ಹಾಲಿ ಶಾಸಕರಿಗೆ ಮತ್ತೊಂದು ಕ್ಷೇತ್ರದ ಹೊಣೆ: ಕೋನರೆಡ್ಡಿ

Update: 2017-12-20 14:14 GMT

ಬೆಂಗಳೂರು, ಡಿ.20: ಜೆಡಿಎಸ್ ಪಕ್ಷವು ಬಿಜೆಪಿ ಹಾದಿಯಲ್ಲೆ ತನ್ನ ಚುನಾವಣಾ ರಣತಂತ್ರವನ್ನು ರೂಪಿಸಲು ಮುಂದಾಗುತ್ತಿರುವಂತೆ ಗೋಚರಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರೀತಿಯಲ್ಲೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ತಮ್ಮ ಪಕ್ಷದ ಹಾಲಿ ಶಾಸಕರಿಗೆ ಮತ್ತೊಂದು ಕ್ಷೇತ್ರದ ಹೊಣೆ ಹೊರಿಸಲು ಮುಂದಾಗಿದ್ದಾರೆ.

ಬುಧವಾರ ನಗರದ ಜೆ.ಪಿ.ಭವನದಲ್ಲಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೋನರೆಡ್ಡಿ, ಪಕ್ಷ ಸಂಘಟನೆ, ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದರು.

ಹಾಲಿ ಒಬ್ಬ ಶಾಸಕರು, ತಮ್ಮ ಪಕ್ಕದ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಯಾವ ರೀತಿಯಲ್ಲಿ ಸಹಕರಿಸಬೇಕು ಎಂಬುದರ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಕೋನರೆಡ್ಡಿ ಹೇಳಿದರು.

ಸರಕಾರಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ಬಾವುಟಗಳನ್ನು ಬಳಕೆ ಮಾಡಲಾಗುತ್ತಿರುವ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗಿದ್ದು, ಇದರ ಬಗ್ಗೆ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಜನವರಿ ಮೊದಲ ವಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್ ಮಾದರಿ ಕರ್ನಾಟಕದಲ್ಲಿ ಇಲ್ಲ. ಕರ್ನಾಟಕದಲ್ಲಿ ಕರ್ನಾಟವೇ ಮಾದರಿ. ಶೀಘ್ರವೇ 130 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೋನರೆಡ್ಡಿ ತಿಳಿಸಿದರು.

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣದ ಕುರಿತು ಶಾಸಕಾಂಗ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದ್ದು, ದೇವೇಗೌಡರ ಪರವಾಗಿ ಪಕ್ಷ ನಿಲ್ಲುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಮಹಾದಾಯಿ ವಿಚಾರದಲ್ಲಿ ಈವರೆಗೆ ತುಟಿ ಬಿಚ್ಚದ ಬಿಜೆಪಿ ನಾಯಕರು, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈಗ ಎಚ್ಚರಗೊಂಡಿದ್ದಾರೆ. ಈ ವಿಚಾರದಲ್ಲಿ ಕೇವಲ ಕಣ್ಣೊರೆಸುವ ತಂತ್ರ ಅನುಸರಿಸದೆ, ಪ್ರಾಮಾಣಿಕವಾಗಿ ರೈತರಿಗೆ ನೀರು ಕೊಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು.

-ಕೋನರೆಡ್ಡಿ, ಜೆಡಿಎಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News