ರಾಜಸ್ಥಾನ: ಸಲ್ಮಾನ್ ಖಾನ್ ವಿರುದ್ಧ ಸಿಡಿದೆದ್ದ ವಾಲ್ಮೀಕಿ ಸಮುದಾಯ

Update: 2017-12-23 04:21 GMT

ಜೈಪುರ, ಡಿ.23: ಚಿತ್ರ ಪ್ರಚಾರದ ವೇಳೆ ಅವಹೇಳನಕಾರಿ ಪದ ಬಳಸಲಾಗಿದೆ ಎಂದು ಆಪಾದಿಸಿ, ವಾಲ್ಮೀಕಿ ಸಮಾಜದ ಕಾರ್ಯಕರ್ತರು ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಶುಕ್ರವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಮೇರುನಟನ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಲ್ಮಾನ್‌ಖಾನ್ ಹಾಗೂ ಶಿಲ್ಪಾಶೆಟ್ಟಿ ಅವರು ಕೆಟ್ಟ ಪದ ಬಳಸಿ ಅವಮಾನಿಸಿದ್ದಾರೆ ಎನ್ನುವುದು ವಾಲ್ಮೀಕಿ ಸಮುದಾಯದ ಆರೋಪ. ಪ್ರತಿಭಟನಾಕಾರರು ಹಲವೆಡೆ ದಾಂಧಲೆ ನಡೆಸಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 40 ಮಂದಿಯನ್ನು ಬಂಧಿಸಿದ್ದಾರೆ.

ಸಲ್ಮಾನ್ ಖಾನ್- ಕತ್ರಿನಾ ಕೈಫ್ ನಟಿಸಿರುವ 'ಟೈಗರ್ ಝಿಂದಾ ಹೈ' ಚಿತ್ರ ಪ್ರದರ್ಶನ ನಡೆಯುತ್ತಿದ್ದ ಜೈಪುರದ ಅಂಕುರ್, ಪರಾಸ್ ಮತ್ತು ರಾಜಮಂದಿರ ಚಿತ್ರಮಂದಿರಗಳಲ್ಲಿ ಪೋಸ್ಟರ್‌ಗಳನ್ನು ಪ್ರತಿಭಟನಾಕಾರರು ಹರಿದು ಹಾಕಿದರು. ಕೋಟಾದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಇರುವ ಆಕಾಶ್‌ಮಾಲ್‌ನ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್‌ಖಾನ್ ಹಾಗೂ ಶಿಲ್ಪಾಶೆಟ್ಟಿ ಟಿವಿ ಶೋಗಳಲ್ಲಿ ಅವಮಾನಕರ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ವರದಿ ನೀಡುವಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರಿಯ ಆಯೋಗವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮತ್ತು ದಿಲ್ಲಿ ಮತ್ತು ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.

ಸಲ್ಮಾನ್ ಹಾಗೂ ಶಿಲ್ಪಾಶೆಟ್ಟಿ ಟಿವಿ ಶೋನಲ್ಲಿ ಭಂಗಿ ಎಂಬ ಪದ ಬಳಕೆ ಮಾಡಿದ್ದು, ಇದು ವಾಲ್ಮೀಕಿ ಸಮುದಾಯವನ್ನು ಅವಮಾನಿಸುವಂಥದ್ದು ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ಹರ್ಮನ್ ಸಿಂಗ್ ಸಲ್ಲಿಸಿದ ದೂರಿನ ಮೇಲೆ ಆಯೋಗ ಈ ಕ್ರಮ ಕೈಗೊಂಡಿದೆ.

"ಕೆಲ ದಿನಗಳ ಹಿಂದೆ ಟಿವಿ ಸಂದರ್ಶನದಲ್ಲಿ ಸಲ್ಮಾನ್‌ ಖಾನ್ ಭಂಗಿ ಎಂಬ ಪದ ಬಳಸಿದ್ದಾರೆ. ಸಂವಿಧಾನಾತ್ಮಕವಾಗಿ ಕೂಡಾ ಇದು ನಿಂದನೆ. ಇದು ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ನೋವು ತಂದಿದೆ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಜಿತೇಂದ್ರ ಹತ್ವಾಲ್ ವಾಲ್ಮೀಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News