ಸೃಜನಶೀಲ ಶಿಕ್ಷಣ - ಒಂದು ಚರ್ಚೆ

Update: 2017-12-19 17:58 GMT

ಶಿಕ್ಷಣದ ಕುರಿತಂತೆಯೂ ಸೃಜನಶೀಲತೆಯ ಕುರಿತಂತೆಯೂ ಡಾ. ಮಹಾಬಲೇಶ್ವರ ರಾವ್ ಹಲವು ಬಾರಿ ಬರೆದಿದ್ದಾರೆ. ಸೃಜನಶೀಲತೆಯ ಕುರಿತಂತೆ ತೀವ್ರ ಅಧ್ಯಯನ ಮಾಡಿದ ಹಿರಿಮೆಯೂ ಅವರಿಗಿದೆ. ಹಾಗೆಯೇ ಹೇಗೆ ಶಿಕ್ಷಣ ಅಂಕ ಪಟ್ಟಿಗಳಿಗೆ ಸೀಮಿತವಾಗಿ ಯಾಂತ್ರಿಕವಾಗಿದೆ ಎನ್ನುವುದರ ಬಗ್ಗೆಯೂ ಅವರು ಸಾಕಷ್ಟು ಬರೆದಿದ್ದಾರೆ. ಶಿಕ್ಷಣವನ್ನು ಹೇಗೆ ಸೃಜನಶೀಲಗೊಳಿಸಿ ಆ ಮೂಲಕ ವಿದ್ಯಾರ್ಥಿಗಳ ಒಳ ಪ್ರತಿಭೆಗಳನ್ನು ಬಹಿರಂಗವಾಗಿಸಬಹುದು ಎನ್ನುವ ಬಗ್ಗೆ ಅವರು ಚರ್ಚಿಸಿದ್ದಾರೆ. ‘ಸೃಜನಶೀಲ ಶಿಕ್ಷಣ’ ಈ ನಿಟ್ಟಿನಲ್ಲಿ ಸೃಜನಶೀಲತೆಯನ್ನು, ಶಿಕ್ಷಣವನ್ನು ವಿವರಿಸುವ ಅವರ ಇನ್ನೊಂದು ಕೃತಿಯಾಗಿದೆ.

ಸಂಶೋಧನೆಳ ಹಿಂದಿರುವ ಸೃಜನಶೀಲ ಮನಸ್ಸುಗಳನ್ನು ತೆರೆದಿಡುವ ಮೊದಲ ಲೇಖನ ‘‘ನಿಗೂಢತೆಯ ನಾಡಿನಲ್ಲಿ’’ ಜಗತ್ತಿನ ಸಂಸ್ಕೃತಿ, ನಾಗರಿಕತೆ, ಮಾನವನ ಸ್ಮತಿ ಪರಂಪರೆ ಮತ್ತು ಅನುವಂಶೀಯತೆಯ ಫಲಸ್ವರೂಪವಾದ ಸೃಜನಶೀಲತೆಯು ಜಾಗತಿಕ ಜನಜೀವನದ ಮೇಲೆ ಬೀರಿರುವ ಪರಿಣಾಮಗಳನ್ನು ವಿವರಿಸುತ್ತದೆ. ಶಿಕ್ಷಣ ಮುಚ್ಚು ಮಾದರಿಯಾಗಬಾರದು ಬಿಚ್ಚು ಮಾದರಿಯಾಗಬೇಕು ಎಂದು ಅವರು ‘ಭಂಗದ ಬೆನ್ನೇರಿ ಬಂತು...’ ಲೇಖನದಲ್ಲಿ ಆಶಿಸುತ್ತಾರೆ. ಕಾವ್ಯದ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಸೃಜನಶೀಲತೆ ಆಗಾಧ ಸಾಧ್ಯತೆಯನ್ನು ಅವರು ನಮಗೆ ಮನಗಾಣಿಸುತ್ತಾರೆ. ‘ಹರಿವ ತೊರೆಯ ಸೆಲೆ’ ಕೃತಿಯಲ್ಲಿ ಮಕ್ಕಳ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಹೇಳುತ್ತಾರೆ. ಹಾಗೆಯೇ ಸೃಜನಶೀಲತೆಯ ನಡುವಿನ ಕಚ್ಚಾಟಗಳು, ತಿಕ್ಕಾಟಗಳೂ ಹೇಗೆ ಧನಾತ್ಮಕ ಪರಿಣಾಮ ಬೀರಬಲ್ಲವು ಎನ್ನುವುದನ್ನು ವಿವರಿಸುತ್ತಾರೆ. ‘ಫಲಮಾನವುದೋ...’ ಲೇಖನದಲ್ಲಿ ಸೃಜನಶೀಲವಾಗಿ ಯೋಚಿಸುವುದರಿಂದ ಸಿಗುವ ಪ್ರಯೋಜನದ ಬಗ್ಗೆ ಹೇಳುತ್ತಾರೆ. ಇಂತಹ ಸುಮಾರು 12 ಲೇಖನಗಳು ಇಲ್ಲಿವೆ.

ಸೃಜನಶೀಲತೆ ಎಂಬ ವಿಸ್ಮಯವೊಂದನ್ನು ಹಲವು ಹತ್ತು ದಿಕ್ಕುಗಳಲ್ಲಿ ಹರಿದಾಡಿಸಿ ಅದರ ಎಲ್ಲ ಮಗ್ಗುಲುಗಳನ್ನೂ ಬೆನ್ನಟ್ಟಿ ತೆರೆದು ತೋರಿಸಲಾಗಿದೆ ಈ ಕೃತಿಯಲ್ಲಿ. ಹಾಗೆಯೇ ನಮ್ಮಲ್ಲಿ ಶಿಕ್ಷಣವೆಂಬುದು ನೊಗಕ್ಕೆ ಕಟ್ಟಿದ ಜೋಡೆತ್ತುಗಳಂತೆ. ಹೀಗೆ ಸಾಗಬೇಕೆಂಬ ಮತ್ತು ಇಂಥ ಪ್ರಶ್ನೆಗೆ ಇಂಥದೇ ಉತ್ತರವೆಂಬ, ಯೋಚಿಸಿ ಒಂದಕ್ಷರವೂ ಮಾತನಾಡಬಾರದೆಂಬ ಶಿಸಲ್ತಿಗೆ ಒಳಪಟ್ಟು ಅವನತಿಯತ್ತ ಸಾಗಿರುವುದು ಇಲ್ಲಿನ ಲೇಖನಗಳಿಂದ ನಮಗೆ ಮನನವಾಗುತ್ತದೆ. ಇಂದು ಶಿಕ್ಷಣ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಕೆಲವು ಉತ್ತರಗಳನ್ನು ಈ ಕೃತಿ ನೀಡುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News