ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಗೀಳಿನ ಬಗ್ಗೆ ವೈದ್ಯರು ಏನು ಹೇಳುತ್ತಾರೆ...?

Update: 2017-12-24 11:31 GMT

‘ಸೆಲ್ಫಿಟಿಸ್’ ಅಥವಾ ಸಿಕ್ಕಿಸಿಕ್ಕಿದಲ್ಲೆಲ್ಲ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಗೀಳು ಒಂದು ವೈದ್ಯಕೀಯ ಸಮಸ್ಯೆಯಾಗಿದ್ದು, ಅದಕ್ಕೆ ಚಿಕಿತ್ಸೆ ಅಗತ್ಯವಾಗಬಹುದು ಎನ್ನುತ್ತಾರೆ ವೈದ್ಯರು. ಈ ಸ್ಥಿತಿಯಿಂದ ಹೊರಬರಲು ಅವರು ಹಲವಾರು ಸಾಮಾಜಿಕ ಮಾಧ್ಯಮ ನಿರ್ವಿಷೀಕರಣ ಕ್ರಮಗಳನ್ನು ಸೂಚಿಸಿದ್ದಾರೆ.

ಸೆಲ್ಫಿ ಗೀಳಿನಿಂದ ಹೊರಬರಲು ಅವರು ಸೂಚಿಸಿರುವ ಕ್ರಮಗಳಲ್ಲಿ ಪ್ರತಿ ಮೂರು ತಿಂಗಳಿಗೆ ಏಳು ದಿನಗಳ ಕಾಲ ಫೇಸ್‌ಬುಕ್‌ನಿಂದ ದೂರವಿರುವುದು, ವಾರದಲ್ಲೊಂದು ದಿನವಿಡೀ ಸಾಮಾಜಿಕ ಮಾಧ್ಯಮಗಳನ್ನು ಬಳಸದಿರುವುದು ಮತ್ತು ಚಲನೆಯಲ್ಲಿದ್ದಾಗ ಮಾತ್ರ ಮೊಬೈಲ್ ಫೋನ್ ಬಳಕೆ ಇವು ಸೇರಿವೆ. ಕಂಪ್ಯೂಟರ್‌ನ್ನು ದಿನಕ್ಕೆ ಮೂರು ಗಂಟೆಗೂ ಹೆಚ್ಚು ಬಳಸಬಾರದು ಎನ್ನುವುದೂ ವೈದ್ಯರ ಸಲಹೆಯಾಗಿದೆ.

ದಿನದಲ್ಲಿ ನೀವು ಮೊಬೈಲ್‌ನಲ್ಲಿ ಮಾತನಾಡುವ ಸಮಯ ಎರಡು ಗಂಟೆಗಳನ್ನು ಮೀರಬಾರದು ಮತ್ತು ನಿಮ್ಮ ಮೊಬೈಲ್‌ನ್ನು ದಿನಕ್ಕೆ ಒಂದು ಬಾರಿಗಿಂತ ಹೆಚ್ಚು ರಿಚಾರ್ಜ್ ಮಾಡಬಾರದು ಎನ್ನುವುದು ವೈದ್ಯರ ಇತರ ಶಿಫಾರಸುಗಳಾಗಿವೆ. ಮೊಬೈಲ್ ಫೋನ್‌ಗಳು ಸೋಂಕುಗಳ ವಾಹಕಗಳಾಗಿರುವುದರಿಂದ ವೈದ್ಯಕೀಯ ವೃತ್ತಿಯಲ್ಲಿರುವವರು ಪ್ರತಿ ದಿನ ತಮ್ಮ ಮೊಬೈಲ್ ಫೋನ್‌ಗಳನ್ನು ಸೋಂಕುಮುಕ್ತಗೊಳಿಸಬೇಕು ಎಂದೂ ಅವರು ಸೂಚಿಸಿದ್ದಾರೆ.

 ಇತ್ತೀಚಿಗೆ ಈ ನಿರ್ದೇಶಗಳನ್ನು ಬಿಡುಗಡೆಗೊಳಿಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಅಧ್ಯಕ್ಷ ಡಾ.ಕೆ.ಕೆ.ಅಗರವಾಲ್ ಅವರು, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುವುದು ವೈದ್ಯಕೀಯ ಸ್ಥಿತಿಯಾಗಿದೆ ಎನ್ನುವುದನ್ನು ಸಂಶೋಧನೆ ಮತ್ತು ಅಧ್ಯಯನಗಳು ತೋರಿಸಿವೆ. ಸೆಲ್ಫಿ ಗೀಳಿನ ತೀವ್ರತೆಯನ್ನು ನಿರ್ಧರಿಸಲು ಸಂಶೋಧಕರು ‘ಸೆಲ್ಫಿ ಬಿಹೇವಿಯರ್ ಸ್ಕೇಲ್’ನ್ನೂ ಅಭಿವೃದ್ಧಿಗೊಳಿಸಿದ್ದಾರೆ. ಸೆಲ್ಫಿಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ ಎನ್ನುವುದನ್ನು ಅಂಕಿಅಂಶಗಳು ಸೂಚಿಸುತ್ತಿವೆ. ವಿಶ್ವಾದ್ಯಂತ ಸಂಭವಿಸುವ ಒಟ್ಟು ಸೆಲ್ಫಿ ಅವಘಡಗಳಲ್ಲಿ ಶೇ.60ರಷ್ಟು ಭಾರತದಲ್ಲಿಯೇ ಆಗುತ್ತಿವೆ ಎಂದು ಹೇಳಿದರು.

