ಕಾಂಗ್ರೆಸ್ ಪಕ್ಷಕ್ಕೆ ಹಲವು ಸ್ಥಾನಗಳನ್ನು ಗೆದ್ದು ಕೊಟ್ಟಿದ್ದೇನೆ: ಹಾರ್ದಿಕ್ ಪಟೇಲ್

Update: 2017-12-20 07:59 GMT

ಅಹ್ಮದಾಬಾದ್, ಡಿ.20: ಗುಜರಾತ್ ರಾಜ್ಯದ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉತ್ತಮ ನಿರ್ವಹಣೆಯ ಹಿಂದೆ ತನ್ನ ದೊಡ್ಡ ಪಾತ್ರವಿದೆ ಎಂದು ಪಟಿದಾರ್ ನಾಯಕ ಹಾರ್ದಿಕ್ ಪಟೇಲ್ ಹೇಳಿಕೊಂಡಿದ್ದಾರೆ.

''ನಾನು ಕಾಂಗ್ರೆಸ್ ಪಕ್ಷಕ್ಕೆ ಹಲವು ಸ್ಥಾನಗಳನ್ನು ಗೆದ್ದು ಕೊಟ್ಟಿದ್ದೇನೆ. ಅವರು ಪಡೆದ ಮತಗಳ ಪ್ರಮಾಣ ಶೇ.33ರಿಂದ ಶೇ.43ಕ್ಕೆ ಏರಿದೆ. ಅದು ನನ್ನಿಂದಾಗಿ'' ಎಂದು ಪಟೇಲ್ ಹೇಳಿದ್ದಾರೆ.

ಗುಜರಾತ್ ಚುನಾವಣಾ ಪ್ರಚಾರ ಕಾರ್ಯದುದ್ದಕ್ಕೂ ಹಾರ್ದಿಕ್ ಸಭೆಗಳಿಗೆ ಭಾರೀ ಜನರು ಸೇರುತ್ತಿದ್ದುದರಿಂದ ಅವರು ಸಹಜವಾಗಿಯೇ ಬಹಳಷ್ಟು ಮತಗಳನ್ನು ಸೆಳೆಯಬಲ್ಲರು ಎಂಬ ಆಶಾವಾದ ಕಾಂಗ್ರೆಸ್ ಪಕ್ಷಕ್ಕೂ ಇತ್ತು. ''ಬಿಜೆಪಿಗೆ ಸುಮಾರು 82 ಸೀಟುಗಳು ಮಾತ್ರ ದಕ್ಕಬೇಕಿತ್ತು. ಪಟೇಲರು, ಇತರ ಹಿಂದುಳಿದ ವರ್ಗಗಳು, ದಲಿತರು ಹಾಗೂ ವ್ಯಾಪಾರಿಗಳು ಅವರನ್ನು ವಿರೋಧಿಸಿದ್ದರು. ಹಾಗಾದರೆ ಅವರಿಗೆ ಯಾರು ಮತಗಳನ್ನು ಹಾಕಿದ್ದಾರೆ ?'' ಎಂದು ಪಟೇಲ್ ಪ್ರಶ್ನಿಸಿದ್ದಾರೆ.

ತನ್ನ ಹೋರಾಟ ಮುಂದುವರಿಯುವುದು ಎಂದ ಹಾರ್ದಿಕ್, ವಿದ್ಯುನ್ಮಾನ ಮತಯಂತ್ರಗಳನ್ನು ವಿರೋಧಿಸಿ ಹಿಂದಿನಂತೆ ಮತ ಪತ್ರಗಳು ಅಥವಾ ಬ್ಯಾಲೆಟ್ ಪೇಪರ್ ಮುಖಾಂತರವೇ ಮತದಾನ ನಡೆಸಬೇಕೆಂದು ಆಗ್ರಹಿಸುವಂತೆ ಎಲ್ಲಾ ವಿಪಕ್ಷ ನಾಯಕರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ''ಸೂರತ್, ರಾಜಕೋಟ್ ಮತ್ತು ಅಹ್ಮದಾಬಾದ್ ಕ್ಷೇತ್ರಗಳಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ'' ಎಂದು ಹಾರ್ದಿಕ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News