ಡಿ.29ವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ
ಬೆಂಗಳೂರು, ಡಿ.20: ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಡಿ.29ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಬುಧವಾರ ನಗರದ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕೃತಕ್ಕೆ ಸಂಬಂಧಿಸಿದಂತೆ ವಿವರಿಸಿ, ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದನ್ನು ಮತದಾರರು ಪರಿಶೀಲಿಸಿಕೊಳ್ಳಲು ನ.30ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.
ಬಳಿಕ ಮುಂದಿನ ಚುನಾವಣೆಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಲು, ಹೊಸದಾಗಿ ಮತದಾರರ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗುತ್ತಿದೆ. ಡಿ.29ರವರೆಗೆ ಅವಕಾಶವಿದ್ದು, ಅಷ್ಟರೊಳಗೆ 18 ವರ್ಷ ತುಂಬಿರುವವರು ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳ ಬಯಸುವವರು ಫಾರಂ 6ರಲ್ಲಿ ಎಲ್ಲ 198 ವಾರ್ಡ್ ಕಚೇರಿಗಳಲ್ಲಿ, 115 ಬೆಂಗಳೂರು ಒನ್ ಕೇಂದ್ರಗಳಲ್ಲಿ, ಸಕಾಲ ಕೇಂದ್ರಗಳಲ್ಲಿ ಸಲ್ಲಿಸಬಹುದು. ನೇರವಾಗಿ ಅಲ್ಲದೆ, ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಡಿ.29ರೊಳಗೆ ಅರ್ಜಿ ಸಲ್ಲಿಸಿದವರಿಗೆ ಜ.20ರೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಫೆ.15ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
575 ಹೊಸ ಮತಗಟ್ಟೆಗೆ ಪ್ರಸ್ತಾವನೆ
ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 7712 ಮತಗಟ್ಟೆಗಳಿದ್ದು, 1400 ಮತದಾರರಿಗೆ ಒಂದು ಮತಗಟ್ಟೆ ಎಂದು ನಿಗದಿ ಮಾಡಲಾಗಿದೆ. ಆದರೆ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಯಾಗಿರುವುದರಿಂದ ಇನ್ನು 575 ಮತಗಟೆ್ಟಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.