ಸೆಲ್ಫಿಟಿಸ್‌ನ್ನು ಮೂರು ಮಟ್ಟಗಳಲ್ಲಿ ವರ್ಗೀಕರಿಸಲಾಗಿದೆ. ಬಾರ್ಡರ್‌ಲೈನ್ ಅಂದರೆ ದಿನಕ್ಕೆ ಕನಿಷ್ಠ ಮೂರು ಸೆಲ್ಪಿಗಳನ್ನು ಕ್ಲಿಕ್ಕಿಸುವುದು, ಆದರೆ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಿರುವುದು; ಎಕ್ಯೂಟ್ ಅಂದರೆ ದಿನಕ್ಕೆ ಕನಿಷ್ಠ ಮೂರು ಸೆಲ್ಪಿಗಳನ್ನು ಕ್ಲಿಕ್ಕಿಸುವುದು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದು; ಕ್ರಾನಿಕ್ ಅಂದರೆ ಸೆಲ್ಪಿಗಳನ್ನು ಕ್ಲಿಕ್ಕಿಸುವ ನಿರಂತರ ತುಡಿತ ಮತ್ತು ಅವುಗಳಲ್ಲಿ ಕನಿಷ್ಠ ಆರು ಸೆಲ್ಫಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದು.

ಇಂದಿನ ಪೀಳಿಗೆ ಯಾವಾಗಲೂ ಹೊರಗಿನ ಮೆಚ್ಚುಗೆಯನ್ನು ನಿರೀಕ್ಷಿಸುತ್ತಿರುತ್ತದೆ. ಯಾರೂ ಮಾಡಿರದ ಅಥವಾ ಕೆಲವೇ ಜನರು ಮಾಡಿರುವ ಸಾಧನೆಯನ್ನು ತಾವು ಮಾಡಿದ್ದೇವೆ ಎಂದು ಜಗತ್ತಿಗೆ ತೋರಿಸಲು ಯುವಜನರು ಬಯಸುತ್ತಾರೆ. ಹೆಚ್ಚು ಸವಾಲಿನ ಸೆಲ್ಪಿ ಹೆಚ್ಚಿನ ಮೆಚ್ಚಿಗೆಯನ್ನು ಗಳಿಸುತ್ತದೆ. ಇಂತಹ ಸೆಲ್ಫಿಗಳು ತಮ್ಮ ಸಮಾನಮನಸ್ಕರಿಂದ ದಿಢೀರ್ ಅನುಮೋದನೆಯನ್ನು ಪಡೆಯಲು ಅವರಿಗೆ ನೆರವಾಗುತ್ತವೆ ಎನ್ನುತ್ತಾರೆ ಐಎಂಎದ ಗೌರವ ಕಾರ್ಯದರ್ಶಿ ಆರ್.ಎನ್.ಟಂಡನ್.

ತಂತ್ರಜ್ಞಾನವು ಜೀವನವನ್ನು ಪ್ರತಿಯೊಬ್ಬರಿಗೂ ಸುಲಭವನ್ನಾಗಿಸಿದೆಯಾದರೂ ನಿಜವಾದ ಮಾನವೀಯ, ಅನುಭೂತಿಯ ಸಂವಾದಗಳ ಕೊರತೆಯಿದೆ. ಇತರರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಮತ್ತು ನಮ್ಮನ್ನು ಹೇಗೆ ಗ್ರಹಿಸುತ್ತಿದ್ದಾರೆ ಎನ್ನುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲು ನಾವು ಆರಂಭಿಸಿದ್ದೇವೆ. ಇವೆಲ್ಲವೂ ದೀರ್ಘಾವಧಿಯಲ್ಲಿ ತಳಮಳ ಮತ್ತು ಖಿನ್ನತೆಗೆ ಕಾರಣವಾಗಬಲ್ಲವು ಎನ್ನುವುದು ಟಂಡನ್ ಅವರ ವಿವರಣೆ.

ಸಂಯಮ ಅಥವಾ ಮನೋನಿಗ್ರಹ ಮುಖ್ಯವಾಗಿದೆ. ಡಿಜಿಟಲ್ ಅಲೆ ಸ್ವಾಗತಾರ್ಹ, ಆದರೆ ಉತ್ತಮ ಆರೋಗ್ಯವು ನಿರ್ಣಾಯಕವಾಗಿದೆ. ಆರಂಭದಲ್ಲಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸೆಲ್ಫಿ ಗೀಳು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕರವಾಗುವುದು ಖಚಿತ ಎನ್ನುತ್ತಾರೆ ಅಗರವಾಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News