ಲಾಲೂ ಪುತ್ರಿ ಮೀಸಾ ಭಾರತಿ ವಿರುದ್ಧ ಆರೋಪ ಪಟ್ಟಿ ದಾಖಲು

Update: 2017-12-23 13:12 GMT

ಹೊಸದಿಲ್ಲಿ, ಡಿ.23: ಅಕ್ರಮವಾಗಿ ಹಣ ವರ್ಗಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಪುತ್ರಿ ಮೀಸಾ ಭಾರತಿ ಹಾಗೂ ಆವರ ಪತಿ ಶೈಲೇಶ್ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಆರೋಪಪಟ್ಟಿ ದಾಖಲಿಸಿದೆ.

ವಿಶೇಷ ನ್ಯಾಯಾಧೀಶ ಎನ್.ಕೆ.ಮಲ್ಹೋತ್ರಾ ಅವರಿಗೆ ಇಡಿ ಪರ ವಕೀಲ ನಿತೇಶ್ ರಾಣಾ ಆರೋಪಪಟ್ಟಿ ಸಲ್ಲಿಸಿದರು. ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ತೋಟದ ಮನೆಯೊಂದನ್ನು ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು. ಮೀಸಾ ಮತ್ತು ಶೈಲೇಶ್‌ಗೆ ಸೇರಿದ್ದ ಈ ಮನೆಯನ್ನು ‘ಮಿಶಾಲಿ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್ ’ ಎಂಬ ಹೆಸರಲ್ಲಿ ನೋಂದಾವಣೆ ಮಾಡಲಾಗಿದೆ. 2008-09ರಲ್ಲಿ ಅಕ್ರಮವಾಗಿ ವರ್ಗಾಯಿಸಲಾಗಿದ್ದ 1.2 ಕೋಟಿ ರೂ. ಹಣದಿಂದ ಈ ಮನೆಯನ್ನು ಖರೀದಿಸಲಾಗಿದೆ ಎಂದು ಇಡಿ ಆರೋಪಿಸಿದೆ.

ಅಲ್ಲದೆ ಬೇನಾಮಿ ಸಂಸ್ಥೆಗಳನ್ನು ಬಳಸಿಕೊಂಡು ಕೋಟ್ಯಂತರ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪದಲ್ಲಿ ಸುರೇಂದ್ರ ಕುಮಾರ್ ಜೈನ್ ಹಾಗೂ ವೀರೇಂದ್ರ ಜೈನ್ ಸೋದರರನ್ನು ಇಡಿ ಬಂಧಿಸಿತ್ತು. ಜೈನ್ ಸಹೋದರರು, ಮೀಸಾ ಭಾರತಿ ಹಾಗೂ ಶೈಲೇಶ್ ಕುಮಾರ್- ಈ ಮೂವರು 1.2 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ವ್ಯಕ್ತಿಗಳು ಎಂದು ಇಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News