ಡಿ.21ರಿಂದ ರಾಜ್ಯಾದ್ಯಂತ ಪ್ರವಾಸ ಆರಂಭ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಡಿ.20: ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಡಳಿತರೂಢ ಕಾಂಗ್ರೆಸ್ ಸಜ್ಜಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲುನಿಂದ ಡಿ.21ರಂದು ಬೆಳಗ್ಗೆ 11 ಗಂಟೆಗೆ ಪ್ರಚಾರ ಕಾರ್ಯ ಆರಂಭಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆ ದೃಷ್ಟಿಯಿಂದ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಈಗಾಗಲೇ ಮುಖ್ಯಮಂತ್ರಿ 124 ಕ್ಷೇತ್ರಗಳಲ್ಲಿ ಪ್ರವಾಸ ಆರಂಭಿಸಿದ್ದಾರೆ. ಪಕ್ಷದ ವತಿಯಿಂದ 100 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರು ಪ್ರವಾಸ ಆರಂಭಿಸಲಿದ್ದಾರೆ ಎಂದರು.
ಕೋಲಾರ ಜಿಲ್ಲೆ ಮುಳುಬಾಗಿಲಿನಿಂದ 11 ಗಂಟೆಗೆ ಮೊದಲ ಕಾರ್ಯಕ್ರಮ ನಾಳೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಯಲಿದೆ. ಡಿ.22ರಂದು ಬೆಳಗ್ಗೆ 11 ಗಂಟೆಗೆ ಕೋಲಾರದಲ್ಲಿ, ಮಧ್ಯಾಹ್ನ 3 ಗಂಟೆಗೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಜನವರಿ 4ರಂದು ತುಮಕೂರು ಜಿಲ್ಲೆಯ ಗುಬ್ಬಿ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರ, ಜ.5ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಯಲಿದ್ದು, ಇದರಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್, ಎಸ್.ಆರ್.ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಚಾರ ಕಾರ್ಯಕ್ರಮದಲ್ಲಿ ಸರಕಾರದ ಯೋಜನೆಗಳು, ಕಾರ್ಯಕ್ರಮಗಳು, ಪ್ರಸ್ತುತ ರಾಜಕಾರಣದ ವಿಚಾರಗಳನ್ನು ಜನತೆಯ ಗಮನಕ್ಕೆ ತರಲಾಗುವುದು. ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.
ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರು ಒಟ್ಟಾಗಿ ಪ್ರವಾಸ ಮಾಡುತ್ತೇವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ನಡೆಸಿ ಪಕ್ಷ ಸಂಘಟನೆ ಮಾಡುತ್ತೇವೆ. ಇದು ಮಾರ್ಚ್ ಅಂತ್ಯದವರೆಗೆ ನಡೆಯಲಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಸಮಾವೇಶ ನಡೆಸುವ ಉದ್ದೇಶವಿದ್ದು, ರಾಹುಲ್‌ಗಾಂಧಿ ಕಾಲಾವಕಾಶ ನೀಡುತ್ತಿದ್ದಂತೆ ಸಮಾವೇಶ ಆಯೋಜಿಸುತ್ತೇವೆ ಎಂದು ಅವರು ಹೇಳಿದರು.
ಗುಜರಾತಿನಲ್ಲಿ ರಾಹುಲ್ ಗಾಂಧಿ ಪಕ್ಷವನ್ನ ಅಧಿಕಾರಕ್ಕೆ ತರಲು ಬಹಳಷ್ಟು ಶ್ರಮ ಹಾಕಿದ್ದಾರೆ. ದೇವಸ್ಥಾನಗಳು, ಮಠಗಳು, ಮಸೀದಿಗಳು, ಚರ್ಚ್‌ಗಳಿಗೆ ಭೇಟಿ ನೀಡುವುದು ಸಹಜ. ಅದು ಅವರವರ ಸಂಪ್ರದಾಯ. ರಾಹುಲ್‌ಗಾಂಧಿ ರಾಜ್ಯಕ್ಕೆ ಬಂದಾಗ ದೇವಾಲಯಗಳಿಗೆ ಭೇಟಿ ಕೊಡಲಿದ್ದಾರೆ. ಯಾವಾಗ, ಯಾವ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಎಸಿಬಿಗೆ ತನ್ನದೆ ಆದ ನಿಯಮಗಳಿರುತ್ತವೆ. ಆ ಪ್ರಕಾರ ಅವರು ಪ್ರಕರಣ ದಾಖಲಿಸುತ್ತಾರೆ. ಅದರಲ್ಲಿ ಸರಕಾರದ ಪಾತ್ರವೇನು ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ
ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರನ್ನು ಹೊಸದಿಲ್ಲಿಗೆ ಕರೆದಿರುವುದು ನೋಡಿದರೆ, ಬಿಜೆಪಿ ಮಹಾದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಕಾಣುತ್ತದೆ. ಈ ಹಿಂದೆಯೂ ಗೋವಾದಲ್ಲಿ ಬಿಜೆಪಿ ಸರಕಾರವಿತ್ತು. ಆಗ ಯಾಕೆ ಸಮಸ್ಯೆಯನ್ನು ಬಗೆಹರಿಸಿ, ರಾಜ್ಯದ ಜನತೆಗೆ ನೆರವು ನೀಡಿಲ್ಲ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