ಸಿಎಂಗೆ ಆಡಳಿತಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ: ರಮೇಶ್ ಬಾಬು

Update: 2017-12-23 15:56 GMT

ಬೆಂಗಳೂರು, ಡಿ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಕ್ಕಿಂತಳೂ ಚುನಾವಣಾ ಪ್ರಚಾರಕ್ಕೆ ಒತ್ತು ನೀಡಿ ಪ್ರವಾಸ ಕೈಗೊಂಡಿರುವುದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ.

ಡಿಸೆಂಬರ್ ಅಥವಾ ಜನವರಿಯಲ್ಲಿ ಬಜೆಟ್‌ಗೆ ಸಂಬಂಧಿಸಿದಂತೆ ಹಣಕಾಸು ಸಚಿವರ ಸಮ್ಮುಖದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತದೆ. ಸರಕಾರದ ಎಲ್ಲ ಇಲಾಖೆಗಳಿಂದ ಮಾಹಿತಿ ಸಂಗ್ರಹ ಮಾಡಿ ಸಂಪನ್ಮೂಲಗಳ ಕ್ರೋಡೀಕರಣ ಹಾಗೂ ಹಣಕಾಸು ವೆಚ್ಚಗಳ ಕುರಿತು ಯೋಜನೆ ರೂಪಿಸಲಾಗುತ್ತದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ಸ್ವತಂ ಅವರೇ ನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ, ಅವರು ರಾಜ್ಯ ಪ್ರವಾಸದ ಹೆಸರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ರಮೇಶ್ ಬಾಬು ಟೀಕೆ ಮಾಡಿದ್ದಾರೆ.

 ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚುನಾವಣಾ ಸಮಯದಲ್ಲಿ ಪ್ರಚಾರ ಕಾರ್ಯಗಳು ಕೈಗೊಳ್ಳುತ್ತಾರೆ. ಒಂದು ವೇಳೆ ಸಚಿವರ ಸೇವೆಯು ಪಕ್ಷದ ಪ್ರಚಾರಕ್ಕೆ ಅವಶ್ಯಕವಿದ್ದಲ್ಲಿ ಅವರ ರಾಜೀನಾಮೆ ಪಡೆದು ಪಕ್ಷಚ ಸಂಘಟನೆ ಕಾರ್ಯಕ್ಕೆ ಅವಕಾಶ ಕಲ್ಪಿಸುತ್ತಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಚಾರಕ್ಕಾಗಿ ಮಂತ್ರಿ ಪದವಿ ತ್ಯಜಿಸಿದ ಉದಾಹರಣೆ ಇದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳಲು ತಾವೇ ಚುನಾವಣಾ ಪ್ರಚಾರಕ್ಕೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದು ಅವರು ಪ್ರಕಟನೆ ದೂರಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತ ಯಂತ್ರದ ಸ್ಥಗಿತಕ್ಕೆ ಅವಕಾಶ ನೀಡಿರುವುದು ಮತ್ತು ಆಡಳಿತ ಯಂತ್ರವನ್ನು ದಿಕ್ಕು ತಪ್ಪಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪ್ರವಾಸ ಸ್ಥಗಿತಗೊಳಿಸಿ ಅಥವಾ ಚುನಾವಣಾ ಸಮಯದವರೆಗೆ ನಿಮ್ಮ ಸ್ಥಾನವನ್ನು ತೆರವುಗೊಳಿಸಿ ಬೇರೆಯವರನ್ನು ಸಿಎಂ ಮಾಡಿ ಎಂದು ರಮೇಶ್ ಬಾಬು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News