ಹೆಜ್ಜೆ ಮೂಡದ ಹಾದಿಯಲ್ಲಿ ಸುನಂದಾ ಬೆಳಗಾಂವಕರ

Update: 2017-12-24 06:53 GMT

ವಾಸ್ತವ ಜಗತ್ತಿನ ವಿದ್ಯಮಾನಗಳು ಮತ್ತು ಅದರೊಳಗಿನ ಮಾನವ ಸಂಬಂಧಗಳ ಪರಿವೀಕ್ಷಣೆಯೇ ಸುನಂದ ಅವರ ಬರವಣಿಗೆಯ ಪ್ರಬಂಧ ದನಿಯಾಗಿದೆ. ಲೇಖಕಿಯ ಈ ಅವಲೋಕನದಲ್ಲಿ ತ್ರಿಕಾಲಗಳ ಮುಖಾಮುಖಿ ಇದೆ.ಕಳೆದುಹೋದ ಬಾಲ್ಯದ ನೆನಪಿನ ಬುತ್ತಿ ಅಗಾಧವಾಗಿದೆ.


ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಸಮಕಾಲೀನ ಕನ್ನಡ ಲೇಖಕಿಯರಲ್ಲಿ ಒಂದು ಗಣನೀಯ ಹೆಸರು, ಕಳೆದ ಸೋಮವಾರ(ಡಿ.18) ಬೆಂಗಳೂರಿನಲ್ಲಿ ಭವಾಬ್ದಿ ದಾಟಿದ ಶ್ರೀಮತಿ ಸುನಂದಾ ಬಿಂದು ಬೆಳಗಾಂವಕರ. ಧಾರವಾಡದಲ್ಲಿ ಹುಟ್ಟಿ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸುನಂದಾ ಬೆಳಗಾಂವಕರ ಅವರು ಕನ್ನಡ ಲೇಖಕಿಯರ ನಡುವೆ ಒಂದು ಮುಖ್ಯ ಹೆಸರಾಗಿ ಎದ್ದು ಕಾಣುವುದು ಅವರ ಬರವಣಿಗೆಯಲ್ಲಿನ ವಿಶಿಷ್ಟವಾದ ಮಾನವೀಯ ಸಂವೇದನೆಯಿಂದಾಗಿ ಹಾಗೂ ಮಾತೃವಾತ್ಸಲ್ಯದ ವಿಶಿಷ್ಟ ಶೈಲಿಯ ಸ್ವೋಪಜ್ಞತೆಯಿಂದಾಗಿ.

ಸೃಜನಶೀಲ ಲೇಖಕಿಯಾಗಿ ಕಾವ್ಯ, ಕಥೆ, ಕಾದಂಬರಿ,ಲಲಿತ ಪ್ರಬಂಧ, ವ್ಯಕ್ತಿ ಚಿತ್ರಗಳ ರಚನೆಯಲ್ಲಿ ಸಿದ್ಧಹಸ್ತರಾದ ಸುನಂದಾ ಅವರು ಶ್ರೀಮತಿ ಬೆಳಗಾಂವಕರ ಆದ ನಂತರ, ಪತಿಯೊಡಗೂಡಿ ತಮ್ಮ ಜೀವಿತದ ಬಹುಭಾವನ್ನು ಕಳೆದದ್ದು ಪರದೇಶಗಳಲ್ಲಿ. ಬಹುತೇಕ ಜೀವನ ಬೇರೆಬೇರೆ ದೇಶಗಳಲ್ಲ್ಲಿ ಕಳೆದರೂ ತಾಯ್ನಿಡಿನ ಸೆಳೆತ ಉಡಿತುಂಬಿದ ಗಂಟು. ‘ಹುಟ್ಟಿದೂರಿನ ಹುರಿಗಂಟ ನಂಟಿನ ವಾತ್ಸಲ್ಯ’ವನ್ನು ಉಡಿಯಲ್ಲಿ ಕಟ್ಟಿಕೊಂಡೇ ಸಾಗಿದ್ದ ವಿದೇಶಿ ನೆಲದ ಜೀವನದಲ್ಲಿ, ನನ್ನೂರ ಧಾರವಾಡದ ಕೆಂಪು ಜಿಗುಟು ಮಣ್ಣು ಇನ್ನೂ ಹೆಚ್ಚು ಕೆಂಪಾಗುತ್ತಾ,ಅಂಟಾಗುತ್ತ ಹೋಯಿತೇ ಹೊರತು ನನ್ನನ್ನು ಬಿಡಲೇ ಇಲ್ಲ. ಅದು ನನ್ನೂರ ಸೃಷ್ಟಿ ಕೊಟ್ಟ ಭಾಗ್ಯ ಮಾಸದ ನೆನಪಾಗಿ, ಕಾಡುವ ನೆನಪಾಗಿ ಸಂಗಾತಿಯಾಗಿತ್ತು ತೌರು ನೆಲ.

