ಸಾ.ರಾ.ಗೋವಿಂದು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಕ್ಷೇಪ ಬೇಡ : ಕನ್ನಡ ಸಂಘಗಳ ಒಕ್ಕೂಟ

Update: 2017-12-20 14:37 GMT

ಬೆಂಗಳೂರು, ಡಿ.20: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಿ.24, 25ರಂದು ನಗರದ ಚಂದಾಪುರದಲ್ಲಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಸಾ.ರಾ.ಗೋವಿಂದು ಅವರನ್ನು ಆಯ್ಕೆ ಮಾಡಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲವೆಂದು ಕನ್ನಡ ಸಂಘಗಳ ಒಕ್ಕೂಟ ಅಭಿಪ್ರಾಯಿಸಿದೆ.

 ತನ್ನ ಜೀವನವನ್ನು ಕನ್ನಡದಪರ ಹೋರಾಟಗಳಿಗೆ ಮೀಸಲಿಟ್ಟಿರುವ ಸಾ.ರಾ.ಗೋವಿಂದು ಕನ್ನಡ ನಾಡು, ನುಡಿ, ನೆಲ, ಜಲ ಗಡಿ ವಿಚಾರ ಕುರಿತಂತೆ ಕಳೆದ ಹಲವು ದಶಕಗಳಿಂದ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನು ಪರಿಗಣಿಸಿಯೇ ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ 12ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾ.ರಾ.ಗೋವಿಂದುರನ್ನು ಆಯ್ಕೆ ಮಾಡಿದೆ.

ಕೇವಲ ಸಾಹಿತ್ಯ ರಚಿಸಿದವರನ್ನು ಮಾತ್ರ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಆದರೆ, ಸಾಹಿತಿಗಳಿಗೆ ಪ್ರೇರಣೆಯಾಗಿ, ಸಾಹಿತ್ಯದ ಪರಿಚಾರಕರಾಗಿ ಕೆಲಸ ಮಾಡುವವರಿಂದಲೇ ಕನ್ನಡ ಸಾಹಿತ್ಯ ಕ್ಷೇತ್ರ ಜೀವಂತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಕನ್ನಡ ನಾಡಿನ ಸಾಮಾಜಿಕ, ರಾಜಕೀಯ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಕೆಲಸ ಮಾಡುತ್ತಿರುವ ಸಾ.ರಾ.ಗೋವಿಂದುರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಕನ್ನಡ ಸಂಘಗಳ ಒಕ್ಕೂಟ ಬೆಂಬಲಿಸಲಿದೆ ಎಂದು ಅಧ್ಯಕ್ಷ ಎಂ.ತಿಮ್ಮಯ್ಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News