ಕೆಎಂಎಫ್ ಭೂಹಗರಣದಲ್ಲಿ ರಾಜೀವ್ ಚಂದ್ರಶೇಖರ್ ಭಾಗಿ: ಎಸ್.ಆರ್.ಹಿರೇಮಠ್ ಆರೋಪ
ಹುಬ್ಬಳ್ಳಿ/ಬೆಂಗಳೂರು, ಡಿ. 25: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೆಎಂಎಫ್ ಭೂ ಹಗರಣದಲ್ಲಿ ತೊಡಗಿಕೊಂಡಿದ್ದು, ಅವರ ಒಡೆತನದಲ್ಲಿರುವ ಪಿವಿಕೆ ಇನ್ಫಾ ಸ್ಟ್ರಕ್ಚರ್ ಪ್ರಾಜೆಕ್ಟ್ ಇಂಡಿಯಾ ಕಂಪೆನಿ ಮೂಲಕ ಬ್ಯಾಂಕಿನಲ್ಲಿ ದಾಖಲೆಗಳನ್ನು ಒತ್ತೆಯಿಟ್ಟು ಸಾಲ ಪಡೆದು ಸರಕಾರವನ್ನು ವಂಚಿಸಿದ್ದಾರೆ ಎಂದು ಸಮಾಜ ಪರಿವರ್ತವಾ ವೇದಿಕೆ ಅಧ್ಯಕ್ಷ ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೋರಮಂಗಲದ ಬಳಿ ಕೆಎಂಎಫ್‌ಗೆ ಸೇರಿರುವ 2.16 ಎಕರೆ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 2007ರಲ್ಲಿ ಕೆಎಂಎಫ್ ಬೋರ್ಡ್ ಸಭೆಯಲ್ಲಿ ಪಿವಿಕೆ ಕಂಪೆನಿಗೆ ಅನುಮತಿ ನೀಡಿದೆ. ಮಂತ್ರಿ ಹೆಬಿಟೆಟ್ ಪ್ರೈವೇಟ್ ಲಿಮಿಟೆಡ್ ಜೊತೆ ಪಿವಿಕೆ ಕಂಪೆನಿ ಕಟ್ಟಡ ಕಟ್ಟಲು ಪರಸ್ಪರ ಒಪ್ಪಂದ ಮಾಡಿಕೊಂಡವು. ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 2014 ಮಾ.11 ರಂದು 50 ಕೋಟಿ ರೂ.ಗಳು ಸಾಲ ಪಡೆದಿದೆ ಎಂದರು.
2017ರ ಜ.4 ರಂದು ಲಕ್ಷ್ಮೀ ವಿಲಾಸ ಬ್ಯಾಂಕ್‌ನಲ್ಲಿ 140 ಕೋಟಿ ಸಾಲ ಪಡೆದ ಪಿವಿಕೆ ಕಂಪೆನಿ ಅದೇ ದಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮಾಡಿದ್ದ 50 ಕೋಟಿ ಸಾಲವನ್ನು ತೀರಿಸಿದೆ. ಸಾಲ ಮರುಪಾವತಿಸಿ ಮತ್ತೊಂದು ಬ್ಯಾಂಕಿನಲ್ಲಿ ಸಾಲ ಪಡೆಯಲು ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ ಭಾಂದವ್ಯ ಸರಿ ಬರಲಿಲ್ಲವೇ ಎಂಬುದನ್ನು ರಾಜೀವ್ ಚಂದ್ರಶೇಖರ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ರಾಜೀವ್ ಚಂದ್ರಶೇಖರ ತಮ್ಮ ಒಡೆತನದ ಪಿವಿಕೆ ಕಂಪೆನಿ ಮೂಲಕ ಕೆಎಂಎಫ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ದುರುಪಯೋಗ ಮಾಡಿಕೊಂಡು ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ. ಈ ಕುರಿತು ರಾಜೀವ್ 15 ದಿನಗಳ ಒಳಗೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.