ಪ್ರಾಥಮಿಕ ಶಾಲೆಯಲ್ಲಿ ಕಲಿತ ‘ಕರಿಮರಿನಾಯಿ’ ಕವಿತೆಯಿಂದ ಹಿಡಿದು ‘ಮೇಘದೂತ’ದವರೆಗೆ ಬೇಂದ್ರೆಯವರ ಕಾವ್ಯವನ್ನು ಹೃದ್ಗತಮಾಡಿಕೊಂಡಿದ್ದ ಸುನಂದಾ ಅವರಿಗೆ ಸಾಹಿತ್ಯ ಸಂವೇದನೆಯೂ ಸಹಜಜಾತವಾಗಿತ್ತು. ಸಾಹಿತ್ಯ ಸಂವೇದನೆ ಹುಟ್ಟಿಸಿದ ಬರೆಯುವ ಹಂಬಲಕ್ಕೆ ಪ್ರೋತ್ಸಾಹದ ನೀರೆರೆದವರು ಖ್ಯಾತ ನವ್ಯ ಕವಿ ರಾಮಚಂದ್ರ ಶರ್ಮರು-ಪರದೇಶಿ ನೆಲದಲ್ಲಿ ಸಿಕ್ಕ ಸ್ವದೇಶಿ ಸ್ನೇಹ. ನನ್ನ ಪ್ರತಿಯೊಂದು ಬರವಣಿಗೆಯ ಪ್ರಾರಂಭಕ್ಕೆ ‘ಶ್ರೀ ಗಣೇಶಾಯನಮಃ’ ಎಂಬ ನಮನದೊಂದಿಗೆ ನನ್ನ ತಂದೆತಾಯಿಯರನ್ನು ಸ್ಮರಿಸಿಕೊಳ್ಳುವಂತೆ ನಾನು ಡಾ.ಬಿ.ಸಿ.ರಾಮಚಂದ್ರ ಶರ್ಮಾರನ್ನು ಸ್ಮರಿಸುತ್ತೇನೆ.ಅವರು ನನ್ನ ಬರವಣಿಗೆಯ ದಾರಿಗೆ ಮಹತ್ವದ ತಿರುವು ಕೊಟ್ಟರು.ಅವರ ವಿಶ್ಚಸನೀಯ ಸಲಹೆ, ಪ್ರೋತ್ಸಾಹ, ಹರಿತನುಡಿ ನನ್ನದಾರಿಗೆ ಬೆಳಕನ್ನಿತ್ತವು’ ಎನ್ನುವ ಸುನಂದಾ ಬೆಳಗಾಂವಕರರ ಸೃಜನಶೀಲ ಪ್ರತಿಭೆ ದಾಂಗುಡಿ ಇಡಲಾರಂಭಿಸಿದಾಗ ಭಾವಕೋಶದಲ್ಲಿ ಅಡಗಿ ಕುಳಿತಿದ್ದ ಬಾಲ್ಯದ ಸ್ಮತಿಚಿತ್ರಗಳು,ತಾಯಿ ಹೇಳಿದ ವಿಷಯಗಳು ಕಥೆಯಾಗಿ,ಪ್ರಬಂಧಗಳಾಗಿ ಅಭಿವ್ಯಕ್ತಿ ಪಡೆದವು. ತಾಯಿ,ತಂದೆ,ಕಕ್ಕನವರು ಬಾಲ್ಯದಲ್ಲಿ ಹಚ್ಚಿಟ್ಟ ‘‘ಸವಿ ಸುಂದರ ಸಾವಿರಾರು ನೆನಪಿನ ನಂದಾದೀಪಗಳು ಬರವಣಿಗೆಗೆ ಬೆಳಕಾದವು.’’
   
