×
Ad

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಡಿ.ಕೆ.ಶಿವಕುಮಾರ್

Update: 2017-12-20 18:34 IST

ಬೆಂಗಳೂರು, ಡಿ.20: ಕಲ್ಲಿದ್ದಲು ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಹೇರಲಾಗುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಎಷ್ಟೇ ಸಮಸ್ಯೆಗಳಾದರೂ ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್‌ಗೆ ಅನುಮತಿ ನೀಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಆಯೋಜಿಸಿದ್ದ ಬೆಸ್ಕಾಂ ಮಿತ್ರ(ಮೊಬೈಲ್ ಆಪ್)ನ ಲೋಕಾರ್ಪಣೆ ಹಾಗೂ ಜಾಗೃತದಳ ಗ್ರಾಹಕರ ಸಂವಾದ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪರೀಕ್ಷೆಗಳ ಸಮಯ, ಬೇಸಿಗೆ ಕಾಲ ಹಾಗೂ ಕೈಗಾರಿಕೆಗಳನ್ನು ಗಮನದಲ್ಲಿಟ್ಟು ಕೊಂಡು ನಿಗದಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು. ಶರಾವತಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಕಲ್ಲಿದ್ದಲು ಪೂರೈಕೆ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಒಂದು ದಶಲಕ್ಷ ಟನ್ ಕಲ್ಲಿದ್ದಲು ಖರೀದಿಸಲು ಟೆಂಡರ್ ಕರೆಯಲಾಗಿದೆ. ಅಲ್ಲದೆ, ಪ್ರತಿ ಯೂನಿಟ್‌ಗೆ 4.08 ರೂ.ಗಳಂತೆ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗುವುದು ಎಂದು ಅವರು ತಿಳಿಸಿದರು.

ಸುಳ್ಳು ಹೇಳುವ ಬಿಜೆಪಿ ನಾಯಕರು: ಪ್ರತಿ ಯೂನಿಟ್‌ಗೆ 2.50 ರೂ.ಗಳಂತೆ ವಿದ್ಯುತ್ ಸಿಕ್ಕಿದರೆ ಈಗಲೆ ಖರೀದಿಗೆ ರಾಜ್ಯ ಸರಕಾರ ಸಿದ್ಧವಾಗಿದೆ. ಆದರೆ, ಈ ಸಂಬಂಧ ಬಿಜೆಪಿ ನಾಯಕರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈಗಲೂ ಅದೇ ಬೆಲೆಗೆ ವಿದ್ಯುತ್ ಕೊಡಿಸಿದರೆ ಖರೀದಿಗೆ ಸಿದ್ಧ ಎಂದು ಶಿವಕುಮಾರ್ ತಿಳಿಸಿದರು.

ಪ್ರತಿ ಯೂನಿಟ್‌ಗೆ 2.50 ರೂ.ಗಳಂತೆ ವಿದ್ಯುತ್ ಲಭ್ಯವಾಗುತ್ತಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಮ್ಮೆ ಹೇಳಿಕೆ ನೀಡಿದ್ದರು. ಕೂಡಲೆ ನಾನು ಕೇಂದ್ರ ಸರಕಾರ, ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದು 2.50 ರೂ.ಗಳಿಗೆ ವಿದ್ಯುತ್ ಒದಗಿಸುವಂತೆ ಕೋರಿದ್ದೆ. ಆದರೆ, ಈವರೆಗೆ ಯಾವುದೆ ಉತ್ತರ ಬಂದಿಲ್ಲ ಎಂದು ಅವರು ಹೇಳಿದರು.

ನಮ್ಮ ರಾಜ್ಯದ ಮೂಲಕ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರ್ಗ ಹಾದು ಹೋಗುತ್ತಿದೆ. ಆದರೂ, ನಮ್ಮ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಸರಿಸುಮಾರು 700 ಕೋಟಿ ರೂ.ಗಳಿಂಗಿಂತ ಹೆಚ್ಚಿನ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ಎಲ್ಲ ರಾಜ್ಯಗಳಿಗೆ ಸಮಾನವಾಗಿ ವಿದ್ಯುತ್ ಹಂಚಿಕೆ ಮಾಡುವುದಾಗಿ ಮನವಿ ಮಾಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಇಂಧನ ಸಚಿವರ ಸಭೆಯಲ್ಲಿ ಈ ಎಲ್ಲ ವಿಚಾರಗಳನ್ನು ತಿಳಿಸಿದ್ದೇನೆ. ತಾಲೂಕು ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ, ಸೋಲಾರ್ ವಿದ್ಯುತ್ ಉತ್ಪಾದನೆ, ವಿದ್ಯುತ್ ಹಂಚಿಕೆ ಸೇರಿದಂತೆ ಎಲ್ಲ ವಿಚಾರಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಕೇಂದ್ರ ಸರಕಾರ ನಮಗೆ ನ್ಯಾಯ ಒದಗಿಸುವ ಭರವಸೆ ಇದೆ. ನಾವು ವಿದ್ಯುತ್‌ಗೆ ಸಂಬಂಧಿಸಿದ ಯಾವ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಹೆಚ್ಚುವರಿ ಅಲ್ಲದಿದ್ದರೂ, ಕನಿಷ್ಟ ಪಕ್ಷ ಒಪ್ಪಂದದ ಪ್ರಕಾರ ನಮಗೆ ಪೂರೈಕೆ ಮಾಡಬೇಕಿರುವ ವಿದ್ಯುತ್ ನೀಡಿದರೆ ಸಾಕು ಎಂದು ಅವರು ತಿಳಿಸಿದರು.

