×
Ad

ನೇರ ತೆರಿಗೆ ಸಂಗ್ರಹದಲ್ಲಿ ರಾಜ್ಯಕ್ಕೆ ಮೂರನೆ ಸ್ಥಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-12-25 19:08 IST

ಧಾರವಾಡ, ಡಿ. 25: ದೇಶದ ಎಲ್ಲ ರಾಜ್ಯಗಳಿಗಿಂತಲೂ ಉತ್ತಮ ನೇರ ತೆರಿಗೆ ಸಂಗ್ರಹ ಮಾಡಿರುವ ಕರ್ನಾಟಕವು ರಾಷ್ಟ್ರದಲ್ಲಿಯೆ ಮೂರನೆ ಸ್ಥಾನಕ್ಕೆ ಏರಿದೆ. ಬಜೆಟ್ ಗಾತ್ರ ಪ್ರತಿವರ್ಷ ಶೇ.10ರಷ್ಟು ಹೆಚ್ಚಾಗುತ್ತಿದೆ. ಕಳೆದ ಐದು ವರ್ಷಗಳಿಂದಲೂ ಕಂದಾಯ ಅಧಿಕವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಸುಮಾರು 79 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಉತ್ತಮ ಆರ್ಥಿಕತೆ ಹೊಂದಿದ ಹಿರಿಮೆ ಕರ್ನಾಟಕ ರಾಜ್ಯಕ್ಕಿದೆ. ಕೃಷಿಭಾಗ್ಯ ಯೋಜನೆಯಡಿ ನಿರ್ಮಾಣಗೊಂಡಿರುವ ಕೃಷಿಹೊಂಡಗಳು ರೈತರಿಗೆ ವರದಾನವಾಗಿವೆ. ರೈತರ, ನೇಕಾರರ ಸಾಲ ಮನ್ನಾ ಮಾಡಿರುವ ಸರಕಾರ ಬರುವ ದಿನಗಳಲ್ಲಿ ನವ ಕರ್ನಾಟಕ ನಿರ್ಮಿಸುವ ಸಂಕಲ್ಪಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ಸರಕಾರದ ಮೌಲ್ಯಮಾಪನ ಮಾಡುತ್ತಾರೆ. ಅನ್ನಭಾಗ್ಯ, ಕ್ಷೆರಭಾಗ್ಯ, ಪಶುಭಾಗ್ಯ, ಮಾತೃಪೂರ್ಣ ಮುಂತಾದ ಯೋಜನೆಗಳು ರಾಜ್ಯದ ಸವಾರ್ಂಗೀಣ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಅವರು ತಿಳಿಸಿದರು. ಮಹಾದಾಯಿ ವಿವಾದ ಇತ್ಯರ್ಥಕ್ಕೆ ನಿಜವಾದ ಕಾಳಜಿ ಇದ್ದರೆ, ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಶಿಷ್ಟಾಚಾರವಿದೆ. ಅದನ್ನು ನೆರೆಯ ರಾಜ್ಯ ಪಾಲಿಸಬೇಕು. ಚರ್ಚೆಗೆ ಸಮಯ ನಿಗದಿಪಡಿಸಲು ಕೋರಿ ಗೋವಾ ಮುಖ್ಯಮಂತ್ರಿ ಗಳಿಗೆ ಮತ್ತೊಂದು ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಭೂ ಸುಧಾರಣಾ ಕಾಯ್ದೆಯ ಉಳುವವನೆ ಭೂ ಒಡೆಯ ಕಾಯ್ದೆಯ ನಂತರ ರಾಜ್ಯದಲ್ಲಿ ಲಂಬಾಣಿ, ಗೊಲ್ಲರ, ನಾಯಕರ ಹಟ್ಟಿಗಳಲ್ಲಿ ವಾಸಿಸುವ ಜನರಿಗಾಗಿ ವಾಸಿಸುವವನೇ ಮನೆ ಒಡೆಯ ಕಾಯ್ದೆ ಜಾರಿಗೊಂಡಿದೆ. ಗುತ್ತಿಗೆಯಲ್ಲಿ ಮೀಸಲಾತಿ ತಂದದ್ದು ಚಾರಿತ್ರಿಕ ಕಾರ್ಯಗಳಾಗಿವೆ. ಬಸವಣ್ಣನವರ ವಿಚಾರಗಳನ್ನು ಪ್ರಚುರ ಪಡಿಸಲು ಕೂಡಲ ಸಂಗಮದಲ್ಲಿ ಅಕ್ಷರಧಾಮ, ಬಸವಕಲ್ಯಾಣದಲ್ಲಿ 300 ಕೋಟಿರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಗರಾಭಿವೃದ್ಧಿ ಸಚಿವ ಆರ್.ರೋಷನ್‌ಬೇಗ್ ಮಾತನಾಡಿ, ಸರ್ವ ಜನಾಂಗ, ಧರ್ಮಗಳ ವಿಕಾಸಕ್ಕಾಗಿ ಸರಕಾರ ಅನುಷ್ಠಾನಗೊಳಿಸಿರುವ ಕಾರ್ಯಗಳು ದೇಶಕ್ಕೆ ಮಾದರಿಯಾಗಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಲಕರ್ಣಿ ಮಾತನಾಡಿ, ಸರಕಾರವು ಜನಪರ ಯೋಜನೆಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದೆ. ಬಡವರಿಗೆ ಆರೋಗ್ಯ, ಆರ್ಥಿಕ ಸವಲತ್ತುಗಳನ್ನು ನೀಡಿದ್ದಾರೆ. ನಿರುದ್ಯೋಗ ನಿವಾರಣೆಗಾಗಿ ಕ್ರಮ ಕೈಗೊಳ್ಳಲಾಗಿದೆ. ನೀರಾವರಿಗೆ ಆದ್ಯತೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ರಾಜ್ಯ ಸಾಂಬಾರು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ, ಹು - ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ್ ಮುಧೋಳ, ಮಾಜಿ ಶಾಸಕ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಐಜಿಪಿ ಡಾ.ಕೆ.ರಾಮಚಂದ್ರರಾವ್, ಜಿ.ಪಂ.ಸಿಇಓ ಸ್ನೇಹಲ್ ಆರ್, ಪೊಲೀಸ್‌ಆಯುಕ್ತ ಎಂ.ಎನ್.ನಾಗರಾಜ, ಎಸ್.ಪಿ.ಸಂಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News