ಮದ್ಯಪಾನ-ಮಾದಕದ್ರವ್ಯ ಸೇವನೆ ಕುರಿತು ಅರಿವು ಅವಶ್ಯ: ಎಚ್.ಸಿ.ರುದ್ರಪ್ಪ
ಧಾರವಾಡ, ಡಿ.20: ಮದ್ಯಪಾನ, ಮಾದಕದ್ರವ್ಯ ಸೇವನೆಗಳಿಂದ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತವೆ. ದುಶ್ಚಟಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್.ಸಿ. ರುದ್ರಪ್ಪಹೇಳಿದ್ದಾರೆ.
ಬುಧವಾರ ನಗರದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಏರ್ಪಡಿಸಿದ್ದ ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆಗಳಿಂದ ಆರೋಗ್ಯದ ಮೇಲೆ ಹಾನಿ ಕುರಿತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತಿಳುವಳಿಕೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಹಲವು ನಾಯಕರು ದುಶ್ಚಟಗಳ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಬೀದಿ ನಾಟಕ, ಜನ ಜಾಗೃತಿ ಜಾಥಾಗಳ ಮೂಲಕ ಮದ್ಯಪಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಹಳ್ಳಿಗಳಲ್ಲಿರುವ ಹೆಣ್ಣು ಮಕ್ಕಳಲ್ಲಿ ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅವಶ್ಯವಾಗಿದೆ. ಪ್ರತಿ ವರ್ಷ ಮದ್ಯಪಾನ ವಿರೋಧಿ ದಿನದಂದು ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರುದ್ರಪ್ಪ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ್ ಮುಧೋಳ ಮಾತನಾಡಿ, ಮದ್ಯಪಾನವನ್ನು ನಿಯಂತ್ರಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ. ಮದ್ಯಪಾನ ದಾಸ್ಯತ್ವದಿಂದ ಜನರನ್ನು ದೂರಡುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ರಾಮಕೃಷ್ಣ ಸ್ವಾಮಿ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ಬೋಧಿಸಿದರು. ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಕುರಿತು ಮಾನಸಿಕ ಮತ್ತು ಮಾದಕ ದ್ರವ್ಯ ತಜ್ಞೆ ಡಾ.ಅಶ್ವಿನಿ ಪದ್ಮಶಾಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ‘ಕುಡಿತ ಬೇಡ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮದ್ಯಪಾನ ಸಂಯಮ ಮಂಡಳಿಯ ನಿರ್ದೇಶಕ ಶಫಿ ಮುದ್ದೇಬಿಹಾಳ, ಅಬಕಾರಿ ಇಲಾಖೆಯ ಉಪ ಆಯುಕ್ತ ಬಿ.ಆರ್.ಪಾಟೀಲ್, ಅಬಕಾರಿ ಇನ್ಸ್‌ಪೆಕ್ಟರ್ ಸಂಜೀವ ಬಳಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.