮದ ರೈತ ಸೋಹನ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ದೂರಿನ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಎ.ಕೆ.ಮಿಶ್ರಾ ಅವರು ಈ ಆದೇಶವನ್ನು ಹೊರಡಿಸಿದರು.

ವಿವಾದಿತ ಜಮೀನಿನಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ನ್ಯಾಯಾಲಯವು 2013,ಎ.26ರಂದು ಆದೇಶಿಸಿದ್ದರೂ ಪ್ರತಿವಾದಿಗಳಾದ ರಾಮ್ ದೇವ್ ಮತ್ತು ಇತರರು ಗಡಿಯಲ್ಲಿ ತಂತಿಬೇಲಿಯನ್ನು ಅಳವಡಿಸಿ ಆದೇಶಕ್ಕೆ ಅವಿಧೇಯತೆ ತೋರಿಸಿದ್ದಾರೆ ಎಂದು ಸೋಹನ್ ದೂರಿನಲ್ಲಿ ಆರೋಪಿಸಿದ್ದಾರೆ.

ಯಮುನಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಈ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದ ರಾಜ್ಯ ಸರಕಾರವು ಬಳಿಕ ಅದನ್ನು ಫುಡ್ ಪ್ಲಾಜಾ ನಿರ್ಮಾಣಕ್ಕಾಗಿ ಪತಂಜಲಿಗೆ ಹಂಚಿಕೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News