ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಬೇಡ: ದಿನೇಶ್‌ ಗುಂಡೂರಾವ್

Update: 2017-12-25 12:56 GMT

ಬೆಂಗಳೂರು, ಡಿ.25: ಭೂಪಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿ ನಾಯಕರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಮುಖ್ಯಮಂತ್ರಿ ವಿರುದ್ಧ ಮಾಡಿರುವ ಆರೋಪ ನಿರಾಧಾರವಾದದ್ದು, ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ದೂರಿದರು.

ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯಪಾಲರನ್ನು ರಹಸ್ಯವಾಗಿ ಭೇಟಿ ಮಾಡಿರುವುದು ನೋಡಿದರೆ, ರಾಜಭವನವನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಅನುಮಾನಗಳು ಮೂಡುತ್ತಿವೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಭೂಪಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿಯ ಪಾತ್ರವಿಲ್ಲ. ಇದೊಂದು ಆಧಾರ ರಹಿತವಾದ ಆರೋಪ. ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜ್ ವಿರುದ್ಧ ಮಾಡಿದ್ದ ಡೈರಿ ಆರೋಪ, ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ವಿಚಾರ ಸೇರಿದಂತೆ ಅನೇಕ ಆರೋಪಗಳನ್ನು ಈಗಾಗಲೆ ಕಸದ ಬುಟ್ಟಿಗೆ ಹಾಕಿದ್ದೇವೆ. ಈ ಡಿನೋಟಿಫಿಕೇಷನ್ ಆರೋಪದ ಪರಿಸ್ಥಿತಿಯೂ ಅದೇ ಆಗಲಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಸುಳ್ಳು ಆರೋಪಗಳನ್ನು ಮಾಡುವ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಿ ಕಾಲಹರಣ ಮಾಡುವುದಿಲ್ಲ. ಇದು ಚುನಾವಣೆ ವರ್ಷವಾಗಿರುವುದರಿಂದ ನಮಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಜನತಾ ನ್ಯಾಯಾಲಯದಲ್ಲಿ ಎಲ್ಲ ವಿಷಯಗಳನ್ನು ಮುಂದಿಡಲಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News