×
Ad

ದಾನಮ್ಮ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2017-12-21 21:52 IST

ಬೆಂಗಳೂರು, ಡಿ.21: ವಿಜಯಪುರದಲ್ಲಿ ದಾನಮ್ಮ ಎಂಬ ಶೋಷಿತ ಸಮುದಾಯದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಗುರುವಾರ ಜ್ಞಾನಭಾರತಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ಅಪ್ರಾಪ್ತ ವಯಸ್ಸಿನ ದಾನಮ್ಮ ಮೇಲೆ ಸವರ್ಣೀಯ, ಕಾಮಾಂಧ, ಮಾದಕವ್ಯಸನಿ, ಕೋಮುವಾದಿ ಯುವಕರು ನಡೆಸಿದ ಅತ್ಯಾಚಾರ ಪೈಶಾಚಿಕವಾದದ್ದು. ಭಾರತದ ಇತಿಹಾಸದಲ್ಲಿ ಬೆಲ್ಚಿ, ಪಿಪ್ರಾ, ತೆಸ್ತಾರ, ಕೈರ್ಲಾಂಜಿ, ಸಂತೆಮಾರನಹಳ್ಳಿ, ಊನಾದಂತಹ ದುರಂತಗಳು ನಿರಂತರವಾಗಿ ನಡೆಯುತ್ತಿದ್ದು, ಆಳುವ ಸರಕಾರಗಳು ಘಟನೆ ನಡೆದ ನಂತರ ಚಿಲ್ಲರೆ ಹಣ ನೀಡಿ ಸಂತ್ರಸ್ತರ ಕಣ್ಣೊರೆಸುವ ನಾಟಕವಾಡುತ್ತಾ ಈ ತರಹದ ದೌರ್ಜನ್ಯಗಳು ಮರುಕಳಿಸುವಂತೆ ಹುನ್ನಾರ ಮಾಡುತ್ತಿರುವುದು ಚರಿತ್ರೆಯಿಂದ ನಮಗೆ ತಿಳಿಯುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದ ಬಹುಜನರಾದ ಶೋಷಿತ ಸಮುದಾಯಗಳು ನಿರಂತರವಾಗಿ ತುಳಿತಕ್ಕೆ ಒಳಗಾಗುತ್ತಿರುವುದಕ್ಕೆ ಆಳುವ ವರ್ಗಗಳ ಕುತಂತ್ರ ಮತ್ತು ಆಡಳಿತ ವೈಫಲ್ಯ ಕಾರಣವೆಂಬುದು ಸಮಾನತೆಯನ್ನೆ ಉಸಿರಾಗಿಸಿಕೊಂಡಿರುವ ಎಲ್ಲರಿಗೂ ತಿಳಿದ ಸತ್ಯವಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದರು.

ದಲಿತ, ದಮನಿತ, ಶೋಷಿತ ಮತ್ತು ಮಹಿಳೆಯರ ರಕ್ಷಣೆ ನಮ್ಮನ್ನಾಳುವ ಸರಕಾರಗಳಿಂದ ಸಾಧ್ಯವಾಗಲಿಲ್ಲ. ದೌರ್ಜನ್ಯಕ್ಕೆ ಒಳಗಾದ ಸಮುದಾಯಗಳಿಗೆ ಸ್ವಯಂರಕ್ಷಣೆಗಾಗಿ ಬಂದೂಕನ್ನು ಕೊಡಿ ಅವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರರ ಸಂವಿಧಾನ ಯಥಾವತ್ತಾಗಿ ಜಾರಿಯಾಗದಿರುವುದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದ್ದು, ಸಂವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸಮಾಜವು ಆತ್ಮವಿಮರ್ಶೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರೋಹಿತ್ ವೇಮುಲ, ತಮಿಳುನಾಡಿನ ಅನಿತಾ ಮತ್ತು ವಿಜಯಪುರದ ದಾನಮ್ಮ ಇಂತಹ ಪ್ರಕರಣಗಳು ಈ ಸಮಾಜದ ಮನಃಸಾಕ್ಷಿಯನ್ನ ಕಲಕುವ ಪ್ರಕರಣಗಳಾಗಿದ್ದು, ಇಂತಹ ಕೃತ್ಯಗಳು ಮರುಕಳಿಸಿದರೆ ಪ್ರಜ್ಞಾವಂತ ಯುವಸಮುದಾಯ ಕೈಕಟ್ಟಿ ಕೂರುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕುವ ಮೂಲಕ ಸರಕಾರಗಳಿಗೆ ಮತ್ತು ದೌರ್ಜನ್ಯಕೋರರಿಗೆ ವಿದ್ಯಾರ್ಥಿಗಳ ಒಕ್ಕೂಟವು ಈ ಹೋರಾಟದಿಂದ ಸ್ಪಷ್ಟ ಸಂದೇಶವನ್ನು ನೀಡುತ್ತಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News