ಜಾಧವ್ ಗೆ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಹೊಂದಲು ಅನುಮತಿಸಲಾಗಿದೆ ಎಂದ ಪಾಕ್

Update: 2017-12-25 07:20 GMT

ಇಸ್ಲಾಮಾಬಾದ್, ಡಿ.25: ಗೂಢಚರ್ಯೆ ಆರೋಪಕ್ಕೊಳಗಾಗಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ಕುಲಭೂಷಣ್ ಜಾಧವ್ ಅವರಿಗೆ ಅಲ್ಲಿನ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಹೊಂದಲು ಅನುಮತಿಸಲಾಗಿದೆ ಎಂದು  ಪಾಕ್ ವಿದೇಶಾಂಗ ಸಚಿವ ಖ್ವಾಜಾ ಮುಹಮ್ಮದ್ ಆಸಿಫ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ. 

ಜಾಧವ್ ಅವರನ್ನು ಭೇಟಿಯಾಗಲು ಬರುವ ಅವರ ಪತ್ನಿ ಮತ್ತು ತಾಯಿಯ ಜೊತೆ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಯೊಬ್ಬರೂ ಇರಲಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಸ್ಥಾನದಲ್ಲಿ ಭಾರತ ಇದ್ದಿದ್ದರೆ ಈ ರೀತಿ ಅನುಮತಿ ನೀಡುತ್ತಿರಲಿಲ್ಲ ಎಂದೂ ಆಸಿಫ್ ಹೇಳಿದ್ದಾರೆ ಎನ್ನಲಾಗಿದೆ.

ಭಾರತೀಯ ಡೆಪ್ಯುಟಿ ಹೈಕಮಿಷನರ್ ಜೆ.ಪಿ. ಸಿಂಗ್  ಅವರು ಜಾಧವ್ ತಮ್ಮ ಕುಟುಂಬ ಸದಸ್ಯರ ಜತೆಗೆ ಮಾತನಾಡುವಾಗ ಹಾಜರಿರುತ್ತಾರೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಈ ಹಿಂದೆ ಹೇಳಿತ್ತು. ಜಾಧವ್ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗುವ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ  ಶಾರ್ಪ್ ಶೂಟರ್ ಗಳನ್ನು ನೇಮಿಸಲಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ. ಈ  ಭೇಟಿ ಯಾವಾಗ ನಡೆಯಬಹುದೆಂದು ತಿಳಿದಿಲ್ಲವಾದರೂ ಅಪರಾಹ್ನ ನಡೆಯಬಹುದೆಂದು ಅಂದಾಜಿಸಲಾಗಿದೆ.

ಆದರೆ ಭಾರತೀಯ ಅಧಿಕಾರಿಗಳು ಮಾತ್ರ ಪಾಕಿಸ್ತಾನವು 'ಕಾನ್ಸುಲಾರ್ ಆ್ಯಕ್ಸೆಸ್' ನೀಡಿಲ್ಲ ಬದಲಾಗಿ ಕೇವಲ ಭಾರತೀಯ ಅಧಿಕಾರಿಯೊಬ್ಬರು ಮಾತ್ರ ಹಾಜರಿರುತ್ತಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News