ಮೂವತ್ತು ವರ್ಷಗಳಷ್ಟು ಕಾಲ ಪರದೇಶಗಳಲ್ಲಿ, ಅನ್ಯಸಂಸ್ಕೃತಿ-ಅನ್ಯ ನಾಗರಿಕತೆಗಳೊಂದಿಗೆ ಬೆರೆತುಕೊಂಡೇ ಬಾಲ್ಯದ ಭಾವಕೋಶದಲ್ಲಿ ಸುಪ್ತವಾಗಿದ್ದ ‘ಮಾನವಿಕಗಳ’ನ್ನು ಬರಹಕ್ಕಿಳಿಸಿದ ಸುನಂದಾ ಅವರು ತೌರುಮನೆಗೆ ಹಿದಿರುಗುವಾಗ ಬರಿಗೈಯಲ್ಲಿ ಬರಲಿಲ್ಲ. ಬರುವಾಗ ಸ್ವರಚಿತ ಸಾಹಿತ್ಯದ ಗಂಟನ್ನೇ ಹೊತ್ತು ತಂದರು. ಈ ಸಂಚಯದಿಂದ ಮೊದಲು ಪ್ರಕಾಶಗೊಂಡದ್ದು,‘ಕಜ್ಜಾಯ’. ಕನ್ನಡದ ಜನಪ್ರಿಯ ಸಾಪ್ತಾಹಿಕ ಒಂದರಲ್ಲಿ ‘ಕಜ್ಜಾಯ’ಪ್ರಕಟಗೊಂಡದ್ದೇ ಸುನಂದಾ ಬೆಳಗಾಂವಕರ ಬೆಳಗಾಗುವುದರಲ್ಲಿ ಕನ್ನಡದ ಜನಪ್ರಿಯ ಲೇಖಕಿಯರ ಸಾಲಿನಲ್ಲಿ ಮುಂಚೂಣಿಯ ಸ್ಥಾನದ ಗೌರವಕ್ಕೆ ಪಾತ್ರರಾದರು.

‘ಕಜ್ಜಾಯ’ದ ರುಚಿಯೊಂದಿಗೆ ಸುಂದರ ಶೈಲಿಯ ಧಾರವಾಡದ ಸೊಗಡಿನ ಭಾಷೆ ಓದುಗರಿಗೆ ಮುದನೀಡಿತು. ಮೊದಲ ಪ್ರಕಟಣೆಯಲ್ಲೇ ಓದುಗರ ಹೃದಯಕ್ಕೆ ಲಗ್ಗೆ ಇಟ್ಟ ಸುನಂದಾ ಅವರ ಜನಪ್ರಿಯತೆಯ ರೇಖೆ ಮುಂದಿನ ದಿನಗಳಲ್ಲಿ ಗಗನಮುಖಿಯಾಗಿ ಏರುತ್ತಲೇ ಹೋಯಿತು. ಸುನಂದಾ ಬೆಳಗಾಂವಕರರ ಪ್ರತಿಭೆ, ಕಾವ್ಯ,ಸಣ್ಣಕಥೆ,ಕಾದಂಬರಿ, ಲಲಿತ ಪ್ರಬಂಧ,ವ್ಯಕ್ತಿ ಚಿತ್ರ ಹೀಗೆ ವಿವಿಧ ಪ್ರಕಾರಗಳಲ್ಲಿ ಪ್ರಯೋಗಶೀಲವಾಗಿ ಸಾಗಿತು.‘ಕಜ್ಜಾಯ’, ‘ಕೈತುತ್ತು’, ‘ಕೊಡುವುದೇನು?ಕೊಂಬುವುದೇನು?’(ಲಲಿತ ಪ್ರಬಂಧಗಳು),‘ಶಾಲ್ಮಲಾ’(ಕವಿತಾ ಸಂಕಲನ),‘ಮೃದ್ಗಂಧ’(ಕಥಾ ಸಂಕಲನ),‘ನಾಸು’, ‘ಝವಾದಿ’,‘ಕಾಯಕ ಕೈಲಾಸ’(ಕಾದಂಬರಿಗಳು)- ಸುನಂದಾ ಅವರ ಮುಖ್ಯ ಕೃತಿಗಳು.

