ಬೈಕ್‌ಗಳ ಢಿಕ್ಕಿ: ಓರ್ವ ಮೃತ್ಯು
ಬೆಂಗಳೂರು, ಡಿ.21: ಹಿಂದಿನಿಂದ ಬಂದ ಬೈಕ್ ಮತ್ತೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟರೆ, ಮಗಳು ಗಂಭೀರ ಗಾಯಗೊಂಡಿರುವ ದುರ್ಘಟನೆ ಕೆ.ಆರ್ ಮಾರುಕ್ಟೆಯ ಮೇಲ್ಸೇತುವೆ ಬಳಿ ನಡೆದಿದೆ.
ಹೊಸಕೆರೆಹಳ್ಳಿಯ ಸತೀಶ್ ಪಂಡಿತ್(48) ಮೃತಪಟ್ಟಿದ್ದು, ಅವರ ಪುತ್ರಿ ಸ್ವಾತಿ ಪಂಡಿತ್(19) ಹಾಗೂ ಮತ್ತೊಂದು ಬೈಕ್‌ನ ಸವಾರ ಗೋವಿಂದ್(31) ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸತೀಶ್ ಅವರು ತಮ್ಮ ಮಗಳನ್ನು ವಿಜಯನಗರಕ್ಕೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಕೆಆರ್ ಮಾರುಕಟ್ಟೆಯ ಮೇಲ್ಸೇತುವೆಯಲ್ಲಿ ಹಿಂದಿನಿಂದ ವೇಗವಾಗಿ ಬೈಕ್‌ನಲ್ಲಿ ಬರುತ್ತಿದ್ದ ಗೋವಿಂದ್ ಎಂಬುವವರು ನಿಯಂತ್ರಣ ಕಳೆದುಕೊಂಡು ಸತೀಶ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ಸತೀಶ್ ಮತ್ತು ಹಿಂಬದಿ ಕುಳಿತಿದ್ದ ಸ್ವಾತಿ ಬೈಕ್‌ನಿಂದ ರಸ್ತೆಗೆ ಬಿದ್ದ ಪರಿಣಾಮ ಸತೀಶ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಸ್ವಾತಿ ಅವರ ಕಾಲು ಮತ್ತು ಕೈಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ.
ಢಿಕ್ಕಿ ಹೊಡೆದ ಬೈಕ್ ಸವಾರ ಗೋವಿಂದ್ ಅವರು ರಸ್ತೆಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೆ.ಆರ್ ಮಾರುಕಟ್ಟೆ ಮೆಲ್ಸೇತುವೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುತ್ತಿರುವ ವೇಳೆ ಸತೀಶ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗೋವಿಂದ್ ಮತ್ತು ಸ್ವಾತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋವಿಂದ್ ಅವರು ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕೆ.ಆರ್ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.