ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ
Update: 2017-12-22 20:28 IST
ಬೆಂಗಳೂರು, ಡಿ.22: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಡಿಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ದೇವರಜೀವನಹಳ್ಳಿ ಸಮೀಪದ ರೋಷನ್ ನಗರ ನಿವಾಸಿ ಶೇಖ್ ರಿಝ್ವಿನ್ ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ. ಇನ್ನು ಪ್ರಕರಣ ಸಂಬಂಧ ಸೈಯದ್, ಶಾಹೀದ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಘಟನೆ ವಿವರ: ಆಭರಣದ ವಿಷಯಕ್ಕೆ ರಾತ್ರಿ 11:45ರಲ್ಲಿ ರಿಝ್ವಿನ್ ಹಾಗೂ ಆರೋಪಿಗಳ ಮಧ್ಯೆ ಗಲಾಟೆಯಾಗಿದೆ. ಏಕಾಏಕಿ ಸೈಯದ್, ರಿಝ್ವಿನ್ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳೀಯರು, ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಡಿಜಿ ಹಳ್ಳಿ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.