ವಾಸ್ತವ ಜಗತ್ತಿನ ವಿದ್ಯಮಾನಗಳು ಮತ್ತು ಅದರೊಳಗಿನ ಮಾನವ ಸಂಬಂಧಗಳ ಪರಿವೀಕ್ಷಣೆಯೇ ಸುನಂದ ಅವರ ಬರವಣಿಗೆಯ ಪ್ರಬಂಧ ದನಿಯಾಗಿದೆ. ಲೇಖಕಿಯ ಈ ಅವಲೋಕನದಲ್ಲಿ ತ್ರಿಕಾಲಗಳ ಮುಖಾಮುಖಿ ಇದೆ.ಕಳೆದುಹೋದ ಬಾಲ್ಯದ ನೆನಪಿನ ಬುತ್ತಿ ಅಗಾಧವಾಗಿದೆ. ಜೊತೆಗೆ ವರ್ತಮಾನದ ತುಡಿತಗಳೂ ತಳಕು ಹಾಕಿಕೊಳ್ಳುತ್ತವೆ.ಭವಿಷ್ಯದ ಕನಸಿಗಳ ಬಿಂಬಗಳೂ ಸೇರಿಕೊಳ್ಳುತ್ತವೆ. ವಸ್ತುವಿನ ನಿರ್ವಹಣೆಯಲ್ಲಿ ತೋರುವ ಸಂಯಮ ಅವರ ಬರವಣಿಗೆಯ ಪ್ರಧಾನ ಗುಣವಾಗಿದೆ. ವಸ್ತುವಿಷಯ ಎಷ್ಟೇ ಸಂಕೀರ್ಣವಾಗಿರಲಿ, ಸಂದರ್ಭಸನ್ನಿವೇಶಗಳು ಎಷ್ಟೇ ಸ್ಫೋಟಕವಾಗಿರಲಿ ಸುನಂದಾ ಅವರ ನಿರೂಪಣಾ ಶೈಲಿ ಉದ್ವಿಗ್ನಗೊಳ್ಳುವುದಿಲ್ಲ.ಭಾಷೆ ಸೊಕ್ಕುವುದಿಲ್ಲ.

ಅಹಂ ಇದ್ದರೂ ಮೆಲುಸ್ತರದಲ್ಲಿ, ಮಾನವೀಯತೆಯ ಸರಹದ್ದಿನಲ್ಲಿ. ಕೋಪಾವೇಶ,ಆಕ್ರೋಶಗಳಿಲ್ಲ,ಅಬ್ಬರ ಆರ್ಭಟಗಳಿಲ್ಲ,ಎಡ-ಬಲ-ಸ್ತ್ರೀ ವಿಮೋಚನೆ ಇತ್ಯಾದಿಗಳ ಘೋಷ-ಉದ್ಘೋಷಗಳಿಲ್ಲ. ಬದುಕೇ ಬಾಯ್ತರೆದು ಮಾತಾಡಿದಂಥ ನೈಜತೆ. ಭಾವ ತೀವ್ರತೆಯಿದ್ದರೂ ಅದು ಶಾಲ್ಮಲೆಯಂತೆ (ಧಾರವಾಡದ ನದಿ ಶಾಲ್ಮಲಾ ಲೇಖಕಿಯ ಹುಟ್ಟಿದೂರಿನ ಮತ್ತೊಂದು ಆಪ್ತ ನಂಟು) ಗುಪ್ತಗಾಮಿನಿ.ಮಾತೃವಾತ್ಸಲ್ಯದ ಅಂತ:ಕರಣ ತಟ್ಟುವ ಶೈಲಿ ಅವರ ವಿಶೇಷ ಛಾಪು. ಈ ಮಾತುಗಳಿಗೆ ನಿದರ್ಶನವಾಗಿ ಅವರ ಕೃತಿಗಳನ್ನೇ ನೋಡಬಹುದು.