ಗೋದ್ನಾದಲ್ಲಿ ಕಲ್ಲಿದ್ದಲು ಘಟಕ ನಮಗೆ ಹಂಚಿಕೆಯಾಗಿದೆ. ಸಮಿತಿಯಲ್ಲಿ ಎಲ್ಲ ಪ್ರಕ್ರಿಯೆಗಳು ಅಂತಿಮವಾಗಿದೆ. ಆದರೆ, ಈವರೆಗೆ ನಮ್ಮ ಕೈಗೆ ಆದೇಶವನ್ನು ಹಸ್ತಾಂತರ ಮಾಡಿಲ್ಲ. ಕಲ್ಲಿದ್ದಲು ಸಚಿವಾಲಯ ಈ ಬಗ್ಗೆ ಯಾಕೆ ಸುಮ್ಮನಿದೆ ಅರ್ಥವಾಗುತ್ತಿಲ್ಲ. ನಮಗೆ ಒಳ್ಳೆಯ ಹೆಸರು ಬರುತ್ತೆ ಅನ್ನುವ ಕಾರಣಕ್ಕೆ ಅನುಮತಿ ನೀಡುತ್ತಿಲ್ಲವೇನೋ ಎಂದು ಶಿವಕುಮಾರ್ ಸಂಶಯ ವ್ಯಕ್ತಪಡಿಸಿದರು.

ಬೆಸ್ಕಾಂ ಮಿತ್ರ ಮೊಬೈಲ್ ಆಪ್ ಲೋಕಾರ್ಪಣೆ: ಬೆಸ್ಕಾಂಗೆ ಸಂಬಂಧಿಸಿದಂತೆ ಲೋರ್ಕಾಪಣೆ ಮಾಡಿರುವ ಮೊಬೈಲ್ ಆಪ್‌ಅನ್ನು ಮುಂದಿನ ದಿನಗಳಲ್ಲಿ ರಾಜ್ಯದ ಇತರ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲೂ ಅನುಷ್ಠಾನಗೊಳಿಸಲಾಗುವುದು. ಬೆಸ್ಕಾಂ ಆಪ್‌ನಿಂದಾಗಿ ಶೇ.50ರಷ್ಟು ವಿದ್ಯುತ್ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಸಾಲಿನ ಜ.19ರಂದು ಸೂರ್ಯರೈತ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಅಲ್ಲದೆ, ಸುಮಾರು 600 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರಿನಲ್ಲಿ ನಾಲ್ಕು ಮಾದರಿ ಉಪ ವಿಭಾಗಗಳನ್ನು ರಚಿಸಲು ಕಾರ್ಯಾದೇಶ ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಮ್ಯಾರಥಾನ್: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಡಿ.24ರಂದು ಬೆಳಗ್ಗೆ 6 ಗಂಟೆಗೆ ಪವರ್ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು, ಸುಮಾರು 10 ಸಾವಿರ ಯುವಕರು ಪಾಲ್ಗೊಳ್ಳಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಕೆಇಆರ್‌ಸಿ ವಿಚಾರದಲ್ಲಿ ಹಸ್ತಕ್ಷೇಪವಿಲ್ಲ

ವಿದ್ಯುತ್ ದರ ಏರಿಕೆಯು ಕೆಇಆರ್‌ಸಿ ಹಾಗೂ ವಿದ್ಯುತ್ ಸರಬರಾಜು ಕಂಪೆನಿಗಳ ನಡೆಯುವ ನಿರಂತರ ಪ್ರಕ್ರಿಯೆಯಾಗಿದೆ. ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಳೆದ ಬಾರಿ ಪ್ರತಿ ಯೂನಿಟ್ ಅನ್ನು 5.10 ರೂ.ಗಳಿಗೆ ಖರೀದಿ ಮಾಡಲಾಗಿತ್ತು. ಈ ಬಾರಿ 4.08 ರೂ.ಗಳಿಗೆ ಖರೀದಿ ಮಾಡಲಾಗುತ್ತಿದೆ. ಸರಕಾರದ ಮಟ್ಟದಲ್ಲಿ ವಿದ್ಯುತ್ ದರ ಏರಿಕೆ ಕುರಿತು ಚರ್ಚೆಯಾಗಿಲ್ಲ.

-ಡಿ.ಕೆ.ಶಿವಕುಮಾರ್, ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News