ಬೆಂಗಳೂರು-ಮೈಸೂರು ಆರು ಪಥದ ರಾಷ್ಟ್ರೀಯ ಹೆದ್ದಾರಿ: ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2017-12-20 14:07 GMT

ಬೆಂಗಳೂರು, ಡಿ. 20: ಬೆಂಗಳೂರು-ವೆೆುಸೂರು ನಡುವೆ ಆರು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 2018ರ ಜನವರಿ ಅಂತ್ಯದಲ್ಲಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿ ಸಂಬಂಧ ನಿನ್ನೆಯೆಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ಈ ಹೆದ್ದಾರಿ ಕಾಮಗಾರಿಗೆ ಶೀಘ್ರದಲ್ಲೆ ಆರಂಭವಾಗಲಿದೆ ಎಂದರು.

ಬೆಂಗಳೂರು-ಮೈಸೂರು ನಡುವಿನ 6 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒಟ್ಟು 7 ಸಾವಿರ ಕೋಟಿ ರೂ.ವೆಚ್ಚವಾಗಲಿದ್ದು, ಆ ಪೈಕಿ ಭೂಸ್ವಾಧೀನಕ್ಕೆ 3ಸಾವಿರ ಕೋಟಿ ರೂ.ಮೀಸಲಿರಿಸಲಾಗಿದೆ. ಈಗಾಗಲೇ ಶೇ.60ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಹದೇವಪ್ಪ ವಿವರಿಸಿದರು.

ಟೆಂಡರ್ ರದ್ದು: ಬೆಂಗಳೂರು-ಮಂಗಳೂರು ನಡುವಿನ ಶಿರಾಡಿಘಾಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಬಂಧ ಹಳೆಯ ಟೆಂಡರ್ ರದ್ದುಪಡಿಸಿದ್ದು, ಹೊಸ ಟೆಂಡರ್ ಕರೆಯಲಾಗಿದೆ. 2018ರ ಜನವರಿ 15ರಿಂದ ಹೊಸದಾಗಿ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಿಗಂಧೂರಿಗೆ ಸೇತುವೆ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ ಸಿಗಂಧೂರಿಗೆ 600ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೂ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದು, ಈ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವ ಭರವಸೆ ನೀಡಿದ್ದಾರೆಂದು ಅವರು ಹೇಳಿದರು.

ಸಿಗಂಧೂರಿಗೆ ಸೇತುವ ಸಂಪರ್ಕವಿಲ್ಲದ ಕಾರಣ ಪ್ರಸ್ತುತ ಲಾಂಜ್ ಮೂಲಕ ಪ್ರಯಾಣಿಸುತ್ತಿದ್ದು, ಅತ್ಯಂತ ತುರ್ತಾಗಿ ಸೇತುವೆ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸ್ಪಂದಿಸಿದ್ದು, ಶೀಘ್ರದಲ್ಲೆ ಸೇತುವೆ ನಿರ್ಮಿಸಿಕೊಡಲು ಕೇಂದ್ರ ಉತ್ಸುಕತೆ ತೋರಿದೆ ಎಂದು ಅವರು ನುಡಿದರು.

ಮೈಸೂರು-ನಂಜನಗೂಡು, ಗುಂಡ್ಲುಪೇಟೆ-ಟಿ.ನರಸೀಪುರ, ಬೆಂಗಳೂರು-ಮೈಸೂರು-ಬಂಟ್ವಾಳ ಹೆದ್ದಾರಿಗಳಲ್ಲಿ 80ಕೋಟಿ ರೂ. ವೆಚ್ಚದಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ ಎಂದ ಅವರು, ನಾಲ್ಕುವರೆ ವರ್ಷದಲ್ಲಿ ರಾಜ್ಯದಲ್ಲಿ 32 ಸಾವಿರ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ದೇಶದಲ್ಲೆ ಅತ್ಯಂತ ಹೆಚ್ಚು ಉದ್ದದ ರಸ್ತೆ ಅಭಿವೃದ್ಧಿಪಡಿಸಿದ ರಾಜ್ಯ ಕರ್ನಾಟಕ ಎಂದರು.

‘ಅಭಿವೃದ್ದಿ ವಿಚಾರಗಳಿಗೆ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು. ಜನರ ಸಮಸ್ಯೆಗಳ ಪರಿಹಾರದ ವಿಚಾರದಲ್ಲಿ ರಾಜಕೀಯ ಅಕ್ಷಮ್ಯ. ಉತ್ತರ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ಯೋಜನೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಡಬೇಕು’

-ಡಾ.ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News