‘ನಾಸು’ ಮತ್ತು ‘ಝವಾದಿ’ ಕಾದಂಬರಿಗಳ ವಸ್ತು ಏಕಕಾಲಕ್ಕೆ ಕುಟುಂಬ ವತ್ಸಲವೂ ಸ್ತ್ರೀ ಕುರಿತ ಸಮಕಾಲೀನ ಚಿಂತನೆಗಳ ಎಳೆಗಳ ನೇಯ್ಗೆಯೂ ಆಗಿದ್ದು, ಇದರ ನಿರ್ವಹಣೆಯಲ್ಲಿ ಸುನಂದಾ ಬೆಳಗಾವಕರರ ಬರವಣಿಗೆಯಲ್ಲಿನ ಸಂಯಮ ಮತ್ತು ಪಕ್ಷಪಾತಿಯಾಗದ ಪ್ರಬುದ್ಧ ದೃಷ್ಟಿಕೋನದಿಂದಾಗಿ ಈ ಕೃತಿಗಳು ಗಮನಾರ್ಹವಾಗಿವೆ. ‘ನಾಸು’ಕಾದಂಬರಿಯಲ್ಲಿ ಪುರುಷಪ್ರಧಾನ ಮೌಲ್ಯಗಳ ಜಗತ್ತು ಮತ್ತು ಮಾನವೀಯ ಅಂತ:ಕರಣ, ಸೇವಾಪ್ರಧಾನವಾದ ಸ್ತ್ರೀ-ಈ ಎರಡು ಜಗತ್ತುಗಳನ್ನು ಲೇಖಕಿ ಮುಖಾಮಖಿಯಾಗಿಸುತ್ತಾರಾದರೂ ಇದನ್ನು ಬಿಂಬಿಸುವುದರ ಹಿಂದಿನ ಮನಸ್ಸು ಪುರುಷರು ಶೋಷಕರು,ಮಹಿಳೆಯರು ಶೋಷಿತರು ಎಂದು ದೂಷಿಸುವ ನೆಲೆಯದ್ದಲ್ಲ. ಪರ್ವಾಗ್ರಹಗಳಿಂದ ಮುಕ್ತವಾಗಿ ಬದುಕಿನ ಎಲ್ಲ ಮುಖಗಳನ್ನೂ ಕಲಾತ್ಮಕವಾಗಿ ಚಿತ್ರಿಸುವ ಶ್ರದ್ಧೆಯೇ ಇಲ್ಲಿ ಮೇಲುಗೈ ಪಡೆಯುತ್ತದೆ.

ಎರಡನೆಯ ಕಾದಂಬರಿ ‘ಝವಾದಿ’ ನೇರವಾಗಿ ಸ್ತ್ರೀ-ಪರುಷ ಸಂಬಂಧಗಳ ಏರಿಳಿತಗಳನ್ನು ನಿರೂಪಿಸುತ್ತದೆ. ನಲುಗದ ದಾಂಪತ್ಯದಲ್ಲೂ ತಲೆದೋರುವ ವಿರಸವನ್ನು ಎದುರಿಸುವುದರಲ್ಲಿ ಪತ್ನಿ ತಾಳುವ ನಿಲುವು ಮತ್ತು ಪತಿಯ ಮನೆಯವರೇ ಸಂಶಯಿತ ಪತ್ನಿಯ ಪರವಾಗಿ ನಿಲ್ಲುವುದರಲ್ಲಿ ಲೇಖಕಿಯ ಹೊಸಕಾಣ್ಕೆ ಢಾಳವಾಗಿ ಗೋಚರಿಸುತ್ತದೆ. ಪತಿಯೇ ದೈವ, ಅವನ ವಿಚಾರಗಳೇ ಮಹಾಪ್ರಸಾದ ಎನ್ನುವ ಸಾಂಪ್ರದಾಯಿಕ ಮನೋಭಾವಕ್ಕೆ ವಿರುದ್ಧವಾಗಿ ಗಂಡನನ್ನು ‘ದಿವ್ಯ’ಕ್ಕೊಡ್ಡಿ ನೋಡುವ ಹೆಂಡತಿಯ ದೃಢ ವ್ಯಕ್ತಿತ್ವದಿಂದಾಗಿ ‘ಝವಾದಿ’ ಸ್ತ್ರೀ ವಿಮೋಚನೆಯತ್ತ ಒಂದು ಹೆಜ್ಜೆ ಮುಂದಿಟ್ಟಂತೆ ಕಾಣುತ್ತದೆ. ಸ್ತ್ರೀಯೊಳಗಣ ಗಟ್ಟಿತನವನ್ನು, ಸತ್ಯ ಪರೀಕ್ಷಿಸುವ ದಿಟ್ಟತನವನ್ನು ಬಿಂಬಿಸುವುದರಲ್ಲೂ ಲೇಖಕಿ ಕೌಟುಂಬಿಕ ಪ್ರೀತಿವಾತ್ಸಲ್ಯಗಳ ದನಿ ಅಡಗದಂತೆ ತಮ್ಮ ಬರವಣಿಗೆಯ ಮೂಲ ಗುಣವನ್ನು ಕಾಪಾಡಿಕೊಳ್ಳುತ್ತಾರೆ.

ಬಸವಣ್ಣನ ಕಾಯಕ ತತ್ವದ ಮಹತ್ವವನ್ನು ಸೋದೋಹರಣವಾಗಿ ಸಾಕಾರಗೋಳಿಸುವ ‘ಕಾಯಕ ಕೈಲಾಸ’ ಒಂದು ಬೃಹತ್ ಕಾದಂಬರಿ.ಶಾಲ್ಮಲಿಯ ಸುತ್ತಲ ಸುಂದರ ಪರಿಸರ, ಉತ್ತರ ಕರ್ನಾಟಕದ ದೇಸಿಯ ಸೊಗಡು, ಸೋಗುಸೋಗಲಾಡಿತನಗಳಿಲ್ಲದೆ ಸಾಲುಸಾಲಾಗಿ ಬರುವ ಮಣ್ಣಿನ ಮಕ್ಕಳು, ಅಂತಃಕರಣ ಮಿಡಿವ ಅವರ ಕಾಯಕಬದ್ಧ ಬದುಕಿನ ಏಳುಬೀಳುಗಳ ಪ್ರಾಂಜಲ ಚಿತ್ರಣದಿಂದಾಗಿ ‘ಕಾಯಕ ಕೈಲಾಸ’ಪ್ರಿಯವಾಗುತ್ತದೆ. ಲಲಿತ ಪ್ರಬಂಧ ಸುನಂದಾ ಅವರ ಜೀವನಾನುಭವ ಮತ್ತು ಪ್ರತಿಭೆಯ ಬೀಸಿಗೆ ಆಡುಂಬೊಲದಂತೆ ಒಲಿದುಬಂದಿದೆ. ಕೌಟುಂಬಿಕ ಆಪ್ತವಲಯದ ಬರಹಗಳ ಒಂದು ವಿಶಿಷ್ಟ ಛಾಪನ್ನು ಸುನಂದಾ ಅವರ ಲಲಿತ ಪ್ರಬಂಧಗಳಲ್ಲಿ ನಾವು ಕಾಣುತ್ತೇವೆ. ‘ಕಜ್ಜಾಯ’,‘ಕೈತುತ್ತು’,‘ಕೊಡುವುದೇನು?ಕೊಂಬುದೇನು?’ ಸಂಕಲನಗಳು ಈ ಮಾತಿಗೆ ಉತ್ತಮ ನಿದರ್ಶನಗಳಾಗಿ ನಿಲ್ಲುತ್ತವೆ. ಈ ಮೂರು ಸಂಕಲನಗಳಲ್ಲಿನ ಬರಹಗಳು ದೇಶ-ಕಾಲಮಾನಗಳ ದೃಷ್ಟಿಯಿಂದ ಇವತ್ತಿನ ತಲೆಮಾರಿನವರಿಗೆ ವಿಚಿತ್ರವೂ ವಿಸ್ಮಯಕಾರಿಯೂ ಆಗಿ ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

ಈ ಬರಹಗಳ ಕಾಲ ಬಹುಮಟ್ಟಿಗೆ ಸ್ವಾತಂತ್ರ್ಯಪೂರ್ವದ ಕಾಲ. ಈ ಕಾಲಘಟ್ಟದ ಭಾರತೀಯ ಕೌಟುಂಬಿಕ ಬಹುಸಂಸ್ಕೃತಿಯ ಒಂದು ಮಾದರಿ ಎನ್ನಬಹುದಾದ ಬದುಕು ಇಲ್ಲಿ ಅನಾವರಣಗೊಂಡಿದೆ. ಇಲ್ಲಿನ ಬದುಕು,ಜನ ಕುಟುಂಬ ವತ್ಸಲರು, ‘ವಸುಧೈವ ಕುಟುಂಬಕಂ’ಎಂದು ನಂಬಿದವರು. ಈ ಜೀವನ ಮೌಲ್ಯವನ್ನು ದೀಪ ತೆಗೆದುಕೊಂಡು ಹುಡುಕಬೇಕಾದಂಥ ಇಂದಿನ ಪರಿಸ್ಥಿತಿಯಲ್ಲಿ, ಮಾರಾಟ ಸಂಸ್ಕೃತಿಯಲ್ಲಿ ಪ್ರೀತಿವಾತ್ಸಲ್ಯಗಳನ್ನು ಕಳೆದುಕೊಂಡಿರುವ ಇಂದಿನವರಿಗೆ ಸುನಂದಾ ಅವರ ಈ ಬರಹಗಳು ಚೋದ್ಯವೆನಿಸುವುದಕ್ಕೆ ಇವಕ್ಕಿಂತ ಹೆಚ್ಚಿನ ಬೇರೆ ಕಾರಣಗಳು ಬೇಕಿಲ್ಲ. ಆದಾಗ್ಯೂ ಕಳೆದುಕೊಂಡ ಪ್ರೀತಿ ವಾತ್ಸಲ್ಯಗಳನ್ನು ಅರಸುತ್ತಿರುವವರಿಗೆ ಈ ಬರಹಗಳಲ್ಲಿ ಅಮ್ಮನ ಅಪ್ಪುಗೆಯ ಬೆಚ್ಚಗಿನ ಹಿತದ ಅನುಭವವಾದರೂ ಅಚ್ಚರಿಪಡಬೇಕಾಗಿಲ್ಲ.

ಈ ಸಂಕಲನಗಳ ಹೆಸರುಗಳಲ್ಲೇ ಪ್ರೀತಿ ವಾತ್ಸಲ್ಯಗಳ ಸ್ರೋತವಿದೆ, ಜೀವನದರ್ಶನವಿದೆ. ‘ಕಜ್ಜಾಯ’ದ ಸವಿ ಅದು ನಿರೂಪಿಸುವ ಜೀವನಾನುಭವಗಳ ರಸಘಟ್ಟಿ. ‘ಕೈತುತ್ತು’ ತಾಯಿಯ ಪ್ರೀತಿ-ವಾತ್ಸಲ್ಯಗಳ ಸಮರ್ಥ ರೂಪಕ. ‘ಕೈತುತ್ತು’ ಕೇಂದ್ರ ಪಾತ್ರ ಅಜ್ಜಿ. ಹದಿನೈದು ಮೊಮ್ಮಕ್ಕಳ ಈ ಅಜ್ಜಿಯ ಅನುಭವ ಭಂಡಾರವೇ ಇಲ್ಲಿ ತೆರದುಕೊಂಡಿದೆ. ಈ ಅಜ್ಜಿ ತನ್ನ ಮನೆಯ ಸಾಮ್ರಾಜ್ಞಿಯೂ ಹೌದು,ತನ್ನೊಳಗಣ ಪ್ರೀತಿವಾತ್ಸಲ್ಯಗಳ ಒರತೆಯಿಂದಾಗಿ ಸುತ್ತಲ ಜಗತ್ತಿನ ಹೃದಯ ಸಾಮ್ರಾಜ್ಞಿಯೂ ಹೌದು.ಪ್ರೀತಿಯ ಮೂಲಮಾತೃಕೆಯಂತೆ ಕಾಣುವ ಈ ಅಜ್ಜಿಯ ‘ಕೈತುತ್ತು’ ಪ್ರೀತಿವಾತ್ಸಲ್ಯಗಳ ನೆಲೆಯಲ್ಲಿ ಎಡತಾಕುವ ಬದುಕಿನ ವೈವಿಧ್ಯಮಯ ನೋಟಗಳ ವಿಸ್ಮಯ ಲೋಕ.

‘ಕೊಡುವುದೇನು?ಕೊಂಬುದೇನು?’ಸಂಕಲನದ ಬರಹಗಳು ಹೆಚ್ಚಾಗಿ ವ್ಯಕ್ತಿಗತ ನೆಲೆಯ ಚಿತ್ರಗಳು. ಶಲ್ಲಕ್ಕ, ಬೆಲ್ಲದ ಬ್ರಾಹ್ಮಣ, ಹೊನಗನ್ನಿ,ಅಲ್ಲಾಬಕ್ಷ ಇಂಥ ಕರುಣಾಜನಕ ವ್ಯಕ್ತಿಗಳ ಬದುಕನ್ನು ನಿರೂಪಿಸುತ್ತಲೇ ಲೇಖಕಿ ನಮ್ಮ ಅಂತ:ಕರಣದ ತಂತುಗಳನ್ನು ಮೀಟುತ್ತಾರೆ. ಶಾಪಗ್ರಸ್ತರಂತೆ ಕಾಣುವ ಇಂಥ ವ್ಯಕ್ತಿಗಳ ಬಗ್ಗೆ ಇಲ್ಲಿ ಕರುಣೆಮರುಕಗಳಿಗಿಂತ ಹೆಚ್ಚಾಗಿ ಅವರನ್ನು ಸಾಂಭಾಳಿಸುವ ಮಾನವ ಬದುಕಿನ ಪ್ರೀತಿಸಂಬಂಧಗಳಿಂದಾಗಿ ಈ ಸಂಕಲನದ ಬರಹಗಳು ಇಂದಿಗೆ ಹೆಚ್ಚು ಪ್ರಸ್ತುತವಾಗುತ್ತವೆ.

ಮಾನವ ಪ್ರೀತಿ ಕಳಕಳಿಯೇ ಸ್ಥಾಯಿಯಾದ ಇಂಥ ಬರಹಗಳಿಂದ ನಮ್ಮ ಗೌರವಕ್ಕೆ ಪಾತ್ರರಾಗುವ ಶ್ರೀಮತಿ ಸುನಂದಾ ಬೆಳಗಾಂವಕರರ ಪ್ರಕಟಿತ ಕೃತಿಗಳ ಸಂಖ್ಯೆ ಕೈಬೆರಳಣಿಕೆ ದಾಟಲಾರದು(ಎಂಟು).ಅವರಿಗೆ ಸಂದಿರುವ ಪ್ರಶಸ್ತಿಗಳು ಕೃತಿಗಳ ಸಂಖ್ಯೆಯೊಂದಿಗೆ ಸ್ಪರ್ಧಿಸಿರುವಂತೆ ತೋರುತ್ತದೆ.ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ,ಅನುಪಮಾ ನಿರಂಜನ ಪ್ರಶಸ್ತಿ,ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ,ಎಂ.ಕೆ.ಇಂದಿರಾ ಪ್ರಶಸ್ತಿ ಹೀಗೆ ಐದು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಎಂಬತ್ತೆರಡರ ಮಾಗಿದ ವಯಸ್ಸಿನಲ್ಲಿ ಹೆಜ್ಜೆ ಮೂಡದ ಹಾದಿಯಲ್ಲಿ ನಡೆದು ನಮ್ಮನ್ನು ಅಗಲಿರುವ ಶ್ರೀಮತಿ ಸುನಂದಾ ಬೆಳಗಾಂವಕರ ಕನ್ನಡ ಸಾಹಿತ್ಯದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಮೂಡಿಸಿದ್ದಾರೆ 

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News